ಮಾನ್ವಿ: ಪಟ್ಟಣದ ರಬ್ಬಣಕಲ್ ಬಳಿ ನಡೆಯುತ್ತಿರುವ ಶಾಶ್ವತ ಕುಡಿಯುವ ನೀರು ಕೆರೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ತಾಕೀತು ಮಾಡಿದರದು.
ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ನಿಗದಿತ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಕೆರೆ ಕಾಮಗಾರಿ ವಿಳಂಬವಾಗಿದೆ ಏಕೆ ಎಂದು ಇಇ ಯುನುಸ್ ಬಾಷ, ಎಇಇ ಎಸ್.ಎಂ. ಪಾಟೀಲ ಹಾಗೂ ಜೆಇ ಆರ್ ಜಿ. ಪಂಚಮುಖೀ ಅವರನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲವಾಗುವ ದೃಷ್ಠಿಯಿಂದ ಕೆರೆ ನಿರ್ಮಾಣಕ್ಕಾಗಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ನೀವು ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಜನರಿಗೆ ನೀರಿನ ತೊಂದರೆ ಮಾಡುತ್ತಿದ್ದೀರಿ. ಇದೆ ರೀತಿ ಮುಂದುವರಿದರೆ ನಿಮ್ಮ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಮಣ್ಣಿನ ಕೊರತೆಯಿಂದಾಗಿ ಕಳೆದ ಎರಡು ತಿಂಗಳುಗಳಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ನಾಳೆಯಿಂದ ಕಾಮಗಾರಿ ಪ್ರಾರಂಭಿಸಲಾಗುವುದು. ಮುಂದಿನ ಎರಡು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕೆಡಬ್ಲ್ಯೂಎಸ್ ಅಧಿಕಾರಿಗಳು ಎನ್.ಎಸ್.ಬೋಸರಾಜು ಅವರಿಗೆ ಸಮಜಾಯಿಸಿ ನೀಡಿದರು. ಮಾಜಿ ಶಾಸಕ ಜಿ. ಹಂಪಯ್ಯ ನಾಯಕ, ಕೆ. ಗುಡದಿನ್ನಿ ಶರಣಯ್ಯ ನಾಯಕ, ರಾಜಾ ವಸಂತ ನಾಯಕ, ಎ. ಬಾಲಸ್ವಾಮಿ ಕೊಡ್ಲಿ, ಬೀರಪ್ಪ ಕಡದಿನ್ನಿ, ಚನ್ನಬಸವ ಕಪಗಲ್, ಪಿ.ಕೆ. ಅಮರೇಶಪ್ಪ, ಜಿಲಾನಿ ಖುರೇಶಿ, ಖಾಲಿದ್ ಖಾದ್ರಿ ಗುರು, ಡಿ.ರಾಮಕೃಷ್ಣ, ಹುಸೇನ್ ಬೇಗ್, ಜಯಪ್ರಕಾಶ, ಮಹಾಂತೇಶಸ್ವಾಮಿ ರೌಡೂರು, ಸಾಬೀರ್ ಪಾಷ, ನಾಗೇಶ ಕಬ್ಬೇರ, ಪ್ರವೀಣ ಕುಮಾರ, ನಾರಾಯಣ ಸ್ವಾಮಿ ಕೋನಾಪುರಪೇಟೆ ಇದ್ದರು.