Advertisement

ಮನುಸ್ಮೃತಿ ಸಂವಿಧಾನವಾಗಬೇಕಾ?: ಪ್ರಿಯಾಂಕ ಖರ್ಗೆ

05:13 AM Feb 25, 2019 | |

ದಾವಣಗೆರೆ: ಸಂಸದರಂತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಂಪೂರ್ಣ ವಿವೇಕ, ಪ್ರಬುದ್ಧತೆಯಿಂದಲೇ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಯಾವ ಸಂವಿಧಾನ ಬೇಕು. ಮನುಸ್ಮೃತಿ ಬೇಕಾ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಪ್ರಶ್ನಿಸಿದರು. ರವಿವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಆಯೋಜಿಸಿದ್ದ ಅಭಿನಂದನಾ ಹಾಗೂ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾನತೆ ನೋಡಲಿಕ್ಕಾಗದವರು, ಯಾರೋ ಅವಿವೇಕಿಗಳು, ಹಾದಿ ಬೀದಿಯಲ್ಲಿ ಹೋಗುವವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಸಂಸದರಂತ ಜವಾಬ್ದಾರಿಯುತ ಸ್ಥಾನದಲ್ಲಿ ಇರುವರು ಮಾತನಾಡಿದ್ದಾರೆ ಎಂದು ಹರಿಹಾಯ್ದರು. ಆರ್‌ಎಸ್‌ಎಸ್‌ನವರು ಭಾರತಕ್ಕೆ ಸಂವಿಧಾನ ಬೇಡ.

Advertisement

ಮನುಸ್ಮೃತಿ ಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ 150 ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆರ್‌ಎಸ್‌ಎಸ್‌ ಈ ಹಿಂದೆ ಹೊರ ತಂದಿರುವ ಪುಸ್ತಕದಲ್ಲಿ ಮಹರ್ಷಿ ಅಂಬೇಡ್ಕರ್‌, ಋಷಿ ನೆಹರೂ ಅವರಿಂದ ಮನುಸ್ಮೃತಿ ಸುಡುವ ಯತ್ನ ನಡೆದಿದೆ ಎಂದು ಬರೆಯಲಾಗಿದೆ. ಈಚೆಗೆ ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟಂತ ಆರಕ್ಷಣಾ (ಮೀಸಲಾತಿ) ವಿರೋಧಿ ಪಾರ್ಟಿಯವರಿಗೆ ಬೆನ್ನಲುಬಾಗಿ ಇರುವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಮಾನತೆ ಬಯಸದೇ ಇದ್ದವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಬರೆದಿರುವಂತ ಸಂವಿಧಾನವನ್ನು ಒಂದೇ ಮಾತಿಗೆ ಒಪ್ಪಿಕೊಳ್ಳಲಿಲ್ಲ. ಸಂವಿಧಾನವೇನು ಅಂಬೇಡ್ಕರ್‌ ಬಾಯಿ ಪಾಠ ಮಾಡಿದ್ದಂತದ್ದಲ್ಲ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್‌ 11 ತಿಂಗಳ ಕಾಲ ವಿವಿಧ ದೇಶಗಳನ್ನು ಸುತ್ತಾಡಿ ಅಲ್ಲಿನ ಸಂವಿಧಾನ ಅಧ್ಯಯನ ಮಾಡಿ ರಚಿಸಿದ್ದರು. 

ಸಂವಿಧಾನದ ಕರಡಿನಲ್ಲಿನ ಮೀಸಲಾತಿ, ಕಾನೂನು, ವಿಧೇಯಕ… ಹೀಗೆ ಪ್ರತಿ ಅಂಶದ ಬಗ್ಗೆಯೇ ಎರಡು ವರ್ಷ 11 ತಿಂಗಳ ಕಾಲ ಸುದೀರ್ಘ‌ ಚರ್ಚೆ ನಡೆದಿದೆ. ಅಂಬೇಡ್ಕರ್‌ ಅವರಿಗೆ ಕೇಳಲಾಗಿದ್ದ 3,500 ಪ್ರಶ್ನೆಗಳಿಗೆ 20 ಸಾವಿರ ಪುಟದಷ್ಟು ಉತ್ತರ ನೀಡಿದ್ದಾರೆ. ಅಂತಹ ಮಹಾನ್‌ ದೂರದೃಷ್ಟಿಯ ಮೇಧಾವಿ ಬರೆದಿರುವಂತಹ ಸಂವಿಧಾನದ ಮೇಲೆ ಭಾರತ ನಡೆಯುತ್ತಿದೆ ಎಂಬುದನ್ನು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವರು ತಿಳಿದುಕೊಳ್ಳಬೇಕು ಎಂದು ಒತ್ತಾಯಿಸಿದರು. ಈಚೆಗೆ ಒಂದೇ ಧರ್ಮದ ತತ್ವ, ಆಲೋಚನೆಯನ್ನು ಇಡೀ ಸಮಾಜದ ಮೇಲೆ ಹೇರುವಂತ ವಿಚಿತ್ರ ವಾತಾವರಣ ಕಂಡು ಬರುತ್ತಿದೆ.

