Advertisement

ಮುಂಗಾರು ಮುನಿಸು: ತರಕಾರಿ ಗ್ರಾಮ ಚಾರ್ವಾಕದಲ್ಲಿ ಕೃಷಿಗೆ ಬರ

12:30 AM Jul 21, 2019 | sudhir |

ಕಾಣಿಯೂರು: ಚಾರ್ವಾಕ ಗ್ರಾಮ ಪರಿಚಯವಾಗುವುದು ತರಕಾರಿ ಕೃಷಿಯಿಂದ. ಜಿಲ್ಲೆಗೆ ಅತೀ ಹೆಚ್ಚು ತರಕಾರಿ ಪೂರೈಕೆಯಾಗುವುದು ಈ ಗ್ರಾಮದಿಂದಲೇ. ಇಲ್ಲಿನ ಹೆಚ್ಚಿನ ಕುಟುಂಬಗಳು ತರಕಾರಿ ಬೆಳೆಯನ್ನೇ ನೆಚ್ಚಿಕೊಂಡೇ ಜೀವನ ಸಾಗಿಸುತ್ತಿವೆ. ಆದರೆ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ತರಕಾರಿ ಬೆಳೆಗೆ ಹಿನ್ನಡೆಯಾಗಿದೆ.

Advertisement

ಮುಂಗಾರು ಮಳೆಯ ಅಬ್ಬರವಿಲ್ಲದೆ ತರಕಾರಿ ಕೃಷಿ ಮಾಡುವ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ನೀರನ್ನು ಆಶ್ರಯಿಸಿ ಬೆಳೆಯುವ ತರಕಾರಿ ಗಿಡಗಳಿಗೆ ಇತ್ತೀಚೆಗೆ ಸುರಿಯುವ ಅಲ್ಪ ಪ್ರಮಾಣದ ಮಳೆ ಸಾಕಾಗುತ್ತಿಲ್ಲ. ಹಾಗಾಗಿ ತರಕಾರಿ ಕೃಷಿಯನ್ನು ಜೀವನಾಧರವಾಗಿಸಿಕೊಂಡ ಈ ಭಾಗದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ. ಇದು ರೈತನ ಆತ್ಮಬಲವನ್ನು ಕುಗ್ಗಿಸಿದೆ.

ಚಪ್ಪರವೇರುವ ಹಂತಕ್ಕೇ ಬಂದಿಲ್ಲ

ಮಳೆಗಾಲದಲ್ಲಿ ಮುಳ್ಳು ಸೌತೆ, ಹೀರೆಕಾಯಿ ಹೆಚ್ಚಾಗಿ ಬೆಳೆಯುತ್ತಾರೆ. ಮೇ ತಿಂಗಳ ಅಂತ್ಯಕ್ಕೆ ತರಕಾರಿ ಬೀಜ ಹಾಕಿದರೆ ಜೂನ್‌ ತಿಂಗಳ ಮಧ್ಯದಲ್ಲಿ ಬಳ್ಳಿಗಳು ಚಪ್ಪರ ತುಂಬಿಕೊಳ್ಳುತ್ತವೆ. ಆಗಸ್ಟ್‌ ತಿಂಗಳ ಆರಂಭದಲ್ಲಿ ತರಕಾರಿ ಕೊಯ್ಯುವ ಹಂತಕ್ಕೆ ತಲುಪುತ್ತದೆ. ಆದರೆ ಈ ಬಾರಿ ಇನ್ನೂ ತರಕಾರಿ ಬಳ್ಳಿಗಳು ಚಪ್ಪವೇರುವ ಹಂತಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಮಳೆಯ ಅಬ್ಬರ ಕಡಿಮೆಯಾದಲ್ಲಿ ಮತ್ತೆ ತರಕಾರಿ ಬೆಳೆಗೆ ಕುತ್ತುಬರಲಿದೆ. ಕಳೆದ ವರ್ಷದ ಕೃಷಿಗೆ ಹೋಲಿಕೆ ಮಾಡಿದರೆ ಈ ವರ್ಷ ಮಳೆ ಅಭಾವದಿಂದ ಬೆಳೆ ಉತ್ಪನ್ನ ಕುಂಠಿತವಾಗಲಿದೆ ಎನ್ನುತ್ತಾರೆ ರೈತರು.

