Advertisement

ಮಂತ್ರಾಲಯ ಶ್ರೀಗಳ ಚಾತುರ್ಮಾಸ್ಯ ವ್ರತ ಸಂಪನ್ನ

06:00 AM Sep 26, 2018 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಕೈಗೊಂಡ 6ನೇ ಚಾತುರ್ಮಾಸ್ಯ ವ್ರತಾಚರಣೆಯನ್ನು ಭಾದ್ರಪದ ಶುದ್ಧ ಪೂರ್ಣಿಮೆ ದಿನವಾದ ಮಂಗಳವಾರ ಸಂಪನ್ನಗೊಳಿಸಿದರು. ಈ ನಿಮಿತ್ತ ಮಂಗಳವಾರ ಬೆಳಗ್ಗೆಯಿಂದಲೇ ಶ್ರೀಗಳು ವಿಶೇಷ ಪೂಜೆ ಕೈಗೊಂಡಿದ್ದರು. ರಾಯರ ಮೂಲ ಬೃಂದಾವನಕ್ಕೆ ಪೂಜೆ, ಸಂಸ್ಥಾನ ಪೂಜೆ ನೆರವೇರಿಸಿದರು. ಸಂಜೆ ಮಠದ ಆವರಣದಲ್ಲಿರುವ ಎಲ್ಲ ಯತಿಗಳ ಬೃಂದಾವನಗಳ ದರ್ಶನ ಪಡೆದು ಸೀಮೋಲ್ಲಂಘನೆಗೆ ಅಪ್ಪಣೆ ಕೋರಿದರು.

Advertisement

ನಂತರ ಮಠದ ಹೊರಭಾಗ ಬಂದ ಶ್ರೀಗಳನ್ನು ವಿಶೇಷ ಡೋಲಿಯಲ್ಲಿ ಭಕ್ತರು ಹೊತ್ತುಕೊಂಡು ರಥಬೀದಿಯಲ್ಲಿ ಸಾಗಿದರು. ಅಲ್ಲಿಂದ ಶ್ರೀಗಳು, ಕಾರಿನಲ್ಲಿ ಮಂತ್ರಾಲಯದ ಸೀಮೆಯಾದ ಕೊಂಡಾಪುರದ ಪ್ರಾಣದೇವರ ದರ್ಶನ ಪಡೆದು ಸೀಮೋಲ್ಲಂಘನೆ ಮಾಡಿದರು. ಅಲ್ಲಿಂದ ಹಿಂದಿರುಗಿದ ಶ್ರೀಗಳನ್ನು, ಮಠದ ಭಕ್ತರು ಮೆರವಣಿಗೆ ಮೂಲಕ ಮಠಕ್ಕೆ ಕರೆ ತಂದರು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು, 48 ದಿನಗಳ ಕಾಲ ಮಠದಲ್ಲಿ ಚಾತುರ್ಮಾಸ್ಯ ಆಚರಣೆ ಕೈಗೊಂಡಿದ್ದ ಶ್ರೀಗಳು ಪ್ರವಚನ, ತತ್ವ ಬೋಧನೆ, ವಿಶೇಷ ಪೂಜೆ ಕೈಂಕರ್ಯಗಳನ್ನು
ಕೈಗೊಂಡಿದ್ದರು. ದರ್ಶನಕ್ಕೆ ಬಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿ ಆಶೀರ್ವದಿಸಿದರು. ವ್ರತ ನಿಯಮಗಳಂತೆ ತರಕಾರಿ, ಮೊಸರು, ಹಾಲು, ದ್ವಿದಳ ಧಾನ್ಯಗಳ ಸೇವನೆಯನ್ನು ಶ್ರೀಗಳು ತ್ಯಜಿಸಿದ್ದರು. ಪಕ್ಷವನ್ನೇ ಮಾಸವನ್ನಾಗಿ ಪರಿವರ್ತಿಸಿಕೊಂಡು 48 ದಿನಕ್ಕೆ ವ್ರತ ಪೂರ್ಣಗೊಳಿಸಿದರು. ಮಠದ ಪ್ರವಚನ ಮಂಟಪದಲ್ಲಿ ಭಾಗವತ್‌ ಪ್ರವಚನ ಮಂಗಳ ಕಾರ್ಯಕ್ರಮ ನಡೆಯಿತು.

ಸಚಿವ ಹೆಗಡೆ ಪ್ರತಿಕ್ರಿಯೆಗೆ ನಕಾರ: ಮಂತ್ರಾಲಯದಲ್ಲಿ ಶ್ರೀಮಠದ ಪೀಠಾಧಿಪತಿಗಳ  ಚಾತುರ್ಮಾಸ ವ್ರತ ಸಂಪನ್ನ ಸಮಾರಂಭ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಕೌಶಾಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮಾಧ್ಯಮಗಳು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರಶ್ನಿಸಿದಾಗ, ನಾನೇನೂ ಮಾತನಾಡುವುದಿಲ್ಲ ಎಂದು ಕೈ ಮುಗಿದು ಕಾರು ಹತ್ತಿದರು. ಮಂತ್ರಾಲಯಕ್ಕೆ ಪತ್ನಿ ಸಮೇತರಾಗಿ ಆಗಮಿಸಿದ್ದ ಅವರು ರಾಯರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next