Advertisement

ಚರಂಡಿ ಸ್ವಚ್ಛತೆ ಮರೆತ ಮಾನ್ವಿ ಪುರಸಭೆ

05:40 PM May 27, 2019 | Naveen |

ಮಾನ್ವಿ: ಪಟ್ಟಣದ ಚರಂಡಿಗಳು ಕಸ ಮತ್ತು ಹೂಳು ತುಂಬಿಕೊಂಡಿದ್ದು, ನೀರು ನಿಂತಲ್ಲೆ ನಿಲ್ಲುತ್ತಿದೆ. ನೀರು ಮುಂದಕ್ಕೆ ಹರಿಯದೆ ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರು ನರಕಯಾತನೆ ಅನುಭಸುತ್ತಿದ್ದು, ಪುರಸಭೆ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Advertisement

ಪಟ್ಟಣದ ಒಟ್ಟು 27 ವಾರ್ಡ್‌ಗಳಲ್ಲಿಯೂ ಚರಂಡಿಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡದೆ ಇರುವುದರಿಂದ ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಮಳೆಯಾದರೆ ಚರಂಡಿ ನೀರು ರಸ್ತೆ ಮೇಲೆ ಹರಿಯಲು ಪ್ರಾರಂಭವಾಗುತ್ತದೆ. ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಾಗಿ ಹಳೆ ಪಟ್ಟಣದಲ್ಲಿ ಮತ್ತು ಇನ್ನೂ ಅಭಿವೃದ್ಧಿಯಾಗದ ಹೊಸ ಕಾಲೋನಿ, ಸ್ಲಂಗಳಲ್ಲಿ ಎಲ್ಲೆಂದರಲ್ಲೆ ನೀರು ನಿಲ್ಲುವ ಮೂಲಕ ದುರ್ವಾಸನೆ ಶುರುವಾಗುತ್ತದೆ. ಇದು ಪ್ರತಿ ವರ್ಷ ಮರುಕಳಿಸುವ ಸಮಸ್ಯೆಯಾಗಿದ್ದರೂ ಪುರಸಭೆ ಮಾತ್ರ ಮಳೆಗಾಲಕ್ಕೂ ಮುನ್ನ ಮುನ್ನಚ್ಚರಿಕೆ ಕ್ರಮವಾಗಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗುವುದಿಲ್ಲ.

ಕಸ-ಹೂಳು: ಪಟ್ಟಣದ ಚರಂಡಿಗಳು ಕಸ ಮತ್ತು ಹೂಳು ತುಂಬಿಕೊಂಡಿವೆ. ಪಟ್ಟಣದ ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯಲ್ಲಿ ಚರಂಡಿಗಳಂತೂ ಕಸದ ತೊಟ್ಟಿಗಳಾಗಿವೆ. ಈ ರಸ್ತೆಯಲ್ಲಿ ಅಂಗಡಿಗಳ ತ್ಯಾಜ್ಯವನ್ನು ಚರಂಡಿಗೆ ಹಾಕಲಾಗುತ್ತಿದೆ. ಇನ್ನೂ ಕೆಲ ಚರಂಡಿಗಳು ಹೂಳು ತುಂಬಿಕೊಂಡು ನೀರು ಮುಂದೆ ಹರಿಯದಂತೆ ಮುಚ್ಚಿಹೋಗಿವೆ. ಜೋರಾಗಿ ಮಳೆ ಬಂದಲ್ಲಿ ಪಟ್ಟಣದ ಹಳೆ ಸರ್ಕಾರಿ ಆಸ್ಪತ್ರೆ ಮುಂದಿನ ಚರಂಡಿ, ಚಕ್ರವರ್ತಿ ರೆಸ್ಟೋರೆಂಟ್ ಮುಂದಿನ ಚರಂಡಿ, ಸಿಮೆಂಟ್ ರೋಡ್‌ನ‌ಲ್ಲಿ, ಬಸ್‌ ನಿಲ್ದಾಣದ ಹಿಂದಿನ ಇಂದ್ರಾಜಿ ನಗರ, ಫಾತಿಮಾ ನಗರ, ಆದಾಪುರಪೇಟೆಯಲ್ಲಿ ಚರಂಡಿಗಳು ತುಂಬಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತದೆ. ಇನ್ನೂ ಕೆಲವಡೆ ವ್ಯವಸ್ಥಿತ ಚರಂಡಿಗಳೆ ಇಲ್ಲ.

