Advertisement

ಶೀಘ್ರವೇ ಮನ್ಸೂರ್‌ ಜಾಗತಿಕ ಅಪರಾಧಿ ಎಂದು ಘೋಷಣೆ?

01:04 AM Jun 16, 2019 | Lakshmi GovindaRaj |

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಶೀಘ್ರವೇ ಜಾಗತಿಕ ಆರ್ಥಿಕ ಅಪರಾಧಿ ಪಟ್ಟ ಪಡೆದುಕೊಳ್ಳಲಿದ್ದಾನೆ. ಐಎಂಎ ಕಂಪನಿ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಹೂಡಿಕೆದಾರರಿಗೆ ವಂಚಿಸಿ ತಲೆಮರೆಸಿಕೊಂಡಿರುವ ಮನ್ಸೂರ್‌ ಖಾನ್‌ ವಿರುದ್ಧ ಸದ್ಯದಲ್ಲಿಯೇ ಫ್ರಾನ್ಸ್‌ನಲ್ಲಿರುವ ಇಂಟರ್‌ಪೋಲ್‌ ಕೇಂದ್ರ ಕಚೇರಿಯಿಂದ ರೆಡ್‌ಕಾರ್ನರ್‌ ನೋಟಿಸ್‌ ಹೊರಬೀಳುವ ಸಾಧ್ಯತೆಯಿದೆ.

Advertisement

ಈಗಾಗಲೇ ರಾಜ್ಯದಲ್ಲಿರುವ ಸಿಐಡಿ (ಇಂಟರ್‌ಪೋಲ್‌ ವಿಭಾಗ) ಮನ್ಸೂರ್‌ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದೆ. ಜತೆಗೆ, ಈ ಕುರಿತ ನೋಟಿಸ್‌ನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯ ಕಳುಹಿಸಿರುವ ರೆಡ್‌ಕಾರ್ನರ್‌ ನೋಟಿಸ್‌ ಹಾಗೂ ಪತ್ರವನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಜತೆಗೆ, ಅಲ್ಲಿಂದ ಫ್ರಾನ್ಸ್‌ನಲ್ಲಿರುವ ಇಂಟರ್‌ಪೋಲ್‌ ಕಚೇರಿಗೆ ಕಳುಹಿಸಿಕೊಡಲಾಗುತ್ತದೆ. ಅಧಿಕೃತವಾಗಿ ಅಲ್ಲಿ ಮನ್ಸೂರ್‌ ಜಾಗತಿಕ ಅಪರಾಧಿ ಎಂದು ಘೋಷಿಸಿ, ರೆಡ್‌ಕಾರ್ನರ್‌ ನೋಟಿಸ್‌ ಹೊರಬೀಳಲಿದೆ. ಈ ಪ್ರಕ್ರಿಯೆಗೆ ಕೆಲ ಸಮಯ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ.

ಐಎಂಎ ನಿರ್ದೇಶಕರ ಮನೆಗಳ ಮೇಲೆ ದಾಳಿ: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಆರೋಪಿತ 7 ನಿರ್ದೇಶಕರ ನಿವಾಸಗಳ ಮೇಲೆ ಶನಿವಾರ ದಾಳಿ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ.

ಆರೋಪಿಗಳಾದ ನಿಜಾಮುದ್ದೀನ್‌, ನಾಸೀರ್‌ ಹುಸೇನ್‌, ನವೀದ್‌ ಅಹ್ಮದ್‌, ಹರ್ಷದ್‌ ಖಾನ್‌, ವಾಸಿಂ, ಅಪ್ಸರ್‌ ಪಾಷ ಅವರಿಗೆ ಸೇರಿದ ಗೋವಿಂದಪುರ, ಶಿವಾಜಿನಗರ, ಟಾಸ್ಕರ್‌ ಟೌನ್‌, ಎಚ್‌ಬಿರ್‌ ಲೇಔಟ್‌ಗಳಲ್ಲಿನ ಮನೆಗಳಲ್ಲಿ ಏಕಕಾಲದಲ್ಲಿ ಒಟ್ಟು ಆರು ತಂಡಗಳು ಶೋಧ ಕಾರ್ಯಾಚರಣೆ ನಡೆಸಿವೆ.

