Advertisement

ಉತ್ಪಾದನ ವಲಯದಲ್ಲಿ ಜಿಗಿತ: ಆರ್ಥಿಕತೆಗೆ ಮತ್ತಷ್ಟು ಬಲ

01:39 AM May 03, 2024 | Team Udayavani |

ಹೊಸ ಆರ್ಥಿಕ ವರ್ಷದ ಮೊದಲ ತಿಂಗಳಲ್ಲೂ ದೇಶದ ಉತ್ಪಾದನ ವಲಯವು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ಹಣಕಾಸು ವರ್ಷಾಂತ್ಯದ ಮಾಸವಾದ ಮಾರ್ಚ್‌ನಲ್ಲಿ ದೇಶದ ಉತ್ಪಾದನ ವಲಯದ ಪರ್ಚೇಸಿಂಗ್‌ ಮ್ಯಾನೇಜರ್ ಇಂಡೆಕ್ಸ್‌(ಪಿಎಂಐ) 16 ವರ್ಷಗಳಲ್ಲಿಯೇ ಗರಿಷ್ಠ, ದಾಖಲೆಯ 59.1ರಷ್ಟಿದ್ದರೆ, ಎಪ್ರಿಲ್‌ನಲ್ಲಿ ಇದು ಕೊಂಚ ಇಳಿಕೆಯನ್ನು ಕಂಡಿದ್ದರೂ 58.8 ಸೂಚ್ಯಂಕದೊಂದಿಗೆ ಒಟ್ಟಾರೆಯಾಗಿ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಈ ಮೂಲಕ ದೇಶದ ಉತ್ಪಾದನ ರಂಗದ ಚಟುವಟಿಕೆಗಳು ಪ್ರಸಕ್ತ ವರ್ಷದಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳುವ ಸುಳಿವು ನೀಡಿದ್ದು, ಇದರಿಂದ ಜಿಎಸ್‌ಟಿ, ಜಿಡಿಪಿ ಮತ್ತು ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆಯನ್ನು ನೀಡಲಿದೆ.

Advertisement

ಗುರುವಾರದಂದು ಎಚ್‌ಎಸ್‌ಬಿಸಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯ ಪ್ರಕಾರ ದೇಶೀಯ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು, ಹಣದುಬ್ಬರ ನಿಯಂತ್ರಣದಲ್ಲಿರುವುದರ ಪರಿಣಾಮ ತಯಾರಿಕ ವಲಯ ಚೇತರಿಕೆಯ ಹಾದಿಯಲ್ಲಿ ದಾಪುಗಾಲಿಟ್ಟಿದೆ. ಇದೇ ವೇಳೆ ತಯಾರಿಕ ವೆಚ್ಚದಲ್ಲಿಯೂ ಒಂದಿಷ್ಟು ಇಳಿಕೆ ಕಂಡುಬಂದಿರುವುದು ಉತ್ಪಾದನ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಉತ್ಪಾದನ ವಲಯದಲ್ಲಿನ ಬಹುತೇಕ ಕಂಪೆನಿಗಳಿಗೆ ಹೊಸ ವಹಿವಾಟುಗಳು ಕುದುರಿದ ಪರಿಣಾಮ ಅವುಗಳು ತಮ್ಮ ಉತ್ಪಾದನ ಪ್ರಮಾಣವನ್ನು ಹೆಚ್ಚಿಸಿವೆ. ದೇಶೀಯ ಮಾರುಕಟ್ಟೆ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಚೇತೋಹಾರಿ ಬೆಳವಣಿಗೆಯನ್ನು ಕಾಣುತ್ತಿರುವುದು ಮತ್ತು ವಿದೇಶಿ ಮಾರುಕಟ್ಟೆಗಳಿಂದಲೂ ಭಾರತದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದು ಕೂಡ ದೇಶದ ತಯಾರಿಕ ಕ್ಷೇತ್ರ ಪ್ರಗತಿ ಪಥದಲ್ಲಿ ದಾಪುಗಾಲಿಡಲು ಸಹಕಾರಿಯಾಗಿದೆ. ಇದೇ ವೇಳೆ ಬೇಡಿಕೆ ಮತ್ತು ಉತ್ಪಾದನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಕಂಪೆನಿಗಳಲ್ಲಿನ ಕಚ್ಚಾ ವಸ್ತುಗಳ ದಾಸ್ತಾನು ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇವೆಲ್ಲವೂ ದೇಶದ ಉತ್ಪಾದನ ವಲಯ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿಯನ್ನು ಹೊಂದಲಿದೆ ಎಂಬುದರ ಮುನ್ಸೂಚನೆಯಾಗಿದೆ.

