ಹೊಸದಿಲ್ಲಿ : ರಕ್ಷಣಾ ಸಚಿವ ಮನೋಹರ ಪರ್ರೀಕರ್ ಅವರನ್ನು ಗೋವೆಯ ಮುಖ್ಯಮಂತ್ರಿಯಾಗಿ ರಾಜ್ಯಪಾಲರಾಗಿರುವ ಮೃದುಲಾ ಸಿನ್ಹಾ ಅವರು ನೇಮಿಸಿದ್ದಾರೆ.
ಸಣ್ಣ ಪಕ್ಷಗಳ ಬೆಂಬಲ ಪಡೆಯುವಲ್ಲಿ ಸಫಲವಾಗಿರುವ ಬಿಜೆಪಿ, ಗೋವೆಯಲ್ಲಿ ಸರಕಾರ ರಚಿಸಲು ಅವಶ್ಯವಿರುವ ಸರಳ ಬಹುಮತವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಗೋವೆ ರಾಜ್ಯಪಾಲರು ಪರ್ರೀಕರ್ ಅವರಿಗೆ “ಪ್ರಮಾಣ ವಚನ ಸ್ವೀಕರಿಸಿದ ಹದಿನೈದು ದಿನಗಳ ಒಳಗಾಗಿ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ’ ಸೂಚಿಸಿದ್ದಾರೆ.
ಪರ್ರೀಕರ್ ಅವರೀಗ ರಕ್ಷಣಾ ಸಚಿವ ಪದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಗೋವೆಯ ನೂತನ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಕ್ಷ, ಬಿಜೆಪಿಗೆ ಸರಕಾರ ರಚಿಸಲು ಬೆಂಬಲ ನೀಡುವುದಾಗಿ ಹೇಳಿವೆ.
ಪರ್ರೀಕರ್ ಅವರು ಸಮ್ಮಿಶ್ರ ಪಕ್ಷಗಳ ಪ್ರತಿನಿಧಿಗಳೊಂದಿಗೆ ರಾಜ್ಯಪಾಲರಲ್ಲಿಗೆ ನಿಯೋಗ ಒಯ್ದಿದ್ದು ರಾಜ್ಯಪಾಲರಿಗೆ, ಬಿಜೆಪಿಯು ಮುಂದಿನ ಸರಕಾರ ರಚಿಸುವುದಾಗಿ ಹೇಳಿದ್ದಾರೆ. ನಿಯೋಗದಲ್ಲಿ ಬಿಜೆಪಿ ಗೋವಾ ಪ್ರಭಾರಿಯಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಉಸ್ತುವಾರಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ ಅವರು ಕೂಡ ಇದ್ದರು.