ಮಂತ್ರ ನಾಟ್ಯಕಲಾ ಗುರುಕುಲ ಅಕಾಡೆಮಿಯ ಗುರುಕುಲ ಉತ್ಸವ 2019, ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮೊದಲಿಗೆ ಕೂಚು ಪುಡಿ ಕಲಾವಿದ ರವಿ ಜಿ. ನೃತ್ಯ ಪ್ರದರ್ಶನ ನೀಡಿದರು. ಕವಿ ದಯಾನಂದ ಸರಸ್ವತಿ ಅವರ ಕೃತಿ ರಾಗ ರೇವತಿ ಆದಿ ತಾಳದ “ಭೋ ಶಂಭೋ’ಗೆ ಬಹಳ ಮನೋಜ್ಞವಾಗಿ ನೃತ್ಯ ಪ್ರಸ್ತುತಿ ನೀಡಿದರು. ಶಿವನ ಕರುಣಾಪೂರ್ಣ ಕಥಾ ಭಾಗದ ಸಂಚಾರಿಗಳನ್ನು ಸುಲಲಿತವಾಗಿ ಅಭಿನಯಿಸಿದರು, ತದ ನಂತರ ಕೂಚಿಪುಡಿ ನೃತ್ಯದಲ್ಲಿ ಬಹಳ ಅನೂಹ್ಯ ನೃತ್ಯ “ತರಂಗಂ’ ನರ್ತಿಸಿದರು, ಸಾಹಿತ್ಯ ಭಾಗದಲ್ಲಿ ಶ್ರೀಕೃಷ್ಣನ ಗುಣಗಾನ ಮಾಡುವ ಈ ಪ್ರಸ್ತುತಿಯಲ್ಲಿ ನರ್ತಕನ ಮೈ ಬಾಗುವಿಕೆ, ತಟ್ಟೆಯ ಮೇಲೆ ಕ್ಲಿಷ್ಟಕರ ಚಾಲನೆ, ಚುರುಕಾದ ಹೆಜ್ಜೆಗಾರಿಕೆ ಮನಸೆಳೆಯಿತು.
ಹಿರಿಯ ನೃತ್ಯ ಕಲಾವಿದೆ, ಗುರು ಉಮಾ ದೋಗ್ರ ಇವರ ಕಥಕ್ ನೃತ್ಯ ಈ ಸಂದರ್ಭದಲ್ಲಿ ಬಹಳ ಪ್ರಬುದ್ಧತೆಯಿಂದ ಮೂಡಿಬಂತು. ಮೊದಲಿಗೆ ಕಲಾವಿದೆ “ಗಣೇಶ ವಂದನಾ’ ಮಾಡಿದರು. ಇದರಲ್ಲಿ ಗಣಪತಿಯ ವರ್ಚಸ್ಸು ಹಾಗೂ ಗುಣಗಳನ್ನು ಹೊಗಳುವ ತುಣುಕನ್ನು ಪ್ರದರ್ಶಿಸಿದರು. ತದ ನಂತರ ಕವಿ ಸೂರದಾಸರ “ಶ್ಯಾಮ್ ತೇರಿ ಬನ್ಸಿ ನೇಕ್ ಬಜಾವು’ ಭಜನೆಯೊಂದಕ್ಕೆ ನೃತ್ಯ ಪ್ರದರ್ಶಿಸಿದರು, ರಾಧಿಕೆ ಹೇಗೆ ತನ್ನನ್ನು ತಾನೇ ಕೃಷ್ಣನಂತೆ ಪರಿವರ್ತನೆಗೈದು, ಕೃಷ್ಣನ ಹಾಗೂ ತನ್ನ ಮಧ್ಯದ ಮಧುರಾನುಭೂತಿಗೆ ಸಾಕ್ಷಿಯಾಗುತ್ತಾಳೆ ಅನ್ನುವ ಮುಗ್ಧ ಹಾಗೂ ಸರಳ ಸಹಜ ಅಭಿ ನಯ ನೀಡಿದರು. ಮುಂದಿನ ಪ್ರಸ್ತುತಿ ಯಾಗಿ ಜಯದೇವ ಕವಿಯ “ಸಖೀ…. ಹೇ’ ಅನ್ನುವ ಅಷ್ಟಪದಿಯನ್ನು ಪ್ರಸ್ತುತ ಪಡಿಸಿದರು, ನಾಯಕಿಯು ತನ್ನ ಸಖೀಯಲ್ಲಿ ತನ್ನ ನಾಯಕ ನಾದ ಕೃಷ್ಣ ನನ್ನು ಕಾಣಬೇಕು, ಒಂದಾಗಬೇಕು ಎನ್ನುವ ಸಾಹಿತ್ಯಾ ಭಿನಯವನ್ನು ಬಹಳ ಸುಲಲಿತ ವಾಗಿ ಹಾಗೂ ಪ್ರಬುದ್ಧವಾಗಿ ಅಭಿನಯಿಸಿದರು.
ನಂತರ ಮಂತ್ರ ನಾಟ್ಯಕಲಾ ಗುರುಕುಲದ ಗುರು ವಿದ್ವಾನ್ ಶ್ರಾವಣ್ ಉಳ್ಳಾಲ್ ಇವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ನಡೆಯಿತು, ಹಾಡುಗಾರಿಕೆಯಲ್ಲಿ ಶೀಲಾ ದಿವಾಕರ್, ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಹಾಗೂ ಕೊಳಲಿನಲ್ಲಿ ಮುರಳೀಧರ್ ಸಹಕರಿಸಿದರು.
– ಸೌಮ್ಯ ಸುಧೀಂದ್ರ ರಾವ್