ದಿನದ ಹಿಂದೆಯಷ್ಟೇ ಎಪ್ರಿಲ್‌ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ ರೂ.ಗಳ ಗಡಿಯನ್ನು ದಾಟಿ 2.10 ಲ.ಕೋ.ರೂ. ಸಂಗ್ರಹವಾಗುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಬರೆದಿತ್ತು. ಇದರ ಬೆನ್ನಲ್ಲೇ ಉತ್ಪಾದನ ವಲಯದ ಪಿಎಂಐ ಕೂಡ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿರುವುದು ಅಭಿವೃದ್ಧಿಯ ಪಥವನ್ನು ಬಿಂಬಿಸುತ್ತಿದೆ.

ಕಳೆದ 2-3 ತಿಂಗಳುಗಳಿಂದೀಚೆಗೆ ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿರು  ವುದರಿಂದ ದೇಶೀಯ ಮಾರುಕಟ್ಟೆ ಬೆಳವಣಿಗೆಯನ್ನು ಕಾಣತೊಡಗಿದೆ. ಇದರ ಪರಿಣಾಮವಾಗಿ ಎಲ್ಲ ವಲಯಗಳಲ್ಲೂ ಒಂದಿಷ್ಟು ಚೇತರಿಕೆಯ ವಾತಾವರಣ ಕಂಡುಬರತೊಡಗಿದೆ. ಉತ್ಪಾದನ ಕ್ಷೇತ್ರದ ಮೇಲೆ ಈ ಬೆಳವಣಿಗೆ ಸಕಾರಾತ್ಮಕ ಪರಿಣಾಮವನ್ನು ಬೀರಿದ್ದು, ಬೇಡಿಕೆ ಹೆಚ್ಚಳದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎನ್ನಬಹುದು. ಉತ್ಪಾದನ ವಲಯ ಇದೇ ತೆರನಾದ ಬೆಳವಣಿಗೆ ಪ್ರವೃತ್ತಿಯನ್ನು ಕಾಯ್ದುಕೊಂಡು ಬಂದದ್ದೇ ಆದಲ್ಲಿ ಉದ್ಯೋಗ ಕ್ಷೇತ್ರವೂ ಚಿಗಿತುಕೊಳ್ಳಲಿದ್ದು, ನಿರುದ್ಯೋಗ ಪ್ರಮಾಣ ಇಳಿಕೆಯಾಗಲಿದೆ. ಇದು ದೇಶದ ಪಾಲಿಗೆ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಲಿದೆ.

Advertisement

ಇದೇ ವೇಳೆ ಮುಂದಿನ ಮುಂಗಾರು ಋತು ಸಾಮಾನ್ಯವಾಗಿರಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಇದು ಕೇವಲ ರೈತಾಪಿ ವರ್ಗವನ್ನು ಮಾತ್ರವಲ್ಲದೆ ದೇಶದ ಬಹುತೇಕ ವಲಯಗಳನ್ನು ನಿರಾಳವನ್ನಾಗಿಸಿದೆ. ದೇಶದ ಆರ್ಥಿಕತೆಯಲ್ಲಿ ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ದೇಶ ಆರ್ಥಿಕ ಪ್ರಗತಿಯಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಲಿರುವುದು ನಿಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next