Advertisement

ದಾಳಿ ವೇಳೆ ಆಸ್ತಿ ಪತ್ರಗಳು, ಬ್ಯಾಂಕ್‌ ಅಕೌಂಟ್‌ ದಾಖಲೆಗಳು, ಹಾರ್ಡ್‌ ಡಿಸ್ಕ್ಗಳು ಸೇರಿದಂತೆ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅವುಗಳ ಪರಿಶೀಲನೆ ನಡೆಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ್ಯಂಬಿಡೆಂಟ್‌ ತಂದ ಸಂಕಷ್ಟ: ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಬಹುಕೋಟಿ ವಂಚನೆಯ ಆ್ಯಂಬಿಡೆಂಟ್‌ ಕೇಸ್‌ ಬಳಿಕ ಐಎಂಎಗೆ ಸಂಕಷ್ಟ ಎದುರಾಗಿತ್ತು. ಆ್ಯಂಬಿಡೆಂಟ್‌ ವಂಚನೆ ಬಳಿಕ ಹೂಡಿಕೆದಾರರು ತಮ್ಮ ಹಣವನ್ನು ವಾಪಸ್‌ ಪಡೆದುಕೊಳ್ಳಲು ಅರ್ಜಿಗಳನ್ನು ಸಲ್ಲಿಸಲು ಆರಂಭಿಸಿದರು.ದಿನೇ ದಿನೆ ಇದರ ಪ್ರಮಾಣ ಹೆಚ್ಚಾಯಿತು. ಆಗಿನಿಂದ ಅಧಿಕ ಲಾಭಾಂಶವನ್ನು ಹೂಡಿಕೆದಾರರಿಗೆ ನೀಡಲು ತೊಂದರೆ ಎದುರಾಯಿತು ಎಂದು ನಿರ್ದೇಶಕರು ಎಸ್‌ಐಟಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

“ನಮ್ಮನ್ನು ಕಂಪನಿಯ ನಿರ್ದೇಶಕರನ್ನಾಗಿ ನಾಮಕಾವಸ್ಥೆಗೆ ನೇಮಕ ಮಾಡಿಕೊಂಡಿದ್ದ ಮನ್ಸೂರ್‌, ತಿಂಗಳ ವೇತನ ನೀಡುತ್ತಿದ್ದ. ಕಂಪನಿಯ ಹಣಕಾಸು ವಹಿವಾಟು ಅಥವಾ ಕಂಪನಿಯ ಅಕೌಂಟ್‌ನಿಂದ ಹಣ ತೆಗೆಯುವ ಅಧಿಕಾರವನ್ನು ಯಾರೊಬ್ಬರಿಗೂ ನೀಡಿರಲಿಲ್ಲ” ಎಂದು ಆರೋಪಿತರು ತಿಳಿಸಿದ್ದಾರೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಸಾರ್ವಜನಿಕರು ಮಾಹಿತಿ ನೀಡಿ: ಐಎಂಎ ವಂಚನೆ ಪ್ರಕರಣದ ತನಿಖೆ ಸಲುವಾಗಿ ಎಸ್‌ಐಟಿ ಇನ್ಸ್‌ಪೆಕ್ಟರ್‌ ಮೊಹಮದ್‌ ಎಂ.ಎ ಅವರನ್ನು ಸಾರ್ವಜನಿಕ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆರೋಪಿಗಳು ಹಾಗೂ ಕೇಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ಕಚೇರಿ ಅವಧಿಯಲ್ಲಿ ಹಂಚಿಕೊಳ್ಳಬಹುದು ಎಂದು ಎಸ್‌ಐಟಿ ತಿಳಿಸಿದೆ.

ದೂರವಾಣಿ : 8431275375.
ವ್ಯಾಟ್ಸಾಪ್‌: 8431275375
ಇ-ಮೇಲ್‌: policehelp.ima@gmail.com

Advertisement

Udayavani is now on Telegram. Click here to join our channel and stay updated with the latest news.

Next