Advertisement

ಮನ್‌ಮುಲ್ ಚುನಾವಣೆ ಮುಂದೂಡಿಕೆ

05:28 PM May 06, 2019 | Suhan S |

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯ ರಾಜಕೀಯ ಸಂಘರ್ಷದ ಕಾವು ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆಗೂ ತಟ್ಟಿದ್ದು ಮೇ 13ಕ್ಕೆ ನಿಗದಿಯಾಗಿದ್ದ ಚುನಾವಣೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ಲೋಕಸಭಾ ಚುನಾವಣಾ ಪೂರ್ವದಲ್ಲೇ ಕಳೆದ 20 ದಿನಗಳ ಹಿಂದೆಯೇ ಮೇ 13ರಂದು ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ನಡೆಸುವುದಾಗಿ ಘೋಷಿಸಿದ್ದ ಸರ್ಕಾರ ಜಿಲ್ಲಾಧಿಕಾರಿ ವರ್ಗಾವಣೆ ಬಳಿಕ ಹಠಾತ್ತನೆ ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕ ಮಂಡಳಿಯನ್ನು ಹೊಂದಿರುವ ಮನ್‌ಮುಲ್ಗೆ ನಿಗದಿತ ಅವಧಿಯಲ್ಲೇ ಚುನಾವಣೆ ನಡೆದರೆ ಅದರಿಂದ ಜೆಡಿಎಸ್‌ಗೆ ನಿರೀಕ್ಷಿತ ಲಾಭವಾಗುವುದಿಲ್ಲ. ಅಧಿಕಾರ ಪಡೆಯುವುದು ಕಷ್ಟಕರವಾಗಿದೆ ಎಂಬ ಅಂಶವನ್ನು ಮನವರಿಕೆ ಮಾಡಿಕೊಂಡಿರುವ ಜೆಡಿಎಸ್‌, ತನ್ನ ಭದ್ರಕೋಟೆಯಲ್ಲಿ ಪಕ್ಷದ ಅಸ್ತಿತ್ವಕ್ಕಾಗಿ ಇಂತಹುದೊಂದು ಪ್ರಕ್ರಿಯೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಸಂಖ್ಯಾಬಲ ಕುಸಿತ: 12 ಮಂದಿ ನಿರ್ದೇಶಕರನ್ನು ಒಳಗೊಂಡಿರುವ ಹಾಲು ಒಕ್ಕೂಟದಲ್ಲಿ 8 ಮಂದಿ ಕಾಂಗ್ರೆಸ್ಸಿಗರು ಮತ್ತು ನಾಲ್ವರು ಜೆಡಿಎಸ್‌ ಬೆಂಬಲಿತರಿ ದ್ದಾರೆ. ಇವರಲ್ಲಿ ರಮೇಶ್‌ ಬಂಡಿಸಿದ್ದೇಗೌಡ ಬೆಂಬಲಿತ ಶೆಟ್ಟಹಳ್ಳಿ ಬೋರೇಗೌಡ, ಎನ್‌. ಚಲುವರಾಯಸ್ವಾಮಿ ಆಪ್ತ ಬಳಗದ ನಾಗಮಂಗಲ ಕೃಷ್ಣೇಗೌಡ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ಸಿಗೆ ಪಕ್ಷಾಂತರ ಗೊಂಡಿರುವುದರಿಂದ ಮನ್‌ಮುಲ್ನಲ್ಲಿ ಜೆಡಿಎಸ್‌ನ ಸಂಖ್ಯಾ ಬಲ ಕೇವಲ 2ಕ್ಕೆ ಸೀಮಿತವಾಗಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 6 ಮಂದಿ ಕಾಂಗ್ರೆಸ್ಸಿಗರು ಮತ್ತು ಇಬ್ಬರು ವಲಸಿಗರೂ ಸೇರಿದಂತೆ 8 ಮಂದಿ ನಿರ್ದೇಶಕರು ಮೈತ್ರಿ ಧರ್ಮವನ್ನು ಧಿಕ್ಕರಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣೆ ನಡೆಸಿರುವುದು ಜೆಡಿಎಸ್‌ ವರಿಷ್ಠರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹರಸಾಹಸ: ಒಂದು ವೇಳೆ ನಿಗಧಿತ ಅವಧಿಯಲ್ಲೇ ಮನ್‌ಮುಲ್ ಚುನಾವಣೆ ನಡೆಸಿದರೆ, ಕಾಂಗ್ರೆಸ್‌ ಪ್ರಾಬಲ್ಯ ಮುಂದುವರಿಯುವ ಸ್ಪಷ್ಟ ಸಾಧ್ಯತೆ ಇದ್ದು, ಹಾಲಿ ಚುನಾಯಿತ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ಮತ್ತೂಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿರುವುದರಿಂದ ಜೆಡಿಎಸ್‌ ಚುನಾವಣಾ ಮುಂದೂಡಿಕೆಯ ಅಸ್ತ್ರವನ್ನು ಬಳಸಿ ಆ ಮೂಲಕ ಸುಮಲತಾ ಪರ ಚುನಾವಣೆ ನಡೆಸಿರುವ ನಿರ್ದೇಶಕರಿಗೆ ಸೋಲಿನ ರುಚಿ ತೋರಿಸುವ ಹರಸಾಹಸ ನಡೆಸಿದೆ.

ನಿರ್ದೇಶಕರ ಅಸಮಾಧಾನ: ಈಗಾಗಲೇ ಕೋಲಾರ, ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಚುನಾವಣೆ ನಡೆದಿದ್ದು, ಮೈಸೂರಿನಲ್ಲಿ ಕೂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರನ್ವಯ ಮಂಡ್ಯ ಹಾಲು ಒಕ್ಕೂಟದಲ್ಲಿ ಸಹ ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಜಿಲ್ಲಾಧಿ ಕಾರಿಗಳ ವರ್ಗಾವಣೆಯನ್ನೇ ನೆಪ ಮಾಡಿಕೊಂಡು ಚುನಾವಣೆಯನ್ನು ಮುಂದೂಡಿರುವುದು ನಿರ್ದೇಶಕ ಮಂಡಳಿಯ ಅಸಮಾಧಾನಕ್ಕೂ ಕಾರಣವಾಗಿದೆ.

ಲೋಕಸಭಾ ಚುನಾವಣಾ ಫಲಿತಾಂಶವನ್ನೇ ಹೆಚ್ಚು ಕೇಂದ್ರೀಕರಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಅಭ್ಯರ್ಥಿ ಗೆಲುವು ಸಾಧಿಸಿ ದರೆ, ಅದಕ್ಕೆ ಪೂರವಾಗಿ ಮನ್‌ಮುಲ್ ಆಡಳಿತ ಮಂಡಳಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆ. ಒಂದು ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದರೆ ತಮ್ಮ ಅಧಿಕಾರ ಬಲವನ್ನು ಬಳಸಿ ಮನ್‌ಮುಲ್ನಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೆಚ್ಚದಂತೆ ನೋಡಿಕೊಳ್ಳುವ ಲೆಕ್ಕಾಚಾರವೂ ಇದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next