Advertisement

ಮನ್‌ಮುಲ್ ಗದ್ದುಗೆಗೆ ಕೈ-ತೆನೆ ಗುದ್ದಾಟ

12:11 PM Sep 08, 2019 | Suhan S |

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿದಂತೆ ಪ್ರದರ್ಶನಗೊಂಡ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪತನದ ನಂತರ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಅಕಾರದ ಅಸ್ತಿತ್ವಕ್ಕಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾಗಿವೆ.

Advertisement

ಬಹುಕಾಲದಿಂದ ಮನ್‌ಮುಲ್ನಲ್ಲಿ ಅಪತ್ಯ ಹೊಂದಿರುವ ಕಾಂಗ್ರೆಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿದ್ದರೆ ಲೋಕಸಭೆಯಲ್ಲಿ ಹಿನ್ನಡೆಯನ್ನು ಅನುಭವಿಸಿದ ಜೆಡಿಎಸ್‌ ನಾಯಕತ್ವದ ಸರ್ಕಾರದ ಪತನದ ನಂತರವೂ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗಾಗಿ ಚುನಾವಣಾ ಗೆಲುವಿನ ತಂತ್ರಗಾರಿಕೆ ನಡೆಸಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದರೂ ಬಿಜೆಪಿ ಮೂಲದ ಬಾಲಚಂದ್ರ ಜಾರಕಿಹೊಳಿ ಅವರೇ ಕೆಎಂಎಫ್‌ ಅಧ್ಯಕ್ಷರಾಗಿದ್ದರೂ ಜಿಲ್ಲೆಯಲ್ಲಿ ಬಿಜೆಪಿ ಸಾಂಕೇತಿಕವಾಗಿ ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಿದೆ.

ಪ್ರತಿಷ್ಠಿತ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಭಾನುವಾರ (ಸೆ.8) ಚುನಾವಣೆ ನಡೆಯಲಿದೆ. ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 25 ಮಂದಿ ಕಣದಲ್ಲಿದ್ದು ಕಾಂಗ್ರೆಸ್‌-ಜೆಡಿಎಸ್‌ ನಡುವೆ ನೇರ ಕದನ ಏರ್ಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು 1246 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಅವುಗಳಲ್ಲಿ 1082 ಸಂಘಗಳು ಮತದಾನದ ಹಕ್ಕನ್ನು ಪಡೆದುಕೊಂಡಿವೆ. ಉಳಿದ ಸಂಘಗಳು ಮತದಾನದಿಂದ ವಂಚಿತವಾಗಿವೆ. ಚುನಾವಣೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಶ್ರೀ ಲಕ್ಷ್ಮೀಜನಾರ್ದನ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ. ಕಾಂಗ್ರೆಸ್‌ ಬೆಂಬಲಿಗ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿಸಿ ಅಧಿಕಾರವನ್ನು ಮತ್ತೆ ವಶಪಡಿಸಿಕೊಳ್ಳುವುದಕ್ಕೆ ಜೆಡಿಎಸ್‌ ಹರಸಾಹಸ ನಡೆಸಿದೆ.

