Advertisement

ಜೂ.4ಕ್ಕೆ ಮುಂಗಾರು : ಖಾಸಗಿ ಹವಾಮಾನ ಸಂಸ್ಥೆ ಸ್ಕೈಮ್ಯಾಟ್‌ ಮುನ್ಸೂಚನೆ

03:14 AM May 15, 2019 | sudhir |

ಹೊಸದಿಲ್ಲಿ/ಮಂಗಳೂರು: ದೇಶದ ರೈತರ ಬೆನ್ನೆಲುಬಾಗಿರುವ ಮುಂಗಾರು ಮಳೆ ಈ ಬಾರಿ ಕೊಂಚ ತಡವಾಗಿ ಬರಲಿದೆ. ಮೇ 22ಕ್ಕೆ ಅಂಡಮಾನ್‌ ಮತ್ತು ನಿಕೋಬಾರ್‌ಗೆ ಆಗಮಿಸಲಿರುವ ಮಾನ್ಸೂನ್‌ ಮಾರುತ, ಜೂನ್‌ 4ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನ ಸಂಸ್ಥೆ ಸ್ಕೈಮ್ಯಾಟ್‌ ಹೇಳಿದೆ.

Advertisement

ಆದರೆ ರೈತರಿಗೆ ಈ ಬಾರಿ ಕೊಂಚ ಕಹಿ ಸುದ್ದಿಯೂ ಇದೆ. ಸಾಧಾರಣಕ್ಕಿಂತ ಕೊಂಚ ಕಡಿಮೆ ಮಳೆಯಾಗಬಹುದು ಎಂದು ಸ್ಕೈಮ್ಯಾಟ್‌ ಅಂದಾಜಿಸಿದೆ. ಇದಕ್ಕೆ ಪೂರಕವಾಗಿ ಕಳೆದ ತಿಂಗಳು ಮುಂಗಾರು ಮಳೆ ಬಗ್ಗೆ ಮುನ್ಸೂಚನೆ ನೀಡಿದ್ದ ಭಾರತೀಯ ಹವಾಮಾನ ಇಲಾಖೆ, ವಾಡಿಕೆಗಿಂತ ಕೊಂಚ ಕಡಿಮೆ ಮಳೆಯಾಗಬಹುದು ಎಂದಿತ್ತು. ಹೀಗಾಗಿ ಸ್ಕೈಮ್ಯಾಟ್‌ ಕೂಡ ಇದೇ ರೀತಿಯ ಮುನ್ಸೂಚನೆ ನೀಡಿದೆ.

ಭಾರತೀಯ ಕೃಷಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಅಲ್ಲದೆ, ದೇಶದ
ಜಿಡಿಪಿಗೂ ಕೃಷಿಯ ಕೊಡುಗೆ ಸಾಕಷ್ಟಿದೆ. ಹೀಗಾಗಿ ಮುಂಗಾರು ಮಳೆ ದೇಶದ ಜಿಡಿಪಿ ಮೇಲೂ ಸಾಕಷ್ಟು ಪ್ರಭಾವ ಬೀರುತ್ತಿದೆ. ಉತ್ತಮ ಮಳೆ ಬಂದರಷ್ಟೇ ಬೆಳೆ, ದೇಶದ ಜಿಡಿಪಿಗೂ ಆದಾಯ ಎಂಬುದು ಜನಜನಿತವಾಗಿದೆ.

