Advertisement
ಮಹಾನಗರ ಪ್ರದೇಶದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ ಮತ್ತು ಸವಾಲಾಗಿದೆ. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಣ ಮತ್ತು ಹಸಿ ಕಸವನ್ನಾಗಿ ವಿಂಗಡಿಸಬೇಕೆಂಬ ನಿಯಮವಿದ್ದರೂ ಯಾರು ಸರಿಯಾಗಿ ಪಾಲಿಸುತ್ತಿಲ್ಲ. ಮೇಲಾಗಿ ವೈಜ್ಞಾನಿಕ ಕಸ ವಿಲೇವಾರಿಯನ್ನು ಪಾಲಿಕೆ ಸಿಬ್ಬಂದಿಯೇ ಮಾಡುವುದಿಲ್ಲ. ಪಾಲಿಕೆ ಸಿಬ್ಬಂದಿಯೇ ಮಾಡದ ಮೇಲೆ ನಾವೇನು ಮಾಡೋದು ಎನ್ನುವ ಉತ್ತರ ಸಾರ್ವಜನಿಕರಿಂದ ಕೇಳಿಬರುತ್ತಿದೆ.
Related Articles
Advertisement
” ಸ್ವಚ್ಛ ಕಲಬುರಗಿ’ಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕಾರ್ಯ ನಿರ್ವಹಿಸುವುದು ಅತ್ಯವಶ್ಯಕವಾಗಿದೆ. ಈ ಪ್ರಯುಕ್ತ ಪಾಲಿಕೆ ಅಧೀನದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ” ಸ್ವಚ್ಛತಾ ಆ್ಯಪ್’ ಡೌನ್ ಲೋಡ್ ಮಾಡಿಕೊಳ್ಳಬೇಕು. ಮನೆ ಮತ್ತು ಉದ್ಯಾನದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹಸಿ ಕಸ ಹೊರಗೆ ಬಿಸಾಡಬಾರದು ಎಂದು ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವೇತನ ತಡೆಹಿಡಿಯುವ ಎಚ್ಚರಿಕೆ
ಮನೆ ಮತ್ತು ಉದ್ಯಾನದಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಹೊರಗೆ ಬಿಸಾಡದೆ ಉದ್ಯಾನದ ಪ್ರದೇಶದಲ್ಲೇ ಕಡ್ಡಾಯವಾಗಿ ಕಂಪೋಸ್ಟ್ ಪಿಟ್ ಅಥವಾ ಪೈಪ್ ಕಂಪೋಸ್ಟ್ ಘಟಕ ನಿರ್ಮಿಸಿ, ಅದರಲ್ಲಿ ಹಸಿ ಕಸ ಸಂಗ್ರಹಿಸಬೇಕು. ಅದರಿಂದ ಗೊಬ್ಬರ ತಯಾರಿಸಿ ಅದರ ಸದುಪಯೋಗ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ. ಕಂಪೋಸ್ಟ್ ಘಟಕ ನಿರ್ಮಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಕಂಪೋಸ್ಟ್ ಘಟಕ ನಿರ್ಮಿಸಿಕೊಳ್ಳದೇ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವೇತನ ತಡೆಹಿಡಿಯಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಕಂಪೋಸ್ಟ್ ಘಟಕ ನಿರ್ಮಿಸಲು ಮತ್ತು ತಯಾರಿಸುವ ಬಗ್ಗೆ ಪಾಲಿಕೆ ಪರಿಸರ ಅಭಿಯಂತರರಾದ ಮರಿಯಾ ಅದನ ಮತ್ತು ಸುಷ್ಮಾ ಅವರನ್ನು ಸಂಪರ್ಕಿಸುವಂತೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಏನಿದು ಕಾಂಪೋಸ್ಟ್ ಘಟಕ?
