Advertisement

ಆರೋಗ್ಯ ಉಪಕೇಂದ್ರ ಕಟ್ಟಡಕ್ಕೆ ಖಾಸಗಿ ವ್ಯಕ್ತಿ ಬೀಗ

12:23 PM Mar 19, 2020 | Naveen |

ಮಾನ್ವಿ: ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ 2014ರಲ್ಲಿ ನಿರ್ಮಿಸಿದ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರದ ಕಟ್ಟಡಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಬೀಗ ಜಡಿದಿದ್ದರಿಂದ ಇಲ್ಲಿನ ವೈದ್ಯರು ಹಳೇ ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

Advertisement

ಕೊಕ್ಲೃಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಂದಿಹಾಳ, ಹಿರೇಕೊಕ್ಲೃಕಲ್‌, ಸಂಗಾಪುರ, ಕರಡಿಗುಡ್ಡ ಸೇರಿ ನಾಲ್ಕು ಉಪ ಕೇಂದ್ರಗಳಿವೆ. ಕರಡಿಗುಡ್ಡ ಗ್ರಾಮದಲ್ಲಿ 2012-13ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, 2014ರಲ್ಲೇ ಪೂರ್ಣಗೊಂಡಿದೆ.

ಈಗಾಗಲೇ ಆರು ವರ್ಷಗಳೆ ಕಳೆದಿದ್ದರೂ ಇದುವರೆಗೆ ಗುತ್ತಿಗೆದಾರರು ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿಲ್ಲ. ಹೀಗಾಗಿ ಇಲ್ಲಿನ ವೈದ್ಯರಿಗೆ ಚಿಕಿತ್ಸೆ ನೀಡಲು ಸ್ಥಳಾವಕಾಶವಿಲ್ಲದಂತಾಗಿದೆ. ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷéದಿಂದ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಟ್ಟಡಕ್ಕೆ ಬೀಗ: ಕರಡಿಗುಡ್ಡ ಆರೋಗ್ಯ ಉಪ ಕೇಂದ್ರಕ್ಕೆ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಬೀಗ ಜಡಿದಿದ್ದಾರೆ. ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದ ಮೆಕೋ ಕನ್‌ ಸ್ಟ್ರಕ್ಷನ್ಸ್‌ ಬೇರೊಬ್ಬ ಗುತ್ತಿಗೆದಾರನಿಗೆ ಉಪ ಗುತ್ತಿಗೆ ನೀಡಿತ್ತು. ಉಪ ಗುತ್ತಿಗೆ ಪಡೆದ ಗುತ್ತೇದಾರರು ತಮ್ಮ ಬಳಿ ಸಾಲ ಪಡೆದುಕೊಂಡಿದ್ದಾರೆ. ಆತ ಸಾಲ ವಾಪಸ್‌ ನೀಡಿಲ್ಲ. ಹಣ ನೀಡಿದರೆ ಕಟ್ಟಡ ಬಿಟ್ಟುಕೊಡುವುದಾಗಿ ಖಾಸಗಿ ವ್ಯಕ್ತಿ ಹೇಳುತ್ತಿದ್ದಾರೆನ್ನಲಾಗಿದೆ. ಅಲ್ಲದೆ ಉಪ ಗುತ್ತೇದಾರ ಈಗಾಗಲೇ ಮೃತಪಟ್ಟಿದ್ದಾರೆ ಎಂಬ ಮಾತಗಳು ಕೇಳಿಬರುತ್ತಿವೆ. ಹೀಗಾಗಿ ಸಾಲ ನೀಡಿದ ಖಾಸಗಿ ವ್ಯಕ್ತಿಗೆ ಆರೋಗ್ಯ ಉಪ ಕೇಂದ್ರದ ಕಟ್ಟಡಕ್ಕೆ ಬೀಗ ಹಾಕಿಕೊಂಡಿದ್ದಾರೆ. ಕೇಳಿದರೆ ಜಗಳಕ್ಕೆ ಬರುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಅಂಗನವಾಡಿ ಕಟ್ಟಡದಲ್ಲಿ ಚಿಕಿತ್ಸೆ: ಕೇಂದ್ರ ಸರ್ಕಾರಿ ಇತ್ತೀಚೆಗೆ ಪ್ರತಿ 5 ಸಾವಿರ ಜನಸಂಖ್ಯೆ ಇರುವ ಆರೋಗ್ಯ ಉಪ ಕೇಂದ್ರಗಳಿಗೆ ಎಂಎಲ್‌ಎಚ್‌ಪಿ (ಮಿಡಲ್‌ ಲೆವಲ್‌ ಹೆಲ್ತ್‌ ಪ್ರೊವೈಡರ್‌) ಎಂಬ ವೈದ್ಯರನ್ನು ನೇಮಕ ಮಾಡಿದೆ. ಅದರಂತೆ ಕರಡಿಗುಡ್ಡ ಆರೋಗ್ಯ ಉಪ ಕೇಂದ್ರಕ್ಕೂ ಎಂಎಲ್‌ಎಚ್‌ಪಿ ನೇಮಕ ಮಾಡಲಾಗಿದೆ.

