Advertisement

ಶತಮಾನದ ಮಂತ್ರಮುಗ್ಧ ಆಸ್ವಾದ

09:08 PM Aug 09, 2019 | mahesh |

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಹಿಮೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ರಾಯರ ದರ್ಶನ ಮಾಡಿದರೆ, ಜೀವನ ಪಾವನ ಎಂದು ಭಾವಿಸುವ ಅದೆಷ್ಟೋ ಭಕ್ತಗಣಕ್ಕೆ ಇಲ್ಲಿನ ಭೋಜನವೂ ಪರಮಪ್ರಸಾದ. ಇಲ್ಲಿನ ಅನ್ನಸಂತರ್ಪಣೆಗೆ ಶತಮಾನದ ಚರಿತೆಯಿದೆ. ರಾಯರ ಆರಾಧನೆ (ಆ.14- ಆ.20) ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಆ ಭಕ್ತಿ ಭೋಜನವನ್ನು ನೆನೆಯುತ್ತಾ…

Advertisement

ನಿತ್ಯ ಎಷ್ಟು ಮಂದಿಗೆ ಭೋಜನ?
ನಿತ್ಯವೂ ಇಲ್ಲಿ 4 ಸಾವಿರ ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ಗುರುವಾರದಂದು 6 ಸಾವಿರ ಮಂದಿ ವಿಶೇಷ ಭಕ್ತಿಭೋಜನ ಸವಿಯುತ್ತಾರೆ. ಆರಾಧನೆಯ ವೇಳೆ ಭಕ್ತಾದಿಗಳ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ.

ಹೊರಗುತ್ತಿಗೆ ನೌಕರರು
ಅನ್ನಸಂತರ್ಪಣೆ ಸೇವೆಗೆ, ಸ್ವಚ್ಛತೆ ಸೇರಿ ಇನ್ನಿತರ ಕೆಲಸಗಳಿಗೆ ಹೊರಗುತ್ತಿಗೆ ಆಧಾರದಡಿ ಸಿಬ್ಬಂದಿ ನೇಮಿಸಲಾಗಿದೆ. 40-45 ಸಿಬ್ಬಂದಿ ನಿತ್ಯ ಸೇವೆಯಲ್ಲಿ ತೊಡಗಿರುತ್ತಾರೆ. ಆರಾಧನೆ ವೇಳೆ ಹೆಚ್ಚು ಸಿಬ್ಬಂದಿಯ ನಿಯೋಜನೆ ಮಾಡಲಾಗುತ್ತದೆ.

ಮೆನು ಏನು?
ಅನ್ನ- ಸಾಂಬಾರ್‌, ಪಾಯಸ, ಜುಣಕ (ಚಟ್ನಿ), ಮೊಸರನ್ನ ಇಲ್ಲವೇ ಮಜ್ಜಿಗೆ ಸಹಿತ ಭೋಜನ. ರಾತ್ರಿ ವೇಳೆ ಚಿತ್ರಾನ್ನ, ಪುಳಿಯೊಗರೆ, ಹುಳಿ ಅನ್ನ ಸೇರಿ ನಿತ್ಯ ಒಂದೊಂದು ಬಗೆಯ ಅನ್ನವೈವಿಧ್ಯ. ರಾಯರ ಆರಾಧನೆ, ವರ್ಧಂತ್ಯುತ್ಸವ, ದೀಪಾವಳಿ, ನವರಾತ್ರಿಯಂಥ ವಿಶೇಷ ದಿನಗಳಲ್ಲಿ ಲಾಡು, ಜಿಲೇಬಿ, ಪೇಡಾ- ಮುಂತಾದ ಸಿಹಿ ಖಾದ್ಯ ಇರುತ್ತದೆ.

ಊಟದ ಸಮಯ
– ಮಧ್ಯಾಹ್ನ 12- 2:30ರವರೆಗೆ ಭೋಜನ
– ರಾ. 7:30ರಿಂದ ರಾತ್ರಿ 9:30ರವರೆಗೆ ಉಪಾಹಾರ

Advertisement

ಭಕ್ತರ ಗಮನಕ್ಕೆ…
– ಬೆಳಗ್ಗೆ ಉಪಾಹಾರದ ವ್ಯವಸ್ಥೆ ಇರುವುದಿಲ್ಲ.
– ಮಧ್ಯಾಹ್ನ ಪಂಕ್ತಿ ಭೋಜನವಿದ್ದರೆ, ರಾತ್ರಿ ಸ್ವಸಹಾಯ ಪದ್ಧತಿ.

ಈ ದಿನಗಳಲ್ಲಿ ದಾಸೋಹ ಇಲ್ಲ…
ಏಕಾದಶಿ, ಗ್ರಹಣ, ಕೃಷ್ಣಾಷ್ಟಮಿಯ ಹಿಂದಿನ ದಿನ ದಾಸೋಹ ಇರುವುದಿಲ್ಲ. ರಾಯರ ದರ್ಶನಕ್ಕೆ ಮಾತ್ರವೇ ಅವಕಾಶವಿರುತ್ತದೆ.