ಕಳೆದ ಬಾರಿ ಮಳೆ ಶೇ.6 ಕೊರತೆ
ಕರ್ನಾಟಕ ರಾಜ್ಯದಲ್ಲಿ ಜೂನ್‌ನಿಂದ ಸೆಪ್ಟಂಬರ್‌ ತಿಂಗಳವರೆಗೆ ವಾಡಿಕೆಯಂತೆ 832.3 ಮಿ.ಮೀ. ಮಳೆಯಾಗಬೇಕು. ಕಳೆದ ಬಾರಿ 781.8 ಮಿ.ಮೀ. ಮಾತ್ರ ಮಳೆಯಾಗಿತ್ತು. ಇದರಿಂದಾಗಿ ಶೇ.6ರಷ್ಟು ಮಳೆ ಕೊರತೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.5ರಷ್ಟು ಹೆಚ್ಚಳ, ಉಡುಪಿ ಜಿಲ್ಲೆಯಲ್ಲಿ ಶೇ.7ರಷ್ಟು ಹೆಚ್ಚಳ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.8ರಷ್ಟು ಕಡಿಮೆ ಮಳೆಯಾಗಿತ್ತು.

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆ
ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಈ ಬಾರಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಮಾತ್ರ ಮಳೆ ಪ್ರಮಾಣ ಕಡಿಮೆಯಾಗಿರಲಿದೆ ಎಂದು ಸ್ಕೈಮ್ಯಾಟ್‌ ತಿಳಿಸಿದೆ. ಕಳೆದ ವರ್ಷವೂ ರಾಜ್ಯದಲ್ಲಿ ಇದೇ ಸ್ಥಿತಿ ಇತ್ತು. ಸಾಮಾನ್ಯವಾಗಿ ಜೂ.1ರಂದು ಕೇರಳ ಮೂಲಕ ದೇಶಕ್ಕೆ ಮುಂಗಾರು ಪ್ರವೇಶಿಸುತ್ತದೆ. ಅನಂತರ 2-3 ದಿನಗಳಲ್ಲಿ ಕರ್ನಾಟಕ ಕರಾವಳಿಗೆ ಅಪ್ಪಳಿಸುತ್ತದೆ. ಈ ಬಾರಿ ಅದು ಜೂ. 6-7ರ ವೇಳೆಗೆ ಪ್ರವೇಶಿಸುವ ನಿರೀಕ್ಷೆ ಇದೆ.

Advertisement

ಕಳೆದ ವರ್ಷ ಮೇ 29ರಂದು ಕೇರಳ ಕರಾವಳಿ ಪ್ರವೇಶಿಸಿ ಅದೇ ದಿನ ದ.ಕ., ಉಡುಪಿಯಲ್ಲೂ ಭಾರೀ ಮಳೆಯಾಗಿತ್ತು.

ಪೂರ್ವ ಮುಂಗಾರು ಕರ್ನಾಟಕ ಕರಾವಳಿಯಲ್ಲಿ ಈ ಬಾರಿ ದುರ್ಬಲವಾಗಿತ್ತು. ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ 227.1 ಮಿ.ಮೀ. ವಾಡಿಕೆ ಮಳೆಯ ಪೈಕಿ 616.9 ಮಿ.ಮೀ. ಸರಾಸರಿ ಮಳೆಯಾಗಿ ಶೇ.172ರಷ್ಟು ಮಳೆ ಹೆಚ್ಚಳವಾಗಿತ್ತು. ಆದರೆ ಈ ಬಾರಿ ದ.ಕ.ದಲ್ಲಿ ಸದ್ಯ ಶೇ.53ರಷ್ಟು ಮಳೆ ಕೊರತೆ ಅನುಭವಿಸುತ್ತಿದೆ.

ಸ್ಕೆ  çಮ್ಯಾಟ್‌ ಎಂಬ ಖಾಸಗಿ ಹವಾಮಾನ ಸಂಸ್ಥೆ ವರದಿ ಮಾಡಿದ ಪ್ರಕಾರ ಜೂ.4ರಂದು ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಲಿದೆ. ಆದರೆ ನಿಖರವಾದ ಮಾಹಿತಿ ಯನ್ನು ಭಾರತೀಯ ಹವಾಮಾನ ಇಲಾಖೆ ನೀಡಲಿದ್ದು, ಮೇ ತಿಂಗಳ ಅಂತ್ಯಕ್ಕೆ ತನ್ನ ವರದಿ ಪ್ರಕಟಿಸಲಿದೆ.
-ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next