ಮಾನ್ವಿ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿಗಳ ವಸತಿ ನಿಲಯ ಪಟ್ಟಣದ ಹೊರವಲಯದ ಗೋದಾಮಿನಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ವಾರ್ಡನ್ ಸೇರಿದಂತೆ ಯಾವುದೇ ಅಧಿಕಾರಿಗಳು ಈ ಕಡೆ ಬಾರದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಬಸ್ ನಿಲ್ದಾಣದಿಂದ ಗೋದಾಮು ಸುಮಾರು 2 ಕಿಮೀ ದೂರದಲ್ಲಿದೆ. ಇಲ್ಲಿ 100 ವಿದ್ಯಾರ್ಥಿಗಳಿದ್ದಾರೆ. ಅಲ್ಲಿಂದ ಪಟ್ಟಣದ ಪದವಿ ಕಾಲೇಜುಗಳಿಗೆ ಬರಬೇಕಾದರೆ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಸರ್ಕಾರಿ ಪದವಿ ಕಾಲೇಜು ಈ ವಸತಿ ನಿಲಯದಿಂದ 5 ಕಿಮೀ ದೂರದಲ್ಲಿದೆ. ನಿತ್ಯ ಕಾಲೇಜು ತಲುಪಲು ವಿದ್ಯಾರ್ಥಿಗಳು ವಾಹನ ಕಾಯುವುದರಕ್ಕೆ ಸಮಯ ವ್ಯರ್ಥ ಮಾಡುತ್ತಿದ್ದಾರೆ.
ಇನ್ನೂ ಗೋದಾಮಿನಲ್ಲಿ ಮೂಲಸೌಲಭ್ಯವೇ ಇಲ್ಲವಾಗಿದೆ. ಗಾಳಿ, ಬೆಳಕು, ಸ್ನಾನದ ಗೃಹಗಳು, ಶೌಚಾಲಯಗಳು ಸರಿಯಾದ ನಿರ್ವಹಣೆ ಇಲ್ಲದೆ ದುರ್ವಾಸನೆ ಬೀರುತ್ತಿವೆ. ಸ್ನಾನದ ಗೃಹ, ಶೌಚಾಲಯ, ಕೋಣೆಗಳನ್ನು ಸ್ವಚ್ಛ ಮಾಡಿಸುವುದೇ ಇಲ್ಲ. ವಿದ್ಯಾರ್ಥಿಗಳು ಕಸ ಗುಡಿಸಿಕೊಳ್ಳಬೇಕು. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ವಾರ್ಡನ್ ಇತ್ತ ಕಡೆ ಬರುವುದೇ ಇಲ್ಲ. ತಾಲೂಕು ಕಚೇರಿಗೆ ಹೋದರೆ ಮೇಲಧಿಕಾರಿಗಳೇ ಇಲ್ಲ. ಮೊಬೈಲ್ ಯಾವಾಗಲೂ ಸ್ವಿಚ್ಡ್ ಆಫ್, ನಾಟ್ರಿಚೇಬಲ್ ಆಗಿರುತ್ತದೆ. ಒಟ್ಟಿನಲ್ಲಿ ಅನಿವಾರ್ಯ ಕಾರಣದಿಂದಾಗಿ ವಸತಿ ನಿಲಯದಲ್ಲಿ ಇರುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಹಾಸ್ಟೆಲ್ಗೆ ಬರುವ ಅನುದಾನ ಮಾತ್ರ ಎತ್ತುವಳಿ ಆಗುತ್ತಲೆ ಇದೆ. ಕಿರಾಣಿ, ತರಕಾರಿ, ಶುದ್ಧ ಕುಡಿಯುವ ನೀರು, ಕಟ್ಟಿಗೆ ಸೇರಿದಂತೆ ವಿವಿಧ ಕಾರಣಗಳಿಗೆ ಹಣ ಪಾವತಿಯಾಗುತ್ತಿದೆ. ಆದರೆ ಆಹಾರ ಪದಾರ್ಥಗಳ ಸರಬರಾಜು ಮಾಡಲು ಯಾರಿಗೆ ಟೆಂಡರ್ ನೀಡಲಾಗಿದೆ ಎನ್ನುವ ಮಾಹಿತಿ ಇಲ್ಲ. ಇನ್ನಾವುದೇ ಅಂಗಡಿಯಿಂದ ಪದಾರ್ಥಗಳನ್ನು ತರಲಾಗುತ್ತಿದೆ. ಬೋಗಸ್ ದಾಖಲೆ ಸೃಷ್ಟಿಸಿ ಹಣ ಎತ್ತುವಳಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಸಮಾಜ ಕಲ್ಯಾಣ ಇಲಾಖೆಯ ಪದವಿ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯದ ಅವ್ಯವಸ್ಥೆಗೆ ವಿದ್ಯಾರ್ಥಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಮಾಹಿತಿ ಇದ್ದರೂ, ಅಲ್ಲದೆ ಅನೇಕರು ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ್‌ಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರೂ ಮೇಲಧಿಕಾರಿಗಳು ಈ ಕಡೆ ಗಮನ ಹರಿಸಿ ವಿದ್ಯಾರ್ಥಿಗಳ ಪರದಾಟ ತಪ್ಪಿಸಬೇಕಿದೆ.
ವಸತಿ ನಿಲಯದ ಅವ್ಯವಸ್ಥೆ ಬೇಸರ ತರಿಸಿದೆ. ವಾರ್ಡನ್ ವಿದ್ಯಾರ್ಥಿಗಳ ಸಮಸ್ಯೆ ಕೇಳುವುದಿಲ್ಲ. ಸಮಸ್ಯೆ ಬಗೆಹರಿಸಬೇಕಾದ ಮೇಲಧಿಕಾರಿಗಳೇ ಸಿಗುವುದಿಲ್ಲ. ಇಲ್ಲಿ ಅಡುಗೆದಾರರದ್ದೆ ದರ್ಬಾರ್. ಸ್ನಾನದ ಗೃಹಗಳು, ಶೌಚಾಲಯಗಳು ದುರ್ವಾಸನೆ ಬೀರುತ್ತಿದ್ದು, ಶೌಚಕ್ಕೆ ಬಯಲಿಗೆ ಹೋಗುತ್ತಿದ್ದೇವೆ. ಈ ಎಲ್ಲ ಸಮಸ್ಯೆಗಳ ಕುರಿತು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದರೂ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರೆ.
•ನೊಂದ ವಿದ್ಯಾರ್ಥಿಗಳ ಆರೋಪ
ಡಾ.ಬಿ.ಆರ್.ಅಂಬೇಡ್ಕರ್ ಪದವಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನೂತನ ಕಟ್ಟಡ ಸಿದ್ಧವಾಗಿದೆ. ಮುಂದಿನ ಸೆಮಿಸ್ಟರ್‌ನಿಂದ ವಿದ್ಯಾರ್ಥಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ವಾರ್ಡನ್‌ಗೆ ಮೂರ್‍ನಾಲ್ಕು ಹಾಸ್ಟೆಲ್ ಜವಾಬ್ದಾರಿ ನೀಡಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿರಬಹುದು. ತಾಲೂಕಾಧಿಕಾರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸುತ್ತೇನೆ.
•ಪ್ರಶಾಂತ,
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ರಾಯಚೂರು.
ರವಿ ಶರ್ಮಾ