Advertisement
ಜುಲೈ 20ರಿಂದ ಆ.1ರವರೆಗೆ ಸುದೀರ್ಘ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಮೈಸೂರು ಬ್ಯಾಂಕ್ ವೃತ್ತದ ಸಮೀಪ ಇರುವ ಸೆಷನ್ಸ್ ಕೋರ್ಟ್ ಆವರಣದಲ್ಲಿರುವ ವಿಶೇಷ ನ್ಯಾಯಾಲ ಯಕ್ಕೆ ಆರೋಪಿಯನ್ನು ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.
Related Articles
Advertisement
ಈ ಮಧ್ಯೆ ಆರೋಪಿಯ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, 40 ಸಾವಿರ ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಹೀಗಾಗಿ ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ತಮ್ಮ ವಶಕ್ಕೆ ನೀಡಬೇಕು ಎಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಥವಾ ಶನಿವಾರ ಆರೋಪಿ ಮನ್ಸೂರ್ ಖಾನ್‌ನನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಆಸ್ತಿ, ಹಣದ ಫಾರೆನ್ಸಿಕ್ ಆಡಿಟ್‌ಗೆ ಒಪ್ಪಿಗೆ:
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆಯ ಆಸ್ತಿ ಹಾಗೂ ಹಣದ ‘ವಿಧಿವಿಜ್ಞಾನ ಲೆಕ್ಕಪರಿಶೋಧನೆ’ (ಫಾರೆನ್ಸಿಕ್ ಆಡಿಟ್) ಮಾಡಿಸಲು ಸರ್ಕಾರ ಒಪ್ಪಿಕೊಂಡಿದೆ.
ಐಎಂಎ ಹಗಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಹೇಳಿಕೆ ನೀಡಿದೆ.
ಪ್ರಕರಣದಲ್ಲಿ ಐಎಂಎ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004’ (ಕೆಪಿಐಡಿ ಕಾಯ್ದೆ) ಅನ್ವಯ ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರವಾಗಿ ನೇಮಕ ಮಾಡಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ವಿ. ರಶ್ಮಿ ಮಹೇಶ್ ಅವರು ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿಧಿವಿಜ್ಞಾನ ಲೆಕ್ಕ ಪರಿಶೋಧನೆ ಕುರಿತು ಪ್ರಸ್ತಾಪಿಸಿದ್ದಾರೆ.
ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಐಡಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಐಎಂಎ ನಡೆಸುತ್ತಿದ್ದ ‘ಅನಿಯಂತ್ರಿತ ಠೇವಣಿ ಯೋಜನೆ’ಗಳಿಗೆ ಹಣದ ಒಳಹರಿವು ಹಾಗೂ ಹೊರಹರಿವಿನ ಜಾಡು ಹಿಂಬಾಲಿಸಲಾಗುತ್ತಿದೆ. ಜೊತೆಗೆ ಸಂಸ್ಥೆಯ ಆಸ್ತಿ ಹಾಗೂ ಹಣದ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸಲು ಸಕ್ಷಮ ಪ್ರಾಧಿಕಾರ ಸಿದ್ದವಿದ್ದು, 15 ದಿನಗಳಲ್ಲಿ ಈ ಸಂಬಂಧದ ತಾಂತ್ರಿಕ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಲೆಕ್ಕಪರಿಶೋಧನೆ ಆರಂಭಿಸಿ 90 ದಿನಗಳಲ್ಲಿ ಮುಕ್ತಾಯಗೊಳಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ತನಿಖಾ ಪ್ರಗತಿ ವರದಿ ಸಲ್ಲಿಕೆ: ಇದೇ ವೇಳೆ ಪ್ರಕರಣದ ತನಿಖೆಗೆ ರಚಿಸಲಾಗಿರುವ ‘ವಿಶೇಷ ತನಿಖಾ ತಂಡ’ (ಎಸ್‌ಐಟಿ) ಈವರೆಗಿನ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿತು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿರುವುದರಿಂದ ಅದರ ಗೌಪ್ಯತೆ ಕಾಪಾಡಬೇಕಾಗಿದೆ. ಹಾಗಾಗಿ, ಅದರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ವರದಿಯನ್ನು ಗಮನಿಸಿದಾಗ ತನಿಖೆಯನ್ನು ಮತ್ತೂಂದು ಸಂಸ್ಥೆಗೆ ವರ್ಗಾಯಿಸುವ ಅಗತ್ಯತೆ ಈ ಹಂತದಲ್ಲಿ ಕಂಡುಬರುತ್ತಿಲ್ಲ. ಮುಂದಿನ ವಿಚಾರಣೆ ವೇಳೆಗೆ, ಎಸ್‌ಐಟಿ ಮತ್ತೂಂದು ವರದಿ ಸಲ್ಲಿಸಲಿ ಅದರ ಬಳಿಕ ಪರಿಶಿಲಿಸೋಣ ಎಂದು ಹೇಳಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ವರದಿಯು ಮುಚ್ಚಿದ ಲಕೋಟೆಯಲ್ಲೇ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ಕಸ್ಟಡಿಯಲ್ಲಿರಲಿ ಎಂದು ನಿರ್ದೇಶನ ನೀಡಿತು.