Advertisement
ಕೇರಳ ಹಾಗೂ ಕೊಡಗಿನಲ್ಲಿ ನಿರೀಕ್ಷೆಯಂತೆ ಮಳೆಯಾಗದಿರುವುದರಿಂದ ಕಾವೇರಿ ಕಣಿವೆ ಪ್ರದೇಶದಲ್ಲಿರುವ ಜಲಾಶಯಗಳಿಗೆ ಒಳಹರಿವೇ ಇಲ್ಲದಂತಾಗಿದೆ. ಕೃಷ್ಣರಾಜಸಾಗರ, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳ ನೀರಿನ ಮಟ್ಟ ತಳ ಸೇರಿದೆ. ಒಂದೆಡೆ ಮಳೆಯೂ ಇಲ್ಲದೆ, ಜಲಾಶಯಗಳಲ್ಲಿ ನೀರೂ ಇಲ್ಲದೆ ಭೂಮಿಯನ್ನು ಹದಗೊಳಿಸಲಾಗದೆ ರೈತರು ಕಂಗಾಲಾಗಿದ್ದಾರೆ. ಬರಗಾಲದ ಕರಿನೆರಳು ಜಿಲ್ಲೆಯನ್ನು ಆವರಿಸುವ ಭೀತಿ ಎದುರಾಗಿದೆ.
Related Articles
Advertisement
ಹಿಂದಿನ ವರ್ಷವೂ ಜುಲೈ ನಲ್ಲಿ ಶೇ.41, ಆಗಸ್ಟ್‌ನಲ್ಲಿ ಶೇ.40, ಸೆಪ್ಟೆಂಬರ್‌ನಲ್ಲಿ ಶೇ.25, ಅಕ್ಟೋಬರ್‌ನಲ್ಲಿ ಶೇ.22, ನವೆಂಬರ್‌ನಲ್ಲಿ ಶೇ.75 ಹಾಗೂ ಡಿಸೆಂಬರ್ ತಿಂಗಳಲ್ಲಿ ಶೇ.71ರಷ್ಟು ಮಳೆ ಕೊರತೆಯನ್ನು ಜಿಲ್ಲೆ ಎದುರಿಸಿತ್ತು. ಆದರೆ, ಕೃಷ್ಣರಾಜಸಾಗರ ಜಲಾಶಯ ನಿಗದಿತ ಅವಧಿಗೂ ಮುನ್ನವೇ ಭರ್ತಿಯಾಗಿದ್ದರಿಂದ ಹಾಗೂ ಪ್ರವಾಹ ಸೃಷ್ಟಿಯಾಗಿದ್ದರಿಂದ ಮಳೆಯಾಶ್ರಿತ ಪ್ರದೇಶದ ಜನರನ್ನು ಹೊರತುಪಡಿಸಿ ನೀರಾವರಿ ಆಶ್ರಿತ ಪ್ರದೇಶದ ರೈತರನ್ನು ಬರ ಬಾಧಿಸಲಿಲ್ಲ.
2019ರಲ್ಲಿ ಪೂರ್ವ ಮುಂಗಾರು ನಿರೀಕ್ಷೆಯಂತೆ ಬರಲಿಲ್ಲ. ಬಿತ್ತನೆಗೆ ಅನುಕೂಲವಾಗುವಂತೆ ರೈತರು ಭೂಮಿಯನ್ನು ಹದಗೊಳಿಸುವುದಕ್ಕೆ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಮುಂಗಾರು ಕಣ್ಣಾಮುಚ್ಚಾಲೆಯಾಡುತ್ತಿದೆ. ದಿನವಿಡೀ ಮೋಡ-ಬಿಸಿಲಿನ ಆಟ ನಡೆಯುತ್ತಿದೆಯೇ ವಿನಃ ಮಳೆ ಬೀಳುತ್ತಲೇ ಇಲ್ಲ. ಆಗಸದಲ್ಲಿ ಮೋಡಗಳು ಸೃಷ್ಟಿಯಾಗಿದ್ದರೂ ಮಳೆಯಾಗುತ್ತಿಲ್ಲ.