ಭಲೇ, ಬಾಯ್ಲರ್‌!
ಮಠದಲ್ಲಿ ದಾಸೋಹಕ್ಕೆಂದು ಅನ್ನ ಮಾಡುವ 3 ಬೃಹತ್‌ ಬಾಯ್ಲರ್‌ಗಳಿವೆ. ಏಕಕಾಲದಲ್ಲಿ ಅನ್ನ ಸಿದ್ಧವಾಗುತ್ತದೆ. ಹೆಚ್ಚಿನ ಜನ ಬರುವ ನಿರೀಕ್ಷೆ ಇದ್ದಾಗ, ಈ ಬಾಯ್ಲರ್‌ಗಳು ಆಪತ್ಭಾಂಧವನಂತೆ ಕೆಲಸ ಮಾಡುತ್ತವೆ.

ತರಕಾರಿಗೆ ಪೂಜೆ
ಪ್ರತಿವರ್ಷ ರಾಯರ ಆರಾಧನೆಗೂ ಮುನ್ನ ಭಕ್ತರು ನೀಡಿದ ತರಕಾರಿಗಳಿಗೆ ಪೂಜೆ ನೆರವೇರಿಸುತ್ತಾರೆ. ಅದಕ್ಕೂ ಮುನ್ನ ದಿನ ದವಸ ಧಾನ್ಯಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.

ಈ ತರಕಾರಿ ನಿಷಿದ್ಧ
ಮಠದಲ್ಲಿ ಕೆಲ ತರಕಾರಿಗಳು ಸಾಂಪ್ರದಾಯಿಕವಾಗಿ ನಿಷಿದ್ಧ. ಟೊಮೇಟೊ, ಆಲೂಗಡ್ಡೆ, ಹೂಕೋಸನ್ನು ಇಲ್ಲಿ ಬಳಸುವುದಿಲ್ಲ.

ಇನ್ಫಿ ದಂಪತಿ ಕಟ್ಟಿದ ಭೋಜನ ಶಾಲೆ
ಈ ಮುಂಚೆ ಪ್ರಸಾದ ಭವನ ಚಿಕ್ಕದಾಗಿತ್ತು. 1993ರಲ್ಲಿ ಇನ್ಫೊಸಿಸ್‌ನ ನಾರಾಯಣ ಮೂರ್ತಿ ಅವರ ಧರ್ಮಪತ್ನಿ ಸುಧಾ ಮೂರ್ತಿ ಅವರು ಅನ್ನಪೂರ್ಣ ಹೆಸರಿನ ಬೃಹತ್‌ ಕಟ್ಟಡ ನಿರ್ಮಿಸಿದ್ದಾರೆ. ಏಕಕಾಲಕ್ಕೆ 1500 ಜನ ಕುಳಿತು ಊಟ ಮಾಡಬಹುದಾದ ಬೃಹತ್‌ ಸಭಾಂಗಣವಿದೆ.

ಮಂತ್ರಾಲಯದ ಶ್ರೀ ಮಠದಲ್ಲಿ ಶತಮಾನದ‌ ಹಿಂದಿನಿಂದ ದಾಸೋಹ ಪದ್ಧತಿ ನಡೆದುಕೊಂಡು ಬಂದಿದೆ. ಇಲ್ಲಿನ ಭೋಜನ ವ್ಯವಸ್ಥೆ, ಅತ್ಯಂತ ಶಿಸ್ತುಬದ್ಧ.
– ಎಸ್‌.ಕೆ. ಶ್ರೀನಿವಾಸರಾವ್‌, ಶ್ರೀಮಠದ ವ್ಯವಸ್ಥಾಪಕ

ಮಂತ್ರಾಲಯದ ಅನ್ನಪೂರ್ಣದಲ್ಲಿ ಸಿಗುವ ಪ್ರಸಾದಕ್ಕೆ ವಿಶೇಷ ಮಹತ್ವವಿದೆ. ದೂರದೂರುಗಳಿಂದ ಬಂದ ಭಕ್ತರು ಪ್ರಸಾದಕ್ಕಾಗಿ ಕಾದು, ಭೋಜನ ಸೇವಿಸಿ, ಗುರುಗಳ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
– ಜಿ. ಶ್ರೀಪತಿ, ಧಾರ್ಮಿಕ ವಿಭಾಗದ ಅಧಿಕಾರಿ


ಸಂಖ್ಯಾ ಸೋಜಿಗ
3- ಬಾಯ್ಲರ್‌ಗಳಲ್ಲಿ ಅನ್ನ ತಯಾರಿ
6- ಕ್ವಿಂಟಲ್‌ ಅಕ್ಕಿ, ನಿತ್ಯ ಬಳಕೆ
25- ಕ್ವಿಂಟಲ್‌ ಅಕ್ಕಿ, ಆರಾಧನೆ ವೇಳೆ
60- ಲೀಟರ್‌ ಹಾಲು ನಿತ್ಯ ಬಳಕೆ
45- ಸಿಬ್ಬಂದಿ, ಭೋಜನ ಸೇವೆಯಲ್ಲಿ ಭಾಗಿ
4,000- ಮಂದಿಗೆ ನಿತ್ಯ ಭೋಜನ
12,00,000- ಭಕ್ತರಿಂದ ಕಳೆದವರ್ಷ ಅನ್ನಪ್ರಸಾದ ಸೇವನೆ

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next