Advertisement

ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು

09:17 PM Nov 23, 2019 | Lakshmi GovindaRaj |

ಹಾಸನ: ದೇಶ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಟಿಪ್ಪು ಸುಲ್ತಾನ್‌ ಅವರನ್ನು ನಾವು ಸ್ಮರಿಸಬೇಕು. ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು. ಅದನ್ನು ಪ್ರತಿಯೊಬ್ಬರೂ ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್‌ ಅವರು ಹೇಳಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಟಿಪ್ಪು ಇತಿಹಾಸ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಇತಿಹಾಸದಲ್ಲಿ ಟಿಪ್ಪು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಬ್ರಿಟಿಷರಿಂದ ಟಿಪ್ಪು ಬಗ್ಗೆ ಅಪಪ್ರಚಾರ: ಟಿಪ್ಪು ಸುಲ್ತಾನ್‌ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ಅತನನ್ನು ನೇರವಾಗಿ ಎದುರಿಸಲಾಗದೇ ಬ್ರಿಟಿಷರು ಟಿಪ್ಪು ಹಿಂದೂಗಳ ವಿರೋಧಿ ಎಂದು ಮುಸ್ಲಿಮರರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು ಎಂದು ಆಪಾದಿಸಿದರು. ಮೈಸೂರು ಸಂಸ್ಥಾನದ ಮೇಲೆ ಟಿಪ್ಪು ದುರಾಕ್ರಮಣ ಮಾಡಿದ್ದ. ಟಿಪ್ಪುವನ್ನು ಮಣಿಸಿ ಮೈಸೂರು ಸಂಸ್ಥಾನವನ್ನು ಮರು ಸ್ಥಾಪನೆ ಮಾಡಿದ್ದೇವೆ ಎಂದು ಬ್ರಿಟಿಷರು ಬಿಂಬಿಸಿದ್ದರು. ವಾಸ್ತವವಾಗಿ ಟಿಪ್ಪು ಎಂದೂ ಮೈಸೂರು ಸಂಸ್ಥಾನದ ವಿರೋಧಿಯಾಗಿರಲಿಲ್ಲ. ಬಿಜೆಪಿ ಸರ್ಕಾರ ಮತ್ತು ಹಿಂದೂ ಸಂಘಟನೆಗಳು ಈಗ ಬ್ರಿಟಿಷರ ಕುಟಿಲ ನೀತಿಯನ್ನೇ ಅನುಸರಿಸುತ್ತಾ ಟಿಪ್ಪುವನ್ನು ಖಳನಾಯಕನಂತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿವೆ ಎಂದು ಆಪಾದಿಸಿದರು.

ಟಿಪ್ಪು ಮತಾಂಧನಾಗಿರಲಿಲ್ಲ: ಟಿಪ್ಪು ಮತಾಂಧನಾಗಿರಲಿಲ್ಲ. ವೈಭವೋಪೇತ ಜೀವನ ಆಶಿಸಿದವನೂ ಅಲ್ಲ. ಆತ ಸ್ವಾಭಿಮಾನಿಯಾಗಿದ್ದ. ಬ್ರಿಟಿಷರು ತನ್ನ ರಾಜ್ಯಕ್ಕೆ ಕಾಲಿಡಕೂಡದು ಎಂದು ಹೋರಾಟದ ಸ್ವಾಭಿಮಾನ ರೂಢಿಸಿಕೊಂಡಿದ್ದ ಪರಾಕ್ರಮಿ. ಆತನ 17 ವರ್ಷಗಳ ಆಡಳಿತಾವಧಿಯಲ್ಲಿ ಭೂ ಸುಧಾರಣೆಯನ್ನು ಜಾರಿಗೆ ತಂದಿದ್ದ. ಪಾಳೇಗಾರಿಕೆ ನಿರ್ಮೂಲನೆಗೆ ಮುಂದಾಗಿದ್ದ ಎಂದರು.

ಸ್ವಾತಂತ್ರ್ಯ ಹೋರಾಟಗಾರ: ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಅವರು ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರೆಲ್ಲಾ ಸ್ವಾತಂತ್ರ್ಯ ಹೋರಾಟಗಾರರು. ಹಾಗಾಗಿ ಟಿಪ್ಪು ಸುಲ್ತಾನ್‌ ಕೂಡ ಸ್ವಾತಂತ್ರ್ಯ ಹೋರಾಟಗಾರ ಎಂಬ ಕನಿಷ್ಠ ಪ್ರಜ್ಞೆ ಇಲ್ಲದವರು ಭಾರತೀಯರೇ ಅಲ್ಲ ಎಂದರು. ಸ್ವಾತಂತ್ರ್ಯ ಹೋರಾಟಗಾರರನ್ನು ವಿರೋಧಿಸುವುದು ದೇಶಕ್ಕೆ ಮಾಡುವ ಅಪಚಾರ. ಟಿಪ್ಪು ಎಂದೂ ಮತಾಂಧನಾಗಿರಲಿಲ್ಲ. ಆತ ಶೃಂಗೇರಿ ಶಾರದಾ ಪೀಠದ ರಕ್ಷಕನಾಗಿದ್ದ. ಕೊಲ್ಲೂರು ದೇವಾಲಯಕ್ಕೂ ಕೊಡುಗೆ ಕೊಟ್ಟಿದ್ದ. ಹಾಗಾಗಿಯೇ ಈಗಲೂ ಕೊಲ್ಲೂರು ದೇವಾಲಯದಲ್ಲಿ ಸುಲ್ತಾನ್‌ ಆರತಿ ಎಂದು ಪೂಜೆ ಮಾಡುತ್ತಾರೆ ಎಂದರು.