ಏಕದಳ, ದ್ವಿದಳ ಧಾನ್ಯ ಬಿತ್ತನೆ: ಇತ್ತೀಚೆಗೆ ಬಿದ್ದ ಅಲ್ಪಸ್ವಲ್ಪ ಮಳೆಯಿಂದಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಹೆಸರು, ಅವರೆ, ಉದ್ದು ಸೇರಿದಂತೆ ದ್ವಿದಳ ಧಾನ್ಯಗಳನ್ನು ಭೂಮಿಗೆ ಚೆಲ್ಲಿದ್ದಾರೆ. ಭೂಮಿಯಲ್ಲಿರುವ ತೇವಾಂಶದಿಂದ ಮೊಳಕೆಯೊಡೆದು ನಿಂತಿವೆ. ಆದರೆ, ಈಗ ಮಳೆ ಬೀಳದಿದ್ದರೆ ಈ ಧಾನ್ಯಗಳೂ ರೈತರ ಕೈಸೇರದಂತಾಗುತ್ತದೆ. ಭೂಮಿ ಹದಗೊಳಿಸಲು, ಕಬ್ಬು ಬೆಳೆ ಉಳಿಸಿಕೊಳ್ಳಲು, ಏಕದಳ ಧಾನ್ಯಗಳು ಬೆಳವಣಿಗೆಗೆ ಮಳೆ ಅತ್ಯಂತ ಅವಶ್ಯಕವಾಗಿದೆ. ಆದರೆ, ವರುಣ ಮುನಿದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಣಗಿರುವ ಕೆರೆ-ಕಟ್ಟೆಗಳು: ಜಿಲ್ಲೆಯಲ್ಲಿರುವ ಕೆರೆ-ಕಟ್ಟೆಗಳು ನೀರಿಲ್ಲದೆ ಒಣಗಿಹೋಗಿವೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಜನ-ಜಾನುವಾರುಗಳು ನೀರಿಗೆ ಪರದಾಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಮಳೆ ಬೀಳದಿದ್ದರೆ ಬದುಕೇ ಇಲ್ಲ ಎಂಬ ಪರಿಸ್ಥಿತಿ ನೆಲೆಸಿದೆ. ಇಂತಹ ಕಠಿಣ ಸನ್ನಿವೇಶದಲ್ಲೂ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟ ರೈತರನ್ನು ದಿಕ್ಕೆಡಿಸುವಂತೆ ಮಾಡಿದೆ.
ಮಳೆ ಇಲ್ಲದೆ ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಪಾತಾಳ ಸೇರಿಕೊಂಡಿದೆ. ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಖರೀದಿಯೊಂದಿಗೆ ಕೃಷಿ ಚಟುವಟಿಕೆಗಳಿಗೆ ಚಾಲನೆ ಕೊಡುವುದಕ್ಕೆ ರೈತರು ಸಿದ್ಧತೆ ಮಾಡಿಕೊಂಡಿದ್ದರೂ ಮಳೆಯಿಲ್ಲದೆ ಭೂಮಿಯನ್ನು ಸಿದ್ಧಗೊಳಿಸಲಾಗುತ್ತಿಲ್ಲ, ಮಳೆ ಕೊರತೆಯಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿದೆ.
ರೈತರು ಮಳೆಗಾಗಿ ನಿರೀಕ್ಷೆಯಿಂದ ಆಗಸದತ್ತ ಎದುರುನೋಡುತ್ತಿದ್ದಾರೆ. ವರುಣ ದೇವನಿಗೆ ಪೂಜೆ-ಪುನಸ್ಕಾರ ನೆರವೇರಿಸಿ ಮಳೆಗಾಗಿ ಮೊರೆ ಇಟ್ಟಿದ್ದಾರೆ. ರಾಜ್ಯಸರ್ಕಾರವೂ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ ನೆರವೇರಿಸಿದೆ. ಆದರೆ, ಯಾರ ಮೊರೆಗೂ ವರುಣ ಕೃಪೆ ತೋರುತ್ತಿಲ್ಲ. ಮುಂದಿನ ದಿನಗಳಲ್ಲಿ ದುರ್ಬಲಗೊಂಡಿರುವ ಮುಂಗಾರು ಚುರುಕುಗೊಳ್ಳಬಹುದೆಂಬ ನಿರೀಕ್ಷೆ ಇದೆ. ಆದರೆ, ಮುಂಗಾರು ಚೇತರಿಕೆ ಕಾಣದಿದ್ದರೆ ಭೀಕರ ಬರಗಾಲದ ಕರಾಳತೆಗೆ ಜಿಲ್ಲೆ ಸಿಲುಕಿದಂತಾಗುತ್ತದೆ.