Advertisement

ಇವರಿಗೆ ಕಾರ್ಯ ನಿರ್ವಹಿಸಲು ಸ್ಥಳ ಇಲ್ಲದ್ದರಿಂದ ಗ್ರಾಮದ ಹಳೇ ಅಂಗನವಾಡಿ ಕಟ್ಟಡದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಗಾಗಿ ಬಾಡಿಗೆ ಕಟ್ಟಡ ಹುಡುಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಆಸ್ಪತ್ರೆ ಕಟ್ಟಡವನ್ನು ವಶಕ್ಕೆ ಪಡೆದು ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಆರೋಗ್ಯ ಇಲಾಖೆಯ ಆರೋಗ್ಯ ಉಪ ಕೇಂದ್ರ ಕಟ್ಟಡಗಳ ನಿರ್ಮಾಣಕ್ಕೆ ಪ್ಯಾಕೇಜ್‌ ಟೆಂಡರ್‌ ಪಡೆದುಕೊಂಡಿದ್ದೇವು. ಸಂಪೂರ್ಣ ಪ್ಯಾಕೇಜ್‌ ಕಾಮಗಾರಿಯನ್ನು ಇಲಾಖೆಗೆ ಹಸ್ತಾಂತರಿಸಿದ್ದೇವೆ. ಪ್ರತ್ಯೇಕವಾಗಿ ಒಂದೊಂದು ಕಟ್ಟಡಗಳನ್ನು ಹಸ್ತಾಂತರಿಸುವ ಅವಶ್ಯಕತೆ ಇಲ್ಲ. ಇಲಾಖೆ ಅಧಿಕಾರಿಗಳು ಮುಂದಾಗಿ ಕಟ್ಟಡ ವಶಕ್ಕೆ ಪಡೆದುಕೊಳ್ಳಬೇಕು. ನಮ್ಮದೇನೂ ಇಲ್ಲ.
ಎಂ.ಈರಣ್ಣ,
ಅಧ್ಯಕ್ಷರು, ಮೆಕೋ ಕನ್‌ಸ್ಟ್ರಕ್ಷನ್ಸ್‌, ಮಾನ್ವಿ

ಇದು ತುಂಬಾ ಹಳೇ ಪ್ರಕರಣವಾಗಿದೆ. ನನಗೆ ಸರಿಯಾದ ಮಾಹಿತಿ ಇಲ್ಲ. ಕರಡಿಗುಡ್ಡ ಆರೋಗ್ಯ ಉಪ ಕೇಂದ್ರದ ಬಗ್ಗೆ ಮಾನ್ವಿ ತಾಲೂಕು ವೈದ್ಯಾಧಿಕಾರಿಗಳ ಜೊತೆಗೆ ಚರ್ಚಿಸಿದ್ದೇನೆ. ಕಟ್ಟಡಕ್ಕೆ ಸಂಬಂಧಿ ಸಿದ ದಾಖಲೆಗಳನ್ನು ಪರಿಶೀಲಿಸಲಾಗುವುದು. ನಂತರ ಕಟ್ಟಡ ವಶಕ್ಕೆ ಪಡೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
ರಾಮಕೃಷ್ಣ,
ಜಿಲ್ಲಾ ವೈದ್ಯಾಧಿಕಾರಿ, ರಾಯಚೂರು

„ರವಿ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next