ಬೆಂಗಳೂರು: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನ ನಿವೃತ್ತ ಸಿಇಒ ವಾಸುದೇವ ಮಯ್ಯ ಪ್ರಕರಣ ಈಗ ಸಿಐಡಿಗೆ ವರ್ಗಾವಣೆಯಾಗಿದೆ. ಬ್ಯಾಂಕ್ ನಲ್ಲಿ ನಡೆದಿರುವ ಅಕ್ರಮಗಳಿಗೆ ಆಡಳಿತ ಮಂಡಳಿಯೇ ನೇರ ಹೊಣೆ ಈ ಮೂಲಕ ತನ್ನ ತಂದೆಯ ಆತ್ಮಹತ್ಯೆಗೆ ಕಾರಣರಾದ 11 ಮಂದಿಯ ವಿರುದ್ಧ ವಾಸುದೇವ ಮಯ್ಯ ಅವರ ಪುತ್ರಿ ದೂರು ನೀಡಿದ್ದಾರೆ.
ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಆರೋಪದ ಕುರಿತು ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲೇ ಮಣೂರು ವಾಸುದೇವ ಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಡೆತ್ ನೋಟ್ ಬರೆದಿದ್ದು, ಅದರಲ್ಲಿ ಬ್ಯಾಂಕ್ ಅವ್ಯವಹಾರಗಳ ಬಗ್ಗೆ ಉಲ್ಲೇಖಿಸಿದ್ದರು ಎನ್ನಲಾಗಿದೆ.
ಸದ್ಯ ಅವರ ಪುತ್ರಿ ಸುಬ್ರಹ್ಮಣ್ಯ ಪುರಂ ಠಾಣೆಯಲ್ಲಿ ದೂರು ನೀಡಿದ್ದು, ಬ್ಯಾಂಕ್ ಆಡಳಿತ ಮಂಡಳಿಯ 11 ಜನರೇ ಇದಕ್ಕೆ ಕಾರಣ ಎಂದಿದ್ದಾರೆ. ಪ್ರಸ್ತುತ ಸಿಇಓ, , ರವಿ ಐತಾಳ್, ಶ್ರೀಪಾದ ಹೆಗಡೆ, ಪ್ರಶಾಂತ್, ರಾಕೇಶ್ ಸೇರಿದಂತೆ 11 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಬ್ಯಾಂಕ್ ವಹಿವಾಟಿನ ಬಗ್ಗೆ ತಿಳುವಳಿಕೆ ಇರದ ವಾಸುದೇವ ಮಯ್ಯ ಸಹೋದ್ಯೋಗಿಗಳಿಗೆ ಕಂಪ್ಯೂಟರ್ ಪಾಸ್ ವರ್ಡ್ ನೀಡಿದ್ದರು. ದೂರಿನಲ್ಲಿ ಹೇಳಿರುವ ವ್ಯಕ್ತಿಗಳು ತಂದೆಯವರಿಗೆ ಮಾನಸಿಕ ಕಿರುಕುಳ ನೀಡಿ, ಅವರು ಮಾಡದೇ ಇರುವ ತಪ್ಪಿಗೆ ಹೊಣೆಗಾರರನ್ನಾಗಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಾಸುದೇವ ಮಯ್ಯ ಅವರು ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಸಿಇಓ ಆಗಿದ್ದ ವೇಳೆ ಯಾವುದೇ ದಾಖಲೆ ಇಲ್ಲದೆ ಕೋಟ್ಯಾಂತರ ರೂ ಸಾಲ ನೀಡಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಕಳೆದ ತಿಂಗಳ 18ರಂದು ಎಸಿಬಿ ಅಧಿಕಾರಿಗಳು ಕೇಂದ್ರ ಕಚೇರಿ ಸೇರಿದಂತೆ ಐದಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದರು. ಈ ಕುರಿತು ತನಿಖೆ ನಡೆಯುತ್ತಿರುವಾಗಲೇ ಜುಲೈ ಆರರಂದು ಪೂರ್ಣಪ್ರಜ್ಞಾ ಪಾರ್ಕ್ ಬಳಿ ಕಾರಿನಲ್ಲಿ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.