ಸವದತ್ತಿ : ಮುಂಗಾರು ಹಂಗಾಮು ಆರಂಭಗೊಂಡಿದ್ದು, ರೈತಾಪಿ ವರ್ಗ ಬಿತ್ತನೆ ಕಾರ್ಯಕ್ಕೆ ಮುಂದಾಗಿದೆ. ಆದರೆ ಕೃಷಿ ಇಲಾಖೆಯಿಂದ ಸಮರ್ಪಕ ಬೀಜ, ರಸಗೊಬ್ಬರದ ಪೂರೈಕೆಯಿಲ್ಲದೆ ನಿತ್ಯ ಕೃಷಿ ಪರಿಕರಕ್ಕಾಗಿ ಅಲೆದಾಡುವ ಸ್ಥಿತಿ ರೈತನದ್ದಾಗಿ ತಾಲೂಕಿನ ಕೃಷಿ ಹಿನ್ನಡೆ ಕಾಣುತ್ತಿದೆ.
ತಾಲೂಕಿನಲ್ಲಿ 4 ರೈತ ಸಂಪರ್ಕ ಕೇಂದ್ರ ಹಾಗೂ ಪಿಕೆಪಿಎಸ್ ಸೇರಿ ಒಟ್ಟು 15 ವಿತರಣಾ ಕೇಂದ್ರಗಳಿವೆ. ಆದರೂ ಸಮರ್ಪಕ ಗೊಬ್ಬರವೇ ಸಿಗುತ್ತಿಲ್ಲ. ಸಮರ್ಪಕ ಪ್ರಮಾಣದ ಪೂರೈಕೆಯಿಲ್ಲದಾಗಿ ರೈತರಿಗೆ ಅವಶ್ಯವಿರುವಷ್ಟು ಗೊಬ್ಬರ ಇಲಾಖೆಯಿಂದ ಸಿಗುತ್ತಿಲ್ಲ. ಸಕಾಲಕ್ಕೆ ಉತ್ತಮ ಮಳೆ ಸುರಿದರೂ ಆರ್ ಎಸ್‍ಕೆ ಸೇರಿ ಪಿಕೆಪಿಎಸ್‍ಗಳಲ್ಲಿ ಬಿತ್ತನೆಗೆ ಪೂರಕವಾಗುವ ಡಿಎಪಿ, 10:26, 12:32:16, ಯೂರಿಯಾ, ಪೋಟ್ಯಾಶ ಗೊಬ್ಬರಗಳಿಲ್ಲದೇ ರೈತ ಕಂಗಾಲಾಗಿದ್ದಾರೆ.
ಇದನ್ನೂ ಓದಿ : ಗೋವಾದಲ್ಲಿ ಬಿಜೆಪಿ ಸರ್ಕಾರ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ : ಪರಬ್
ಬಿತ್ತನೆಗಾಗಿ ಸಕಲ ಸನ್ನದ್ಧವಾಗಿಸಿದ ಭೂಮಿಯಲ್ಲಿ ಹದವಾದ ಮಳೆ ಸುರಿದು ನಗುಮೊಗದಲ್ಲಿದ್ದ ರೈತ ಗೊಬ್ಬರದ ಕೊರತೆಯಿಂದ ವಿಧಿಯಿಲ್ಲದೇ ಬೇರೆ ತಾಲೂಕು, ಜಿಲ್ಲೆಗಳ ಮೊರೆ ಹೋಗುತ್ತಿದ್ದಾರೆ. ಕೆಲ ದಿನಗಳಿಂದ ಆಧಾರ ಕಾರ್ಡ ಹೊಂದಿದ ರೈತರಿಗೆ 3 ಮೂಟೆ ಗೊಬ್ಬರ ಲಭಿಸುತ್ತಿದೆ. ಇನ್ನು ಹೆಚ್ಚು ಅವಶ್ಯವಿದ್ದಲ್ಲಿ ಗೊಬ್ಬರ ಇಲ್ಲವೆಂದು ಕೇಂದ್ರಗಳ ಸಿಬ್ಬಂದಿ ಮರಳಿ ಕಳಿಸುತ್ತಿದ್ದಾರೆ. 1 ಎಕರೆ ರೈತನಿಗೂ ಅಷ್ಟೇ, 10 ಎಕರೆ ರೈತರಿಗೂ ಅಷ್ಟೇ ಗೊಬ್ಬರ ನೀಡಲಾಗುತ್ತಿದೆ.
– ಡಿ.ಎಸ್. ಕೊಪ್ಪದ