ಇಂತಹವರಿಗೆ ಸಂವಿಧಾನ ನೀಡಿರುವ ಸಮಾನತೆ ಬಗ್ಗೆಯಾಗಲಿ, ಪ್ರಜಾಪ್ರಭುತ್ವದ ಕುರಿತಾಗಲಿ ಗೌರವವೇ ಇಲ್ಲ. ತಮ್ಮದೇ ಹಾದಿಯಲ್ಲಿ ನಡೆಯುವ ಜನರಿಂದ ಸಮಾನತೆ ಸಿಕ್ಕಿಲ್ಲ ಎಂದರು. 

ಸಮಾನತೆಯ ಆಧಾರದಲ್ಲಿ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂದು ಧ್ವನಿ ಎತ್ತಿದವರನ್ನೇ ಮುಗಿಸಲಾಗುತ್ತದೆ ಎಂಬುದಕ್ಕೆ ಡಾ| ಎಂ.ಎಂ. ಕಲಬುರ್ಗಿ, ಗೋವಿಂದ ಪಾನ್ಸರೆ, ಗೌರಿ ಲಂಕೇಶ್‌ ಹತ್ಯೆಯೇ ಸಾಕ್ಷಿ. ಸಮಾಜದಲ್ಲಿನ ತುಳಿತಕ್ಕೊಳಗಾದವರಿಗಾಗಿಯೇ ಸಂವಿಧಾನ ಇರುವುದು ಎಂಬ ಇತಿಹಾಸ ತಿಳಿಯದವರು ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ದೂರಿದರು.

Advertisement

ಛಲವಾದಿ ಎಂದರೆ ಸ್ವಾಭಿಮಾನಿಗಳು ಎಂದರ್ಥ. ಹಿಡಿದಂತಹ ಯಾವುದೇ ಕೆಲಸವನ್ನು ಛಲದಿಂದ ಮಾಡುವರು. ನಾವು ಸಮಾನತೆ, ಸ್ವಾಭಿಮಾನ, ಬದುಕಿಗಾಗಿ ಸಂಪರ್ಕ- ಸಂಬಂಧ- ಸಂಘಟನೆ- ಸಂರಕ್ಷಣೆಗಾಗಿ ಒಂದಾಗಬೇಕು. ಸಾಮಾಜಿಕವಾಗಿ ಮುಂದುವರೆಯಲು ರಾಜಕೀಯ ಅಧಿಕಾರ ಪ್ರಾಪ್ತ ಮಾಡಿಕೊಳ್ಳಬೇಕು. ದೂರದ ಗುರಿ ಮುಟ್ಟಲು ಒಗ್ಗಟ್ಟಿನಿಂದ ಛಲವಾದಿ ಸಮಾಜದವರು ಸಾಗಬೇಕು ಎಂದು ತಿಳಿಸಿದರು.

