Advertisement

ಆ. 10: ಮಂತ್ರಾಲಯದಲ್ಲಿ ಶ್ರೀರಾಯರ 351ನೇ ಆರಾಧನೆ

10:38 PM Aug 02, 2022 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. 10ರಿಂದ 16ರವರೆಗೆ ಶ್ರೀರಾಯರ 351ನೇ ಆರಾಧನಾ ಮಹೋತ್ಸವದ ನಿಮಿತ್ತ ಸಪ್ತರಾತ್ರೋತ್ಸವ ಜರಗಲಿದೆ ಎಂದು ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

Advertisement

ಶ್ರೀಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಕೋವಿಡ್‌-19 ಕಾರಣಕ್ಕೆ ರಾಯರ ಆರಾಧನೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈಗ ಸೋಂಕು ನಿವಾರಣೆಯಾಗಿದ್ದು, ಜನಜೀವನ ಎಂದಿನಂತಿದೆ. ಆರಾಧನೆ ವೇಳೆ ಸರಕಾರಿ ರಜೆಗಳಿರುವುದರಿಂದ ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಅನುಗ್ರಹ ಪ್ರಶಸ್ತಿ ಪ್ರದಾನ
ಮಠದ ಮುಂದಿನ ಯೋಗೀಂದ್ರ ಸಭಾಮಂಟಪದಲ್ಲಿ ಪ್ರತೀದಿನವೂ ವಿದ್ವಾಂಸರಿಂದ ಪ್ರವಚನ, ಉಪನ್ಯಾಸ, ವಿವಿಧ ಸಂಗೀತ ಕಲಾವಿದರಿಂದ ದಾಸವಾಣಿ ಕಾರ್ಯಕ್ರಮ, ಭರತನಾಟ್ಯ, ನೃತ್ಯ ರೂಪಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಲವು ಸಾಧಕರಿಗೆ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ರವಾಹ ಭೀತಿ ಬೇಡ
ಮಂತ್ರಾಲಯ ಸಮೀಪದ ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಆದರೆ ಪ್ರವಾಹ ಭೀತಿಯಿಲ್ಲ. ಭಕ್ತರು ನಿರ್ಭೀತಿಯಿಂದ ಆರಾಧನೆಗೆ ಬರಬಹುದು. ಭಕ್ತರ ಸ್ನಾನಕ್ಕಾಗಿ ನದಿತೀರದ ಕಾರಿಡಾರ್‌ನಲ್ಲಿ 100 ಶವರ್‌ಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸೂಕ್ತ ಭದ್ರತೆ ಕಲ್ಪಿಸಿದ್ದು, ನಿರಂತರವಾಗಿ ಮೈಕ್‌ನಲ್ಲಿ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಕಾರಿಡಾರ್‌ ಲೋಕಾರ್ಪಣೆ
ಈ ಬಾರಿಯೂ ಶ್ರೀಮಠದ ಭಕ್ತರ ನೆರವಿನೊಂದಿಗೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಲೋಕಾರ್ಪಣೆ ಮಾಡಲಾಗುವುದು. ಶ್ರೀಮಠದ ಮುಂಭಾಗದಲ್ಲಿ ಬೃಹತ್‌ ಕಾರಿಡಾರ್‌ ನಿರ್ಮಿಸಿದ್ದು, ಲೋಕಾರ್ಪಣೆ ಮಾಡಲಾಗುವುದು. ಈ ಬಾರಿ ರಾಯರ ಮೂಲವೃಂದಾವನಕ್ಕೆ ನವರತ್ನ ಖಚಿತ ಹಾರ, 300 ಕೆಜಿಯ ರಜತ ಮಂಟಪ, ಸುವರ್ಣ ರಥದ ನವೀಕರಣ ಮಾಡಲಾಗಿದೆ. ಹರಿಕಥಾಮೃತಸಾರ ಸೌಧ ನಿರ್ಮಿಸಲಾಗಿದೆ. ಭಕ್ತರಿಗಾಗಿ 100 ಕೋಣೆಗಳ ಸಮುತ್ಛಯ ನಿರ್ಮಿಸಲಾಗುತ್ತಿದೆ. ಒಬ್ಬರೇ ದಾನಿಗಳು ಇದನ್ನು ನಿರ್ಮಿಸುತ್ತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next