ಮಾನ್ವಿ: ಭಾರತೀಯ ಪರಂಪರೆಯಲ್ಲಿ ಸಾಹಿತ್ಯಕ್ಕೆ ಉನ್ನತ ಸ್ಥಾನ ನೀಡಲಾಗಿದೆ. ಎಲ್ಲ ಸಾಹಿತ್ಯದ ತಾಯಿ ಬೇರು ಜಾನಪದ ಸಾಹಿತ್ಯವಾಗಿದೆ ಎಂದು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಹೇಳಿದರು.
ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದಿಂದ ಪಟ್ಟಣದ ರೈತ ಭವನದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಅನಕ್ಷರಸ್ಥರ ಸಾಹಿತ್ಯವಾಗಿದ್ದರೂ, ಕಷ್ಟ, ನೋವು, ಸುಖ, ದಣಿವು ಸಂಬಂಧ, ಮಮತೆ ಸೇರಿದಂತೆ ಭಾವನೆಗಳನ್ನು ಆಡು ಭಾಷೆಯಲ್ಲಿ ವಾಸ್ತವ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಹಾಡಲಾಗುತ್ತದೆ. ಇಂತಹ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವಂಥ ಕಾರ್ಯ ಆಗಬೇಕಿದೆ ಎಂದರು.
ಜಾನಪದ ಸಾಹಿತ್ಯ ಇನ್ನೂ ಗ್ರಾಮೀಣ ಭಾಗದಲ್ಲಿ ಮಾತ್ರ ಉಳಿದುಕೊಂಡಿದೆ. ನಮ್ಮ ಸುತ್ತಲಿನ ಜಾನಪದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ತಾಲೂಕಿನ ಕರಡಿಗುಡ್ಡ ದುರುಗಮ್ಮ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಇದು ಹೆಮ್ಮೆಯ ಸಂಗತಿ. ಇಂದಿನ ಮೊಬೈಲ್, ಟಿವಿ ಮಾಧ್ಯಮದ ಪ್ರಭಾವಕ್ಕೆ ಸಿಲುಕಿ ಜಾನಪದ ಸಾಹಿತ್ಯ ಅಳಿವಿನ ಅಂಚಿನಲ್ಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಜಾನಪದ ಸಾಹಿತ್ಯವನ್ನು ಉಳಿಸುವ ಮತ್ತು ಪ್ರತಿಭೆಗಳನು ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯವನ್ನು ಕನ್ನಡ ಜಾನಪದ ಪರಿಷತ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಗಂಗಾಧರ ನಾಯಕ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ಕನ್ನಡ ಜಾನಪ ಪರಿಷತ್ ತಾಲೂಕು ಅಧ್ಯಕ್ಷ ತಾಯಪ್ಪ ಬಿ.ಹೊಸೂರು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಶೈಲಗೌಡ ಮಾತನಾಡಿದರು.
ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ರೋಣ ತಾಲೂಕಿನ ಕೊತಬಾಳದ ಅರುಣೋದಯ ಕಲಾ ತಂಡದಿಂದ ಜಾನಪದ ಹಾಡು ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಜೆಡಿಎಸ್ ಯುವ ಮುಖಂಡ ರಾಜಾರಾಮಚಂದ್ರ ನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮಾರಡ್ಡಿ ಭೋಗಾವತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಿವಶಂಕರಗೌಡ ಬಾಗಲವಾಡ, ಕಜಾಪ ಉಪಾಧ್ಯಕ್ಷ ಕೆ.ಈ. ನರಸಿಂಹ, ಪದಾಧಿ ಕಾರಿಗಳಾದ ಬಸವರಾಜ ಭೋಗಾವತಿ, ಹ್ಯಾರಿಸ್ ಕೊಕ್ಲೃಕಲ್, ಶ್ರೀಕಾಂತ ಪಾಟೀಲ ಗೂಳಿ, ನಾಗರಾಜ ಕೊಳ್ಳಿ, ಪ್ರಕಾಶ ಬಾಬು, ಲಕ್ಷ್ಮಣ ಜಾನೇಕಲ್ ಇತರರು ಉಪಸ್ಥಿತರಿದ್ದರು.