Advertisement

ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದ ಮಂಡ್ಯದ ಯು.ಸಿ.ಶಿವಕುಮಾರ್‌, ಬಿ.ಚಂದ್ರ, ಮಳವಳ್ಳಿಯ ವಿ.ಎಂ.ವಿಶ್ವನಾಥ್‌, ಮದ್ದೂರಿನ ಕದಲೂರು ರಾಮಕೃಷ್ಣ, ಕೆ.ಆರ್‌.ಪೇಟೆಯ ಶೀಳನೆರೆ ಅಂಬರೀಶ್‌, ಕೆ.ರವಿ, ಶ್ರೀರಂಗಪಟ್ಟಣದ ಬಿ.ಬೋರೇಗೌಡ ಅವರು ಪುನರಾಯ್ಕೆ ಬಯಸಿ ಮತ್ತೆ ಅಖಾಡ ಪ್ರವೇಶಿಸಿದ್ದಾರೆ. ಇವರೊಟ್ಟಿಗೆ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದ ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್‌ ಮತ್ತೆ ನಿರ್ದೇಶಕರಾಗಿ ಆಯ್ಕೆಯಾಗಲು ಕಣಕ್ಕಿಳಿದಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಉಮೇಶ್‌, ವಿಶ್ವನಾಥ್‌, ಬೋರೇಗೌಡ, ಬಿ.ಚಂದ್ರ, ಕೃಷ್ಣೇಗೌಡ ಅವರು ಸ್ಪರ್ಧಿಸಿ ಜಯಗಳಿಸಿದ್ದರು. ಆ ವೇಳೆ ಶಾಸಕರಾಗಿದ್ದ ಎನ್‌.ಚೆಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದರು. ಇವರ ಬೆಂಬಲಿಗರಾದ ಕೃಷ್ಣೇಗೌಡ, ಬೋರೇಗೌಡ ಹಾಗೂ ಬಿ.ಚಂದ್ರ ಜೆಡಿಎಸ್‌ ತೊರೆದು ನಾಯಕರೊಟ್ಟಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು. ಇದರೊಂದಿಗೆ ಮನ್‌ಮುಲ್ ಆಡಳಿತ ಮಂಡಳಿಯಲ್ಲಿ 7 ಸ್ಥಾನಗಳಿದ್ದ ಕಾಂಗ್ರೆಸ್‌ ಬಲ 10ಕ್ಕೆ ಏರಿಕೆಯಾಯಿತು. ಉಮೇಶ್‌ ಹಾಗೂ ವಿಶ್ವನಾಥ್‌ ಜೆಡಿಎಸ್‌ನಲ್ಲೇ ಉಳಿದುಕೊಂಡು ಪಕ್ಷದ ಬಲ 5 ರಿಂದ 2ಕ್ಕೆ ಕುಸಿದಿತ್ತು.

ಈಗ ನಡೆಯುತ್ತಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಎಸ್‌.ಪಿ.ಸ್ವಾಮಿ, ಎಚ್.ಟಿ.ಮಂಜು, ನೆಲ್ಲೀಗೆರೆ ಬಾಲು, ವಿ.ಎಂ.ವಿಶ್ವನಾಥ್‌ ಪ್ರಭಾವಿಗಳಾಗಿ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ ಕಡೆಯಿಂದ ಎಂ.ಬಿ.ಹರೀಶ್‌, ಕದಲೂರು ರಾಮಕೃಷ್ಣ, ಯು.ಸಿ.ಶಿವಕುಮಾರ್‌, ಎಂ.ಬಿ.ಹರೀಶ್‌, ಕೆ.ರವಿ, ಶೀಳನೆರೆ ಅಂಬರೀಶ್‌, ಬೋರೇಗೌಡ ಪ್ರಬಲ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.

ಎಷ್ಟು ಸ್ಥಾನಗಳಿಗೆ ಚುನಾವಣೆ?: ಮನ್‌ಮುಲ್ಗೆ ಮಂಡ್ಯ ತಾಲೂಕಿನಿಂದ 3, ಮದ್ದೂರು-2, ಕೆ.ಆರ್‌.ಪೇಟೆ-2, ನಾಗಮಂಗಲ-2, ಮಳವಳ್ಳಿ-1, ಪಾಂಡವಪುರ-1 ಹಾಗೂ ಶ್ರೀರಂಗಪಟ್ಟಣ ತಾಲೂಕಿನ 1 ಸ್ಥಾನ ಸೇರಿ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ನಾಮ ನಿರ್ದೇಶಕ ಸ್ಥಾನವಿದೆ.

 

Advertisement

Udayavani is now on Telegram. Click here to join our channel and stay updated with the latest news.

Next