ದುರ್ವಾಸನೆ: ಅಲ್ಲದೆ ಚರಂಡಿಗಳು ಹೂಳು ಮತ್ತು ಕಸ ತುಂಬಿಕೊಳ್ಳುತ್ತಿರುವುದರಿಂದ ನೀರು ಮುಂದೆ ಹರಿಯದೆ ನಿಂತಲ್ಲೆ ನಿಲ್ಲುತ್ತದೆ. ಇದರಿಂದಾಗಿ ದುರ್ವಾಸನೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಚರಂಡಿ ಪಕ್ಕದಲ್ಲಿನ ಮನೆಗಳ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರತಿ ತಿಂಗಳು ಹೂಳು ತೆಗೆಯುವುದಿಲ್ಲ. ಕೆಲವೊಮ್ಮೆ ಹೂಳು ಮತ್ತು ಕಸವನ್ನು ತೆಗೆದು ಕೂಡಲೇ ಸ್ಥಳಾಂತರಿಸದೆ, ವಾರಗಟ್ಟಲೆ ಮನೆ ಮುಂದಿನ ಚರಂಡಿ ಪಕ್ಕದಲ್ಲೆ ಬಿಡುತ್ತಾರೆ. ಇದರಿಂದ ತೀವ್ರ ಹಿಂಸೆಯಾಗುತ್ತದೆ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

ರೋಗದ ಭೀತಿ: ಒಂದೆಡೆ ಸಾರ್ವಜನಿಕ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅನೇಕ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದೆ. ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ವಾರಕ್ಕೊಮ್ಮೆಯಾದರೂ ಮನೆಯಲ್ಲಿನ ನೀರು ಬದಲಿಸಿಕೊಳ್ಳಿ, ಪರಿಸರ ರಕ್ಷಿಸಿ, ಎಂದೆಲ್ಲ ಹೇಳುತ್ತಿದೆ. ಆದರೆ ಇನ್ನೊಂದಡೆ ಪುರಸಭೆ ಮಾತ್ರ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ರಸ್ತೆ, ಚರಂಡಿಗಳನ್ನು ಸ್ಚಚ್ಛವಾಗಿಡಬೇಕಾದ ಪುರಸಭೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಪಟ್ಟಣದಲ್ಲಿ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯನಲ್ಲಿ ಜನರು ಕಾಲಕಳೆಯುತ್ತಿದ್ದಾರೆ.

Advertisement

ತೀವ್ರ ಮಳೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುವ ಮುನ್ನ ಸಂಬಂಧಿಸಿದ ಪುರಸಭೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂಜಾಗೃತ ಕ್ರಮವಾಗಿ ಚರಂಡಿಗಳ ಸ್ವಚ್ಛತೆಗೆ ಮುಂದಾಗಬೇಕಿದೆ. ಮಳೆಯಾದಾಗ ಚರಂಡಿಗಳು ತುಂಬಿಕೊಂಡು ದುರ್ವಾಸನೆ ಬೀರುವವರೆಗೂ ನಿರ್ಲಕ್ಷ್ಯ ವಹಿಸದೆ, ಕೂಡಲೇ ಚರಂಡಿಗಳಲ್ಲಿನ ಹೂಳು, ಕಸ ತೆಗೆಯುವ ಕೆಲಸ ಮಾಡಬೇಕು. ಕನಿಷ್ಠಪಕ್ಷ ಮಳೆಗಾಲದಲ್ಲಾದರೂ ಪಟ್ಟಣದ ಚರಂಡಿಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಇದರಿಂದಾಗಿ ಜನರು ಸಾಂಕ್ರಾಮಿಕ ರೋಗದ ಭಯವಿಲ್ಲದೆ ಬದುಕಬಹುದಾಗಿದೆ.

ಪಟ್ಟಣದಲ್ಲಿ ಚರಂಡಿಗಳ ನಿರ್ವಹಣೆ ಕೊರತೆ ಕಂಡು ಬರುತ್ತಿದೆ. ಜಯನಗರದ ಅನೇಕ ಚರಂಡಿಗಳು ಮುಚ್ಚಿ ಅದೆಷ್ಟೋ ತಿಂಗಳುಗಳೇ ಕಳೆದಿದ್ದರೂ ಹೂಳು, ಕಸ ತೆಗೆಯಲು ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಜಯನಗರ ರಸ್ತೆಯಲ್ಲಿನ ಚರಂಡಿಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಾಣ ಮಾಡದೆ ಇರುವುದರಿಂದ ನೀರು ಮುಂದಕ್ಕೆ ಹರಿಯುತ್ತಿಲ್ಲ. ಮಳೆಗಾಲ ಪ್ರಾರಂಭವಾಗುತ್ತಿದ್ದು, ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು.
•ಚನ್ನಬಸವ ಬ್ಯಾಗವಾಟ,
ಪಟ್ಟಣ ನಿವಾಸಿ

ಈಗಾಗಲೇ ಕೆಲವಡೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇನ್ನೂ ಯಾವುದಾದರೂ ಚರಂಡಿಗಳು ಸ್ವಚ್ಛತೆಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ ಕೂಡಲೇ ಹೂಳು, ಕಸ ತೆಗೆಸಲಾಗುವುದು. ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ ಕೆಲವಡೆ ಚರಂಡಿಗಳ ನಿರ್ಮಾಣ ಬಾಕಿ ಇದ್ದು, ಅನುದಾನ ಬಂದರೆ ಕಾಮಗಾರಿ ಕೈಗೊಳ್ಳಲಾಗುವುದು.
•ಕೆ. ವಿಜಯಲಕ್ಷ್ಮೀ,
ಮುಖ್ಯಾಧಿಕಾರಿಗಳು ಪುರಸಭೆ, ಮಾನ್ವಿ

ರವಿ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next