ಬೆಂಗಳೂರು: ಜಾರಿ ನಿರ್ದೇಶನಾಲಯದ ತೀವ್ರ ವಿಚಾರಣೆಯಿಂದ ವಿಚಲಿತನಾಗಿರುವ ಐಎಂಎ ಸಂಸ್ಥೆಯ ಮುಖ್ಯಸ್ಥ, ಪ್ರಕರಣ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮತ್ತೂಮ್ಮೆ ಎದೆ ನೋವಿನ ಕಾರಣ ಹೇಳಲು ಆರಂಭಿಸಿದ್ದು, ಸೋಮವಾರ ನಸುಕಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಬೆಳಗ್ಗೆ ವಿಚಾರಣೆ ಆರಂಭಿಸುತ್ತಿದ್ದಂತೆ ಎದೆ ನೋವಿನ ಕಾರಣ ಹೇಳಿದ್ದ ಮನ್ಸೂರ್ ಖಾನ್‌ನನ್ನು ಸಂಜೆ ವೇಳೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ದೃಢಪಡಿಸುತ್ತಿದ್ದಂತೆ ಮತ್ತೆ ಇಡಿ ಕಚೇರಿಗೆ ಕರೆದೊಯ್ದ ಅಧಿಕಾರಿಗಳು ವಿಚಾರಣೆ ನಡೆಸಿದರು.
ಆದರೆ, ಸೋಮವಾರ ನಸುಕಿನ ಮೂರು ಗಂಟೆ ಸುಮಾರಿಗೆ ಮನ್ಸೂರ್ ಖಾನ್ ಮತ್ತೆ ಎದೆ ನೋವು ಎಂದು ಹೇಳುತ್ತಿದ್ದಂತೆ ಕೂಡಲೇ ಆತನನ್ನು ಶಾಂತಿನಗರದ ಇಡಿ ಕಚೇರಿಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಲ್ಲಿ ಇಸಿಜಿ, ರಕ್ತದೊತ್ತಡ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ವರದಿಯಲ್ಲಿ ಎಲ್ಲವೂ ಸರಿಯಿದ್ದರೂ, ಮನ್ಸೂರ್ ಮಾತ್ರ ತನಗೆ ಎದೆ ನೋವಾಗುತ್ತಿದೆ ಎಂಬ ಹೇಳುತ್ತಿದ್ದಾನೆ. ವಿಚಾರಣೆಯಿಂದ ಪಾರಾಗಲು ಈ ರೀತಿಯಾಗಿ ಹೇಳುತ್ತಿರುವ ಸಾಧ್ಯತೆಯಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಚಿಕಿತ್ಸೆ ನೆಪ-ವಿಚಾರಣೆ ಶೂನ್ಯ: ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮನ್ಸೂರ್ ಖಾನ್ ತನಗೆ ಸೂಕ್ತ ಪೊಲೀಸ್ ಭದ್ರತೆ ಕೊಟ್ಟರೆ, ಕರ್ನಾಟಕಕ್ಕೆ ಬಂದು ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಹೇಳಿದ್ದ. ಆದರೆ, ಜಾರಿ ನಿರ್ದೇಶನಾಲಯ ಮೂರು ದಿನ ವಶಕ್ಕೆ ಪಡೆಯುತ್ತಿದ್ದಂತೆ ಆರೋಪಿ ಎದೆ ನೋವಿನ ಕಾರಣ ತಿಳಿಸುತ್ತಿದ್ದು, ಶನಿವಾರ ಹೊರತು ಪಡಿಸಿ ಭಾನುವಾರ ಮತ್ತು ಸೋಮವಾರ ಚಿಕಿತ್ಸೆಗಾಗಿಯೇ ಕಾಲಹರಣವಾಗಿದೆ.
ಹೀಗಾಗಿ ವಿಚಾರಣೆ ಶೂನ್ಯವಾಗಿದೆ. ಈಗಾಗಲೇ ರಾಜಕಾರಣಿಗಳು ಯಾವ ಕಾರಣಕ್ಕೆ, ಎಷ್ಟು ಪ್ರಮಾಣದಲ್ಲಿ ಹಣ ಪಡೆದಿದ್ದಾರೆ ಎಂಬ ಕೆಲ ವಿಚಾರಗಳನ್ನು ಬಹಿರಂಗ ಪಡಿಸಿದ್ದಾನೆ. ಅದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುವುದು ಬಾಕಿಯಿದೆ. ಆತ ಚೇತರಿಸಿಕೊಂಡ ಬಳಿಕ ವಿಚಾರಣೆ ಮುಂದುವರಿಸಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.