Advertisement

ಮುಂಗಾರು ಬಿರುಸಿಗೆ ಅಡ್ಡಿಯಾದ ಬೇಸಗೆ ಮಳೆ : ವಾರದೊಳಗೆ ಮತ್ತೆ ಮಳೆ ನಿರೀಕ್ಷೆ

11:39 PM Jun 09, 2022 | Team Udayavani |

ಮಂಗಳೂರು : ರಾಜ್ಯ ಕರಾವಳಿಗೆ ಜೂನ್‌ ಆರಂಭದಲ್ಲೇ ಪ್ರವೇಶ ಪಡೆದ ಮುಂಗಾರು ಒಂದೇ ದಿನದಲ್ಲಿ ಕ್ಷೀಣಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸುರಿದ ಬಿರುಸಿನ ಬೇಸಗೆ ಮಳೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಹವಾಮಾನ ವಿಜ್ಞಾನಿಗಳು.

Advertisement

ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದರೆ ಮುಂದೆ ಅಪ್ಪಳಿಸುವ ಮುಂಗಾರು ಮಾರುತದ ಪ್ರಭಾವ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಬೇಸಗೆ ಮಳೆ ಕಡಿಮೆಯಾದರೆ ಭೂ ಭಾಗದಲ್ಲಿ ತೇವಾಂಶವೂ ಕಡಿಮೆಯಾಗಿ, ಆಗ ಉಷ್ಣಾಂಶದಲ್ಲಿ ಏರಿಕೆ ಕಂಡು ವಾತಾವರಣದ ಒತ್ತಡ ಕಡಿಮೆ ಇರುತ್ತದೆ. ಆಗ ಹಿಂದೂ ಮಹಾಸಾಗರದಿಂದ ಬಂದಂತಹಾ ಮುಂಗಾರು ಮಾರುತ ವೇಗ ಪಡೆದು ಉತ್ತಮ ಮಳೆ ಸುರಿಯುತ್ತದೆ. ಆದರೆ ಕರಾವಳಿ ಭಾಗದಲ್ಲಿ ಜನವರಿಯಿಂದ ಸುರಿಯುವ ಬೇಸಗೆ ಮಳೆ ಬಿರುಸು ಪಡೆದು ವಾಡಿಕೆಗಿಂತ ಉತ್ತಮ ಬೇಸಗೆ ಮಳೆಯಾಗಿತ್ತು. ಪರಿಣಾಮ ಕರಾವಳಿಯಲ್ಲಿ ಮುಂಗಾರು ಮಾರುತದ ಮೇಲೆ ಪ್ರಭಾವ ಬೀರಿದೆ.

ತಗ್ಗಿದ ಬಿರುಸು: ಮೇ ಅಂತ್ಯದಲ್ಲಿ ಕೇರಳ ಕರಾವಳಿಗೆ ಕಾಲಿಟ್ಟ ಮುಂಗಾರು ಜೂನ್‌ 1ರಂದು ರಾಜ್ಯ ಕರಾವಳಿಗೆ ತಲಪಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಂದು ದಿನ ಬಿರುಸಿನ ಮಳೆಯಾದ ಬಳಿಕ ಮಳೆ ತಗ್ಗಿತ್ತು. ಹವಾಮಾನ ಅಧಿಕಾರಿಗಳ ಪ್ರಕಾರ ಮುಂಗಾರು ಸಮಯದಲ್ಲಿ ಮಳೆ ತರುವ ಮೋಡಗಳು ಸೃಷ್ಟಿಯಾಗಬೇಕು. ಆದರೆ ಸದ್ಯ ಅಂತಹ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಪರಿಣಾಮ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ವಾರದೊಳಗೆ ಮಳೆ ಬಿರುಸು ಪಡೆಯುವ ನಿರೀಕ್ಷೆ ಇದೆ.

ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ರಾಜ್ಯ ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ಶೇ. 76ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 71, ಉಡುಪಿ ಜಿಲ್ಲೆಯಲ್ಲಿ ಶೇ. 70, ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 83ರಷ್ಟು ಮಳೆ ಕಡಿಮೆ ಸುರಿದಿದೆ.

2 ವರ್ಷದಿಂದ ಇದೇ ಪರಿಸ್ಥಿತಿ
ರಾಜ್ಯ ಕರಾವಳಿ ಭಾಗದಲ್ಲಿ ಕಳೆದ ಎರಡು ವರ್ಷದಿಂದ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿತ್ತು. 2021ರಲ್ಲಿ ಜೂನ್‌ 4ರಂದು ಕರಾವಳಿಗೆ ಮುಂಗಾರು ಅಪ್ಪಳಿಸಿ ನಾಲ್ಕೇ ದಿನದಲ್ಲಿ ಕ್ಷೀಣಿಸಿತ್ತು. 2020ರಲ್ಲಿಯೂ ಮುಂಗಾರು ಆಗಮಿಸಿದ ಕೆಲವೇ ದಿನಗಳಲ್ಲಿ ದುರ್ಬಲಗೊಂಡಿತ್ತು. ಮುಂಗಾರು ಅಪ್ಪಳಿಸುವ ವೇಳೆಗಾಗಲೇ ಅರಬಿ ಸಮುದ್ರದಲ್ಲಿ “ನಿಸರ್ಗ’ ಹೆಸರಿನ ಚಂಡಮಾರುತ ಸೃಷ್ಟಿಯಾಗಿತ್ತು. ಇದು ಮಳೆ ಸುರಿಸುವ ಮೋಡಗಳನ್ನು ಮಹಾರಾಷ್ಟ್ರದತ್ತ ಸೆಳೆದಿತ್ತು. ಇದೀಗ ಮತ್ತೆ ಅದೇ ರೀತಿಯ ವಾತಾವರಣ ಸೃಷ್ಟಿಯಾಗಿದ್ದು, ಮಳೆ ಸುರಿಸುವ ಮೋಡ ಸೃಷ್ಟಿಯಾಗುತ್ತಿಲ್ಲ.

Advertisement

ಬೇಸಗೆ ಮಳೆ ಬಿರುಸಿನಿಂದ ಕೂಡಿದ್ದರೆ ಸಾಮಾನ್ಯವಾಗಿ ಮುಂಗಾರು ಆರಂಭದಲ್ಲಿಯೇ ಕ್ಷೀಣಿಸುತ್ತದೆ. ರಾಜ್ಯ ಕರಾವಳಿಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿತ್ತು. ಸದ್ಯ ಮಳೆ ತರುವ ಮೋಡ ಸೃಷ್ಟಿಯಾಗುತ್ತಿಲ್ಲ. ಮುಂದಿನ ವಾರದೊಳಗೆ ಮುಂಗಾರು ಮತ್ತೆ ಬಿರುಸು ಪಡೆಯುವ ನಿರೀಕ್ಷೆ ಇದೆ.
– ಡಾ| ರಾಜೇಗೌಡ, ಕೃಷಿ ವಿ.ವಿ. ಹವಾಮಾನ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next