ಬೆಂಗಳೂರು: ರಾಜ್ಯಕ್ಕೆ ಶುಕ್ರವಾರ ಮುಂಗಾರು ಪ್ರವೇಶವಾಗಿದೆ. ಚಂಡಮಾರುತ ಹಾಗೂ ಕೇರಳದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೂನ್.4ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು, ಮೊದಲ ದಿನವೇ ರಾಜ್ಯದಲ್ಲಿ ಭಾರೀ ಮಳೆ ಆಗಿದೆ. ರಾಜ್ಯಕ್ಕೆ ಜೂನ್ 5 ಅಥವಾ 7ಕ್ಕೆ ಮುಂಗಾರು ಪ್ರವೇಶವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಮುಂದಿನ ಎರಡರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗಲಿದ್ದು, ಜೂನ್ 6ಕ್ಕೆ ಮಳೆ ತಾತ್ಕಾಲಿಕವಾಗಿ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೂನ್ 5ಕ್ಕೆ ರೆಡ್ ಅಲರ್ಟ್ ಹಾಗೂ ಜೂನ್ 6ಕ್ಕೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂನ್.5ಕ್ಕೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜೂನ್5ಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ :ಮೃತ ಮಾವುತನಿಗೆ ಆನೆಯ ಶ್ರದ್ಧಾಂಜಲಿ! ಕಣ್ಣೀರಿಟ್ಟು ಅಂತಿಮ ನಮನ ಸಲ್ಲಿಸಿದ ಗಜರಾಜ
ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಅಂಕಿ – ಅಂಶದ ಪ್ರಕಾರ, ಸುಬ್ರಹ್ಮಣ್ಯ ಹಾಗೂ ದಕ್ಷಿಣ ಕನ್ನಡದಲ್ಲಿ 11 ಸೆಂ.ಮೀ ಮಳೆ ಆಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 11 ಸೆಂ.ಮೀ, ಸಂಕೇಶ್ವರ 9 ಸೆಂ.ಮೀ, ಕಾರವಾರ,ಬಾದಮಿ ಹಾಗೂ ಬರಗೂರಿನಲ್ಲಿ ತಲಾ 7 ಸೆಂ.ಮೀ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆ ಆಗಿರುವುದು ವರದಿ ಆಗಿದೆ.