ಟಿಪ್ಪು ಸುಲ್ತಾನ್‌ ತನ್ನ ಆಡಳಿತದ ವಿರುದ್ಧ ಇದ್ದವರಿಗೆ, ರಾಜ್ಯಕ್ಕೆ ತೊಂದರೆ ಕೊಡುತ್ತಿದ್ದವರಿಗೆ ತೊಂದರೆ ಕೊಟ್ಟಿರಬಹುದು. ಪಾಳೇಗಾರರನ್ನು ಸದೆ ಬಡಿದಿರಬಹುದು. ಇದು ಒಬ್ಬ ರಾಜನು ಮಾಡಬಹುದಾದ ಕನಿಷ್ಠ ಹೋರಾಟವೂ ಹೌದು. ಅದನ್ನೇ ಹಿಂದೂಗಳ ದಮನಕ್ಕೆ ಯತ್ನಿಸಿದ್ದ ಎಂದು ಅರ್ಥೈಸುವುದು ಸಲ್ಲದು ಎಂದರು. ಭಾರತದ ಸಂವಿಧಾನದಲ್ಲಿ ಝಾನ್ಸಿರಾಣಿ ಲಕ್ಷ್ಮಭಾಯಿ ಮತ್ತು ಟಿಪ್ಪು ಸುಲ್ತಾನರ ಭಾವಚಿತ್ರಗಳಿವೆ. ಟಿಪ್ಪು ದೇಶದ್ರೋಹಿಯಾಗಿದ್ದರೆ ಸಂವಿಧಾನ ರಚನಾಕಾರರೇಕೆ ಟಿಪ್ಪು ಭಾವಚಿತ್ರ ಅಳವಡಿಸುತ್ತಿದ್ದರು ಎಂದೂ ಪ್ರಶ್ನಿಸಿದರು.

Advertisement

ಧರ್ಮದ ದೃಷ್ಟಿಯಿಂದ ಇತಿಹಾಸ ನೋಡದಿರಿ: ಧರ್ಮ ಮತ್ತು ಪಕ್ಷ ರಾಜಕಾರಣದ ದೃಷ್ಟಿಯಿಂದ ಇತಿಹಾಸವನ್ನು ನೋಡಬಾರದು. ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ನಂತರವೇ ಟಿಪ್ಪು ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಲ್ಲಿ ಹೆಚ್ಚಾಗುತ್ತಿದೆ. ಸರ್ಕಾರವೇ ಟಿಪ್ಪು ಬಗ್ಗೆ ಹೆಚ್ಚು ತಿಳಿಸುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ. ಹಾಗಿಯೇ ಈಗ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಟಿಪ್ಪು ಜಯಂತಿ ಆಚರಣೆ ಆರಂಭವಾಗಿದೆ ಎಂದರು.