ಹರಿಹರ ಶಾಸಕ ಎಸ್‌. ರಾಮಪ್ಪ ಮಾತನಾಡಿ, ನನ್ನ ರಾಜಕೀಯ ಗುರುಗಳಾಗಿರುವ, 2013 ಮತ್ತು 2018ರ ಚುನಾವಣೆಯಲ್ಲಿ ಟಿಕೆಟ್‌ ದೊರಕಿಸುವಲ್ಲಿ ಪ್ರಮುಖ ಕಾರಣಕರ್ತರಾಗಿರುವ ಡಾ| ಜಿ. ಪರಮೇಶ್ವರ್‌ ಅವರು ಮುಖ್ಯಮಂತ್ರಿಯಾಗಬೇಕಿತ್ತಾದರೂ ಆಗಲಿಲ್ಲ. ಮುಂದೆ ಆಗಿಯೇ ಆಗುತ್ತಾರೆ ಎಂದು ಧೃಡ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಅನಂತಕುಮಾರ್‌ ಹೆಗಡೆ ಸಂವಿಧಾನದ ಬದಲಾವಣೆಯ ಬಗ್ಗೆ ಮಾತನಾಡಿದರೂ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಪ್ರಶ್ನಿಸುವುದೇ ಇಲ್ಲ, ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಛಲವಾದಿ ಮಹಾಸಭಾ ಪ್ರಧಾನ ಕಾರ್ಯದಶಿ ಬಿ.ಎಸ್‌. ವೆಂಕಟೇಶ್‌ ಪ್ರಾಸ್ತಾವಿಕ ಮಾತುಗಳಾಡಿದರು. ಹಾವೇರಿ ಶಾಸಕ ನೆಹರೂ ಚ. ಓಲೇಕಾರ್‌ ಅಧ್ಯಕ್ಷತೆ ವಹಿಸಿದ್ದರು. ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಸಮಾರಂಭ ಉದ್ಘಾಟಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಸ್‌. ಬಸವಂತಪ್ಪ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ್‌, ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎನ್‌. ರುದ್ರಮುನಿ, ಎಚ್‌.ಬಿ. ಜಯಪ್ರಕಾಶ್‌, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌, ಕೊಪ್ಪಳದ ಗಾಯಕಿ ಗಂಗಮ್ಮ, ಟಿ. ಉಮೇಶ್‌, ಸಿ. ಜಯ್ಯಪ್ಪ ಗುಡಾಳ್‌, ಎಚ್‌. ಶಿವಪ್ಪ ಹರಿಹರ, ಟಿ.ಎಸ್‌. ರಾಮಯ್ಯ, ಮಧುಸೂಧನ್‌ ಇತರರು ಇದ್ದರು. ಓಂಕಾರಪ್ಪ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿದರು. ಸಮಾರಂಭದ ಮುನ್ನ ಪುಲ್ವಾಮಾದ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.

ಮೋದಿ ದಲಿತರ ಮೇಲಿನ ದಾಳಿ ವಿಚಾರವಾಗಿ ಮಾತೇ ಆಡಲ್ಲ
ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮನ್‌ ಕಿ ಬಾತ್‌ನಲ್ಲಿ ಸಂವಿಧಾನ ಬದಲಾವಣೆ, ಭೀಮಾ ಕೋರೆಗಾಂವ್‌, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮೇಲೆ ಆಗುವಂತಹ ದಾಳಿಗಳ ಬಗ್ಗೆ ಏಕೆ ಪ್ರಸ್ತಾಪಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು. ಭಾನುವಾರ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಾಲಿವುಡ್‌ ಚಿತ್ರ ಬಿಡುಗಡೆಯಾದರೆ, ಹೀರೋ-ಹೀರೋಯಿನ್‌ ಮದುವೆ, ಭಾರತ ಕ್ರಿಕೆಟ್‌ ಗೆದ್ದರೆ… ಮನ್‌ ಕಿ ಬಾತ್‌ನಲ್ಲಿ ಮಾತನಾಡುವಂತಹ ಪ್ರಧಾನಿ ಮೋದಿ ಸಂವಿಧಾನದ ಬದಲಾವಣೆ, ದಲಿತರ ಮೇಲಿನ ದಾಳಿಯ ಬಗ್ಗೆ ಮಾತನಾಡುವುದೇ ಇಲ್ಲ ಎಂದು ಟೀಕಿಸಿದರು. ಅಂಬೇಡ್ಕರ್‌ ಜಯಂತಿಯಲ್ಲಿ ಅಂಬೇಡ್ಕರ್‌ ಅವರಿಗೆ ಭಾರತರತ್ನ ಕೊಟ್ಟಿದ್ದು ನಾವೇ ಎಂದು ಹೇಳುವ ಪ್ರಧಾನಿ ಮೋದಿ ದಲಿತರ ಬಗ್ಗೆ ನುಡಿದಂತೆ ನಡೆಯುವುದೇ ಇಲ್ಲ. ಈಗ ಲೋಕಸಭಾ ಚುನಾವಣೆ ಬರಲಿದೆ. ಘರ್‌ ವಾಪಸಿ… ಅಂತಹ ವಿಚಾರಗಳ ಪ್ರಸ್ತಾಪ ಮಾಡುತ್ತಾರೆ. ನಮಗೆ ಅಂತಹ ವಿಚಾರಗಳೇ ಬೇಡ. ಸಮಾನತೆ ನೀಡುವ, ಪ್ರಬುದ್ಧ ಭಾರತವ ಬಯಸಿದ ಅಂಬೇಡ್ಕರ್‌ ನೀಡಿರುವ ಸಂವಿಧಾನ ಮಾತ್ರ ನಮಗೆ ಬೇಕು ಎಂದು ಹೇಳಬೇಕು ಎಂದು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next