ಚಾರ್ವಾಕದವರು ನೆರೆಯ ಗ್ರಾಮ ದಲ್ಲೂ ತರಕಾರಿ ಕೃಷಿ ಮಾಡುತ್ತಾರೆ. ಚಾರ್ವಾಕದ ಯುವಕರು ನೆರೆಯ ಕಾಣಿಯೂರು, ಬೆಳಂದೂರು, ಸವಣೂರು, ಪಾಲ್ತಾಡಿ ಗ್ರಾಮಗಳಲ್ಲಿ ಜಾಗವನ್ನು ಲೀಸ್‌ಗೆ ಪಡೆದು ತರಕಾರಿ ಕೃಷಿ ಮಾಡುತ್ತಾರೆ. ಜಿಲ್ಲೆಯ ಇನ್ನಿತರ ಕಡೆಯಲ್ಲೂ ತರಕಾರಿ ಕೃಷಿ ಮಾಡುವ ಮಂದಿಗೆ ಮಳೆ ಅಭಾವ ತೊಂದರೆ ನೀಡಿದೆ. ಕೆಲವೆಡೆ ಈಗಷ್ಟೆ ಬೀಜ ಬಿತ್ತನೆಗೆ ಆರಂಭಿಸಿದರೆ ಇನ್ನುಳಿದಂತೆ ಇನ್ನೂ ಕೃಷಿ ಕಾಯಕ ಆರಂಭವಾಗಿಲ್ಲ.

Advertisement

ಗ್ರಾಮದಲ್ಲಿ ತರಕಾರಿ ಬೆಳೆಯುವುದರಲ್ಲಿ ವಿದ್ಯಾವಂತ ಯುುವಸಮುದಾಯದ ಪಾಲು ಹೆಚ್ಚಾಗಿದೆ. ವೈಟ್ ಕಾಲರ್‌ ಜಾಬ್‌ಗ ಮಾರು ಹೋಗದೆ ತಮ್ಮದೆ ನೆಲದಲ್ಲಿ ಸಾಂಪ್ರದಾಯಿಕ ಕೃಷಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕುಂಬಳಕಾಯಿ, ಪಡವಲಕಾಯಿ, ಅಲಸಂಡೆ, ಸೌತೆಕಾಯಿ ತರಕಾರಿ ಬೆಳೆದು ಲಾಭ ಗಳಿಸುತ್ತಿದ್ದಾರೆ.

ಮಳೆ ಅಭಾವದಿಂದ ತೊಂದರೆ

ಕಳೆದ ಹಲವು ವರ್ಷಗಳಿಂದ ತರಕಾರಿ ಕೃಷಿ ಮಾಡುತ್ತಿದ್ದೇನೆ. ಈ ಭಾಗದಲ್ಲಿ ಬೆಳೆದ ತರಕಾರಿಗಳನ್ನು ಮಂಗಳೂರು, ಸುಳ್ಯ ಭಾಗಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಮಳೆ ಅಭಾವದಿಂದ ತರಕಾರಿ ಕೃಷಿ ಕಾಯಕ ತಡವಾಗಿದೆ. ಇತ್ತೀಚಿನ ಕೆಲ ದಿನಗಳಿಂದ ಸುರಿಯುವ ಅಲ್ಪ ಮಳೆಯನ್ನು ನಂಬಿ ತರಕಾರಿ ಕೃಷಿ ಪ್ರಾರಂಭ ಮಾಡಲಾಗಿದೆ. ಮಳೆ ಚೆನ್ನಾಗಿಯಾಗಿದ್ದರೆ ಹೆಚ್ಚು ಬೆಳೆಯನ್ನು ನಿರೀಕ್ಷಿಸಬಹುದು.
– ಮೋಹನ ನಾಣಿಲ, ತರಕಾರಿ ಕೃಷಿಕ

ಮಾರುಕಟ್ಟೆಗೆ ಬಂದಿಲ್ಲ

ಕಳೆದ ಇಪತ್ತು ವರ್ಷಗಳಿಂದ ಚಾರ್ವಾಕ ಭಾಗದ ರೈತರಿಂದ ತರಕಾರಿಗಳನ್ನು ಖರೀದಿಸುತ್ತೇನೆ. ಈ ಬಾರಿ ಈ ಭಾಗದ ತರಕಾರಿಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಮಳೆ ಪ್ರಮಾಣ ಕಡಿಮೆಯಾದ ಕಾರಣ ತರಕಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಬಹುದು.
– ಶರೀಫ್‌ ಮಂಗಳೂರು, ತರಕಾರಿ ವ್ಯಾಪಾರಿ

ಯುವಸಮುದಾಯವೇ ಮುಂದು

ಗ್ರಾಮದಲ್ಲಿ ತರಕಾರಿ ಬೆಳೆಯುವುದರಲ್ಲಿ ವಿದ್ಯಾವಂತ ಯುುವಸಮುದಾಯದ ಪಾಲು ಹೆಚ್ಚಾಗಿದೆ. ವೈಟ್ ಕಾಲರ್‌ ಜಾಬ್‌ಗ ಮಾರು ಹೋಗದೆ ತಮ್ಮದೆ ನೆಲದಲ್ಲಿ ಸಾಂಪ್ರದಾಯಿಕ ಕೃಷಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕುಂಬಳಕಾಯಿ, ಪಡವಲಕಾಯಿ, ಅಲಸಂಡೆ, ಸೌತೆಕಾಯಿ ತರಕಾರಿ ಬೆಳೆದು ಲಾಭ ಗಳಿಸುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next