ಮನೆಯಲ್ಲಿ ಉತ್ಪತ್ತಿಯಾಗುವ ಮತ್ತು ಮನೆಯ ಉದ್ಯಾನದಲ್ಲಿ ಬಿದ್ದ ಎಲೆಗಳ ಹಸಿ ತ್ಯಾಜ್ಯ ಬಳಸಿ ಗೊಬ್ಬರ ಉತ್ಪನ್ನ ಮಾಡುವುದೇ ಕಾಂಪೋಸ್ಟ್ ಘಟಕ. ಮನೆಯಲ್ಲಿ ಸ್ಥಳಾವಕಾಶವಿದ್ದಲ್ಲಿ ಗುಂಡಿ ತೋಡಿಕೊಳ್ಳುವುದು, ಇಲ್ಲವಾದಲ್ಲಿ ಮಧ್ಯಮ ಗ್ರಾತದ ಡಬ್ಬ ಮತ್ತು ಪೈಪ್‌ಗ್ಳನ್ನು ತೆಗೆದುಕೊಂಡು ಗಾಳಿಯಾಡುವಂತೆ ರಂಧ್ರ ಹಾಕಲಾಗುತ್ತದೆ. ಇದರಲ್ಲಿ ನೊಣ, ಸೊಳ್ಳೆಗಳು ನುಸುಳದಂತೆ ನೋಡಿಕೊಳ್ಳಬೇಕಾಗುತ್ತದೆ. ಮೊದಲಿಗೆ ಘಟಕದ ಅಡಿಯಲ್ಲಿ ಸೆಗಣಿ, ಬೆಲ್ಲ ಮತ್ತು ಬದಾಮಿ, ಅರಳೆ ಗಿಡದ ಎಲೆಗಳು ಹಾಕಬೇಕಾಗುತ್ತದೆ. ನಂತರ ಈ ಘಟಕದಲ್ಲಿ ಅಡುಗೆ ಮನೆಯಲ್ಲಿ ಬಳಸಿ ಉಳಿಯುವ ತರಕಾರಿ, ಆಹಾರ ಪದಾರ್ಥ, ಹಣ್ಣುಗಳ ಸಿಪ್ಪೆ ಸೇರಿ ಹಸಿ ಕಸಿ ಹಾಕುವ ಮೂಲಕ ಗೊಬ್ಬರ ಉತ್ಪನ್ನವಾಗುತ್ತದೆ. ಇದೇ ಗೊಬ್ಬರವನ್ನು ಕೈತೋಟ ಮತ್ತು ಸಸಿಗಳಿಗೆ ಬಳಸಬಹುದು. ಈಗಾಗಲೇ ಇಂತಹ ಕಂಪೋಸ್ಟ್ ಘಟಕಗಳನ್ನು ಓಂನಗರ ಮತ್ತು ಅಕ್ಕಮಹಾದೇವಿ ನಗರದ ಕೆಲ ನಿವಾಸಿಗಳು ತಮ್ಮ ಮನೆಗಳಲ್ಲಿ ನಿರ್ಮಿಸಿ ಗೊಬ್ಬರ ಉತ್ಪಾದಿಸುವಲ್ಲಿ ಮಾದರಿಯಾಗಿದ್ದಾರೆ.
ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಣ ಮತ್ತು ಹಸಿ ಕಸವನ್ನಾಗಿ ವಿಂಗಡಿಸಿ, ಹಸಿ ಕಸದಿಂದ ಗೊಬ್ಬರ ತಯಾರಿಸುವಂತೆ ಆಗಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಅಧೀನದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಮಾದರಿಯಾಗಬೇಕೆಂಬ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದೆ. ಬಾಡಿಗೆ ಮನೆಯಲ್ಲಿರುವ ನೌಕರರು ತಮ್ಮ ಮನೆ ಮಾಲೀಕರ ಮನವೊಲಿಸಿ ಅವರಿಂದಲೂ ಗೊಬ್ಬರ ತಯಾರಿಸಬೇಕು. -ಸ್ನೇಹಲ್ ಸುಧಾಕರ್ ಲೋಖಂಡೆ, ಆಯುಕ್ತರು, ಮಹಾನಗರ ಪಾಲಿಕೆ
-ರಂಗಪ್ಪ ಗಧಾರ