Advertisement

ಪಲಿಮಾರು ಮಠದ ಉತ್ತರಾಧಿಕಾರಿಗೆ ಮಂತ್ರೋಪದೇಶ

11:27 PM May 10, 2019 | Lakshmi GovindaRaj |

ಉಡುಪಿ: ಭಾನುವಾರ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಳ್ಳಲಿರುವ ವಟು ಶೈಲೇಶ ಉಪಾಧ್ಯಾಯರು ಶುಕ್ರವಾರ ಪ್ರಾತ:ಶುಭಕಾಲದಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದರು. ಗುರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶಿಷ್ಯನಿಗೆ ಪ್ರಣವ ಮಂತ್ರೋಪದೇಶ ನೀಡಿದರು.

Advertisement

ಅಕ್ಷಯ ತೃತೀಯಾದ ಶುಭದಿನ ಆರಂಭವಾದ ಶಿಷ್ಯ ಸ್ವೀಕಾರ ಪ್ರಕ್ರಿಯೆಯ ಭಾಗವಾಗಿ ಗುರುವಾರ ರಾತ್ರಿ ಶಾಕಲ ಮಂತ್ರದ ಹೋಮ ನಡೆಯಿತು. ಶಾಸ್ತ್ರದಂತೆ ಉಪವಾಸವಿದ್ದು, ಜಾಗರಣೆ ಮಾಡಿದ ಶೈಲೇಶರು ಪ್ರಾತ:ಕಾಲ ಸನ್ಯಾಸಾಶ್ರಮ ಸ್ವೀಕರಿಸಿದರು.

ಇದಕ್ಕೆ ಪೂರ್ವಭಾವಿಯಾಗಿ ರಾತ್ರಿ ನಡೆದ ಹೋಮದ ಅಗ್ನಿಯನ್ನು ಉಳಿಸಿಕೊಂಡು ಶುಕ್ರವಾರ ಬೆಳಗ್ಗೆ ಸನ್ಯಾಸಾಶ್ರಮ ಸ್ವೀಕಾರಕ್ಕೆ ಅತ್ಯಗತ್ಯವಾದ ವಿರಜಾ ಹೋಮವನ್ನು ನಡೆಸಲಾಯಿತು. ಪುರುಷಸೂಕ್ತ ಹೋಮವನ್ನೂ ವೈದಿಕರು ನಡೆಸಿಕೊಟ್ಟರು.

ಬಳಿಕ ಶೈಲೇಶರು ಮಧ್ವ ಸರೋವರಕ್ಕೆ ತೆರಳಿ ಸ್ನಾನ ಮಾಡಿದರು. ಸ್ನಾನಕ್ಕೂ ಮುನ್ನ ಶೈಲೇಶ’ನನ್ನು ತ್ಯಜಿಸಿ ಸನ್ಯಾಸಿ’ಯಾಗುವುದರ ಸಂಕೇತವಾಗಿ ಧರಿಸಿದ ಬಟ್ಟೆ, ಜನಿವಾರಗಳನ್ನು ವಿಸರ್ಜನೆ ಮಾಡಿದರು. ನಂತರ ಕಾಷಾಯ ವಸ್ತ್ರ, ದಂಡಧಾರಿಯಾಗಿ ಮಧ್ವತೀರ್ಥದಲ್ಲಿ ಅವಗಾಹನಸ್ನಾನ ಮಾಡಿದರು.

ಸರೋವರದ ದಂಡೆಯಲ್ಲಿ ಹೋಮದ ಸಂದರ್ಭ ಪೂಜಿಸಿದ ಪವಿತ್ರ ಕಲಶಜಲವನ್ನು ಅವರಿಗೆ ಅಭಿಷೇಕ ಮಾಡಲಾಯಿತು. ಹಿಡಿದ ದಂಡಕ್ಕೆ ಹೊಸ ಯಜ್ಞೋ ಪವೀತವನ್ನು ಪೊಣಿಸಲಾಯಿತು. ದಂಡ, ಕಮಂಡಲು, ಗೋಪೀಚಂದನದೊಂದಿಗೆ ಶೋಭಿಸುವ ನೂತನ ಯತಿ ಶ್ರೀಕೃಷ್ಣದೇವರ ದರ್ಶನ ಮಾಡಿ, ಸರ್ವಜ್ಞ ಪೀಠದಲ್ಲಿ ವಿರಾಜಮಾನರಾಗಿದ್ದ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥರಲ್ಲಿಗೆ ತೆರಳಿ, ತಲೆಬಾಗಿ ತಮಗೆ ಪ್ರಣವ ಮಂತ್ರೋಪದೇಶ ಅನುಗ್ರಹಿಸುವಂತೆ ಪ್ರಾರ್ಥಿಸಿದರು.

Advertisement

ನೂತನ ಯತಿಗೆ ಹೋಮ ಸಂದರ್ಭ ಪೂಜಿತ ಕಲಶದ ಜಲವನ್ನು ಅಭಿಷೇಕ ಮಾಡಿದ ವಿದ್ಯಾಧೀಶತೀರ್ಥ ಶ್ರೀಪಾದರು, ತಣ್ತೀಜ್ಞಾನ ಚಿಂತನೆಗಳನ್ನು ನಡೆಸಿ ಪ್ರಣವ ಮಂತ್ರೋಪದೇಶ ನೀಡಿದರು. ಪೇಜಾವರ ಮಠದ ಕಿರಿಯ ಯತಿ ಉಪಸ್ಥಿತರಿದ್ದು ನೂತನ ಯತಿಗೆ ಶುಭ ಕೋರಿದರು.

ಬಳಿಕ, ಗುರುಗಳಾದ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಮಹಾಪೂಜೆ ನಡೆಸಿದರೆ ಶಿಷ್ಯ ಜಪ, ಪಾರಾಯಣಾದಿಗಳ ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿದರು. ತಿರುಮಲ ತಿರುಪತಿ ದೇವಸ್ಥಾನದಿಂದ ಅರ್ಚಕರು ತಂದ ಪ್ರಸಾದವನ್ನು ಯುವ ಯತಿಗೆ ನೀಡಲಾಯಿತು. ಧಾರ್ಮಿಕ ವಿಧಿಗಳನ್ನು ಗುಂಡಿಬೈಲು ಸುಬ್ರಹ್ಮಣ್ಯ ಭಟ್‌ ನಡೆಸಿಕೊಟ್ಟರು.

ಶನಿವಾರ ಅಷ್ಟಮಹಾಮಂತ್ರಗಳ ಉಪದೇಶವನ್ನು ನೂತನ ಯತಿಗೆ ಗುರುಗಳು ನೀಡುವರು. ವಿವಿಧ ಹೋಮಗಳು ಕೂಡ ನಡೆಯಲಿವೆ. ಭಾನುವಾರ ಅವರನ್ನು ವಿಧ್ಯುಕ್ತವಾಗಿ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಸ್ವೀಕರಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next