ರವಿ ಶರ್ಮಾ
ಮಾನ್ವಿ: ಡಾ| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ತಾಲೂಕಿನಾದ್ಯಂತ ಭೂ ರಹಿತರಿಗೆ ಭೂಮಿ ಹಂಚಿಕೆಗಾಗಿ ಭೂಮಿ ಖರೀದಿ ಮತ್ತು ಭೂರಹಿತ ಫಲಾನುಭವಿಗಳ ಆಯ್ಕೆಯಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಂಚಿತ ಫಲಾನುಭವಿಗಳು ದೂರಿದ್ದಾರೆ.
ಡಾ| ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಭೂ ರಹಿತರಿಗೆ ಭೂಮಿ ನೀಡುವ ಯೋಜನೆಯಡಿ ಭೂ ರಹಿತರನ್ನು ಕಡೆಗಣಿಸಿ ಅನರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಇಲಾಖೆಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ತನಿಖೆ ನಡೆಯುತ್ತಿಲ್ಲ ಎಂದು ದೂರಿದ್ದಾರೆ.
ನಿಯಮ ಉಲ್ಲಂಘನೆ: ಇನ್ನು ಭೂ ರಹಿತರಿಗೆ ಭೂಮಿ ಹಂಚಿಕೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ. ನೀರಾವರಿ ಇಲಾಖೆಯಿಂದ ದೃಢೀಕರಣ, ಭೂರಹಿತರ ಆಯ್ಕೆ, ಗ್ರಾಮಸಭೆ, ಭೂಮಿ ಪರಿಶೀಲನೆ, ನೀರಾವರಿ, ಖುಷ್ಕಿ ಆಧಾರದ ಮೇಲೆ ಬೆಲೆ ನಿಗದಿ, ಕಮಿಟಿಯಿಂದ ಪರಿಶೀಲನೆ ಸೇರಿದಂತೆ ನಿಯಮಗಳನ್ನು ಗಾಳಿಗೆ ತೂರಿ ಭೂಮಿ ಹಂಚಿಕೆ ಮಾಡಲಾಗುತ್ತಿದೆ. ಫಲಾನುಭವಿಗಳ ಆಯ್ಕೆಗೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅಲ್ಲದೆ ಭಾರಿ ಪ್ರಮಾಣ ಲಂಚದ ಆರೋಪ ಕೇಳಿ ಬರುತ್ತಿವೆ.
ಲಂಚಕ್ಕೆ ಬೇಡಿಕೆ-ದೂರು: ತಾಲೂಕಿನ ಹಿರೇಕೊಕ್ಲೃಕಲ್ ಗ್ರಾಮದ ಬಿ.ಎಸ್.ವಿ. ಸತ್ಯನಾರಾಯಣ ತಂದೆ ಅಮ್ಮಿರಡ್ಡಿ ಎಂಬುವರು ಎಸ್‌ಟಿ ನಿಗಮಕ್ಕೆ ಸರ್ವೇ ನಂಬರ್ 49ರ 6 ಎಕರೆ ಹಾಗೂ ಸರ್ವೇ ನಂ. 102ರಲ್ಲಿ 2 ಎಕರೆ ಭೂಮಿ ನೀಡಿದ್ದಾರೆ. ಸರ್ಕಾರದಿಂದ ಬಾಕಿ ಹಣ ಬರಬೇಕಿದೆ. ಅದನ್ನು ನೀಡಲು ಜಿಲ್ಲಾ ವ್ಯವಸ್ಥಾಪಕ ವೈ.ಎ. ಕಾಳೆ ತಮ್ಮ ಮಧ್ಯವರ್ತಿಗಳ ಮೂಲಕ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿ ಸಹಾಯಕ ಆಯುಕ್ತರಿಗೆ ಬಿ.ಎಸ್.ವಿ. ಸತ್ಯನಾರಾಯಣ ಅಮ್ಮಿರೆಡ್ಡಿ ಅವರು ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರು ಎಸ್‌ಟಿ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆದಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ.
ಮಧ್ಯವರ್ತಿಗಳ ಕೈವಾಡ: ಡಾ| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಭೂಮಿ ಖರೀದಿ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ಇಲಾಖೆ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಒಟ್ಟಾರೆ ತಾಲೂಕಿನಾದ್ಯಂತ ಬಲ್ಲಟಗಿ, ಕಲ್ಲೂರು, ಮದ್ಲಾಪುರ, ಗವಿಗಟ್, ಜಾನೇಕಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭೂಮಿ ಹಂಚಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಕುರಿತು ದಲಿತಪರ ಹೋರಾಟಗಾರ ಬಸವರಾಜ ನಕ್ಕುಂದಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಗೂ ದೂರು ಸಲ್ಲಿಸಿದ್ದರು. ಆದರೆ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮವಾಗಿಲ್ಲ. ಈಗಲಾದರೂ ಭೂಮಿ ಹಂಚಿಕೆ ಅವ್ಯವಹಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಭೂ ವಂಚಿತರು ಆಗ್ರಹಿಸಿದ್ದಾರೆ.
ಮಾರಾಟ ಮಾಡಿದ ಭೂಮಿ ಮಾಲೀಕರಿಗೆ ಮೊದಲು ಶೇ.80 ಹಣ ಸಂದಾಯ ಮಾಡಲಾಗುತ್ತದೆ. ನಂತರ ಉಳಿದ ಶೇ.20 ಹಣವನ್ನು ನೀಡಲಾಗುತ್ತದೆ. ಇದನ್ನೇ ಬಿ.ಎಸ್.ವಿ. ಸತ್ಯನಾರಾಯಣರು ತಪ್ಪಾಗಿ ತಿಳಿದಿದ್ದಾರೆ. ಈ ಬಗ್ಗೆ ಅವರಿಗೆ ತಿಳಿಸಲಾಗಿದೆ. ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ 2013-14ರಲ್ಲಿ ನಿಯಮಗಳನ್ನು ಬದಲಾಯಿಸಲಾಗಿದೆ. ವಿಧವೆ, ಅಂಗವಿಕಲರು, ವೃದ್ಧರಿಗೆ ಆದ್ಯತೆ ನೀಡಬೇಕಿದ್ದರಿಂದ ಕೆಲವರನ್ನು ಕೈ ಬಿಡಬೇಕಾಗುತ್ತದೆ. ಭೂಮಿ ಹಂಚಿಕೆ ಕುರಿತು ಜಿಲ್ಲಾ ಕಮಿಟಿಯಲ್ಲಿ ಚರ್ಚಿಸಲಾಗುತ್ತದೆ. ಯಾವುದೇ ಅವ್ಯವಹಾರ ನಡೆಯುತ್ತಿಲ್ಲ.
•
ವೈ.ಎ.ಕಾಳೆ,
ಜಿಲ್ಲಾ ವ್ಯವಸ್ಥಾಪಕರು ರಾಯಚೂರು
ಡಾ| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಭೂ ರಹಿತರಿಗೆ ಭೂಮಿ ನೀಡುವ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ. ಜಿಲ್ಲಾಧಿಕಾರಿಗೆ, ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
•ಬಸವರಾಜ ನಕ್ಕುಂದಿ,
ದಲಿತ ಪರ ಹೋರಾಟಗಾರರು ಮಾನ್ವಿ