ಚಂಡೀಗಢ: ಪಂಜಾಬ್ ಸರಕಾರ ಇತ್ತೀಚೆಗೆ ತಾನು ಹಿಂಪಡೆದಿದ್ದ 420ಕ್ಕೂ ಹೆಚ್ಚು ಅತೀ ಗಣ್ಯ ವ್ಯಕ್ತಿಗಳ ಭದ್ರತೆಯನ್ನು ಪುನರ್ ನಿಯೋಜಿಸಲಾಗುತ್ತದೆ ಎಂದು ತಿಳಿಸಿದೆ.
ಗುರುವಾರದಂದು, ಸಿಎಂ ಭಗವಂತ್ ಮನ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಈ ವಿಷಯ ತಿಳಿಸಿದ್ದಾರೆ. ಈ ಹಿಂದೆ ಸರಕಾರ ದಿಂದ ಭದ್ರತೆ ಪಡೆದಿದ್ದ ಎಲ್ಲ ಗಣ್ಯರಿಗೂ ಜೂ. 7ರಿಂದ ಪುನಃ ಅದೇ ರೀತಿಯ ಭದ್ರತೆಯನ್ನು ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದರಿಂದ, ಪಂಜಾಬ್‌ನಲ್ಲಿ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವುದಾಗಿ ಹೊರಟಿದ್ದ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಆಪ್) ತೀವ್ರ ಮುಜುಗರಕ್ಕೆ ಈಡಾಗಿದೆ.
ಇತ್ತೀಚೆಗೆ, 424 ವಿವಿಐಪಿಗಳ ಭದ್ರತೆ ಯನ್ನು ಸರಕಾರ ಹಿಂಪಡೆದ ಬೆನ್ನಲ್ಲೇ ಖ್ಯಾತ ಗಾಯಕ ಸಿಧು ಮೂಸೆವಾಲ ಅವರ ಹತ್ಯೆಯಾಗಿತ್ತು. ಆ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಭದ್ರತೆಯನ್ನು ಹಿಂಪಡೆದಿದ್ದಕ್ಕೆ ಕಾರಣ ನೀಡಬೇಕು ಹಾಗೂ ಭದ್ರತೆ ಹಿಂಪಡೆದವರ ಹೆಸರುಗಳನ್ನು ಪ್ರಕಟಿಸಿ ದ್ದೇಕೆ ಎಂದು ಪ್ರಶ್ನಿಸಿತ್ತು. ಇದರಿಂದ ಸರಕಾರ ಪೇಚಿಗೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾ ಲಯಕ್ಕೆ ವಿವರಣೆ ಕೊಟ್ಟಿರುವ ಸಿಎಂ, ವಿವಿಐಪಿಗಳಿಗೆ ಪುನಃ ಭದ್ರತೆಯನ್ನು ನೀಡುವುದಾಗಿ ತಿಳಿಸಿದೆ.
ಕೇಂದ್ರಕ್ಕೆ ಪತ್ರ: ಗಾಯಕ ಮೂಸೆವಾಲ ಕುಟುಂಬವು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು, ಮೂಸೆವಾಲ ಹತ್ಯೆ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಈ ವಿಷಯವನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ತಿಳಿಸಿದ್ದಾರೆ.
ಮಾನ್ – ಕೇಜ್ರಿವಾಲ್ ಭೇಟಿ: ಮೂಸೆವಾಲ ಹತ್ಯೆ ಪ್ರಕರಣದಿಂದಾಗಿ ವಿಪಕ್ಷಗಳಿಂದ ಭಾರೀ ಟೀಕೆಗೆ ಒಳಗಾಗಿರುವ ಪಂಜಾಬ್ ಮುಖ್ಯ ಮಂತ್ರಿ ಭಗವಂತ ಮಾನ್, ಗುರುವಾರ, ಹೊಸದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.