ಧೋರಣೆ ಇಲ್ಲದ ವ್ಯಕ್ತಿ: ಟಿಪ್ಪುವನ್ನು ಇತಿಹಾಸದಿಂದ, ಜನರ ಮನಸ್ಸಿನಿಂದ ತೆಗೆದು ಹಾಕಲು ಸಾಧ್ಯವೇ ಇಲ್ಲ ಎಂದ ಅವರು, ಕೆಜೆಪಿಯಲ್ಲಿದ್ದಾಗ ಟಿಪ್ಪು ಪರ ಇದ್ಧ ಧೋರಣೆ ಬಿಜೆಪಿಗೆ ಬಂದ ಮೇಲೆ ಬದಲಾಗುವುದಾದರೆ ಅಂತಹ ಮುಖ್ಯಮಂತ್ರಿಯನ್ನು ಧೋರಣೆ ಇಲ್ಲದ ವ್ಯಕ್ತಿ ಎಂದು ಭಾವಿಸಬೇಕಾಗುತ್ತದೆ ಎಂದೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ದಸರಾ, ಜಂಬೂ ಸವಾರಿ ಟಿಪ್ಪು ಕೊಡುಗೆ: ಬೆಂಗಳೂರಿನ ಧಮೇಂದ್ರಕುಮಾರ್‌ ಮಾತನಾಡಿ, ಮೈಸೂರಿನ ದಸರಾ, ಜಂಬೂ ಸವಾರಿ ನಡೆಯುತ್ತಿರುವುದಕ್ಕೇ ಟಿಪ್ಪು ಸುಲ್ತಾನ್‌ ಕಾರಣ. ಹಾಗಾಗಿಯೇ ಈಗಲೂ ಮೈಸೂರು ಅರಮನೆಯಲ್ಲಿ ದಸರಾ ಸಂದರ್ಭದಲ್ಲಿ ನಡೆಯುವ ಖಾಸಗಿ ದರ್ಬಾರ್‌ನಲ್ಲಿ ವಂದಿ ಮಾಗಧರು ಬಹು ಪರಾಕ್‌ ಹೇಳುವಾಗ ಕನ್ನಡದ ನಂತರ ಉರ್ದುವಿನಲ್ಲಿಯೂ ಹೇಳುತ್ತಾರೆ. ಇದರು ಮೈಸೂರು ಸಂಸ್ಥಾನ ಟಿಪ್ಪುಗೆ ಕೊಡುತ್ತಾ ಬಂದಿರುವ ಗೌರವ ಎಂದರು. ಇತಿಹಾಸವನ್ನು ಇತಿಹಾಸದ ರೀತಿಯೇ ನೋಡಬೇಕು. ಆಗ ಮಾತ್ರ ಸತ್ಯ ಗೊತ್ತಾಗುತ್ತದೆ. ಮಹಾ ಭಾರತದಲ್ಲಿ ಅಭಿಮನ್ಯು ಹೇಗೋ ಹಾಗೆಯೇ ಟಿಪ್ಪು ಕೂಡ ಸ್ವಾತಂತ್ರ್ಯ ಹೋರಾಟದ ಅಭಿಮನ್ಯು ಎಂದ ಅವರು, ಟಿಪ್ಪು ಮತಾಂಧನಾಗಿರಲಿಲ್ಲ. ಆತ ಹಿಂದೂ – ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದ ಎಂಬುದಕ್ಕೆ ಅನೇಕ ದಾಖಲೆಗಳಿವೆ ಎಂದೂ ಹೇಳಿದರು.

ಟಿಪ್ಪು ಭಾರತದ ಘನತೆಯ ಪ್ರತೀಕ: ಹಾಸನ ಮುಸಲ್ಮಾನ ಎಂಬ ಕಾರಣಕ್ಕೆ ಟಿಪ್ಪು ಸುಲ್ತಾನ್‌ರನ್ನು ವಿರೋಧಿಸುವು ಸಲ್ಲದು. ಟಿಪ್ಪು ಭಾರತದ ಘನತೆಯ ಪ್ರತೀಕ ಎಂದು ಮೈಸೂರಿನ ಪೆದ್ದಿ ಉರಿಲಿಂಗ ಮಠದ ಶ್ರೀ ಜ್ಞಾನಪ್ರಕಾಶ್‌ ಸ್ವಾಮೀಜಿ ಹೇಳಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಟಿಪ್ಪು ಇತಿಹಾಸ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಇತಿಹಾಸದಲ್ಲಿ ಟಿಪ್ಪು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿಯುತ್ತಿರುವುದು ಟಿಪ್ಪು ಸುಲ್ತಾನನ ಶೌರ್ಯ ಮತ್ತು ಅಂಬೇಡ್ಕರರು ರಚಿಸಿದ ಸಂವಿಧಾನ.

ಇಂಗ್ಲೆಂಡ್‌ನ‌ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪುವಿನ ಪ್ರತಿಕೃತಿ, ಶಸ್ತ್ರಗಳು ಮತ್ತು ಅಮೆರಿಕಾದ ನಾಸಾದಲ್ಲಿ ಟಿಪ್ಪು ಬಳಸಿದ್ದ ರಾಕೆಟ್‌ ತಂತ್ರಜ್ಞಾನದ ಉಲ್ಲೇಖವಿದೆ ಎಂದು ತಿಳಿಸಿದರು. ಟಿಪ್ಪು ಪರರ ಹಿತ ಬಯಸುತ್ತಿದ್ದ ಶ್ರೇಷ್ಠ ಮುಸಲ್ಮಾನ ಎಂದ ಅವರು, ದೇಶ ಮುಖ್ಯವೇ ಹೊರತು ಧರ್ಮ ಮುಖ್ಯವಲ್ಲ. ಜನರ ದಿಕ್ಕು ತಪ್ಪಿಸುವ ಕೆಲವನ್ನು ಯಾವುದೇ ಪಕ್ಷ, ಪಂಗಡ ಮಾಡಬಾರದು. ಜನರಿಗೆ ಇತಿಹಾಸ ಗೊತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next