Advertisement

ಮಂಕುತಿಮ್ಮನ ಪೋಸ್ಟಾಫೀಸು

10:20 AM Sep 15, 2019 | mahesh |

ಡಿವಿಜಿ ವಿರಚಿತ ಮಂಕುತಿಮ್ಮನ ಕಗ್ಗವು ಕನ್ನಡಿಗರ ಪಾಲಿಗೆ ಭಗವದ್ಗೀತೆ ಎಂದೇ ಜನಜನಿತ. ಕಗ್ಗಗಳು ಜನ್ಮ ತಳೆದು, ಇತ್ತೀಚೆಗೆ ತಾನೆ 75 ವರ್ಷಗಳು ತುಂಬಿದವು. ಒಂದೊಂದು ಕಗ್ಗವು, ಹೊಸ ಅರ್ಥವನ್ನು ಹೊತ್ತು, ನಮಗಾಗಿಯೇ ಬರೆದ ಪತ್ರಗಳಂತೆ, ಪ್ರಸ್ತುತಗೊಳ್ಳುತ್ತಾ, ನಮ್ಮೊಳಗೆ ಹೊರಳುತ್ತಲೇ ಇವೆ. ಜೀವನ ದರ್ಶನ ಮಾಡಿಸುವ ಕಗ್ಗಗಳ ಬೆರಗಿನ ಒಂದು ಬೆಳಕು ಹೀಗಿದೆ…

Advertisement

– ಕೆ.ವಿ. ರಾಧಾಕೃಷ್ಣ
ಇಪ್ಪತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಓದುವ ಜನವರ್ಗ ಕಂಡುಂಡ ಮಹಾನ್‌ ಜೀವನ ದರ್ಶನವೆಂದರೆ, ಮಂಕುತಿಮ್ಮನ ಕಗ್ಗ. ನಿತ್ಯ ಜೀವನದಲ್ಲಿ ಎದುರಾಗುವ ನೂರಾರು ಸಂಕಷ್ಟಗಳಿಗೆ ನಿತ್ಯನೂತನವೆಂಬ ಪರಿಹಾರ ಉಪಾಯಗಳು, ಆತ್ಮಾವಲೋಕನದ ಮಾರ್ಗಗಳನ್ನು ಕಗ್ಗವು ವೈವಿಧ್ಯವಾಗಿ ದರ್ಶಿಸಿತು.

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಲ್ಲಿ ಸಮಾಜದ ಕಿಲುಬುಗಳನ್ನು ಕಳೆಯುವ ಜೀವನ ದರ್ಶನದ ನುಡಿಗಳು ಆಡುನುಡಿಯಲ್ಲಿ ವಚನಗಳಾಗಿ ಮೂಡಿಬಂದವು. ಆನಂತರ ಹದಿನಾರನೇ ಶತಮಾನದಲ್ಲಿ ದಾಸ ಸಾಹಿತ್ಯ ಪರಂಪರೆಯು ಕೀರ್ತನೆಗಳನ್ನು ಜನಸಾಮಾನ್ಯರ ಆಡುನುಡಿಯಲ್ಲಿ ರೂಪಿಸಿತು. ಈ ದಾಸ ಸಾಹಿತ್ಯವು ಮೌಡ್ಯ, ಕಂದಾಚಾರಗಳನ್ನು ಕಳೆಯುವ ಹೋರಾಟವನ್ನು ನಡೆಸಿತು. ಸರಿಸುಮಾರು ಅದೇ ಕಾಲದಲ್ಲಿ ಇತಿಹಾಸದಲ್ಲಿ ದಾಖಲಾದ ಸರ್ವಜ್ಞ ಕವಿಯ ತ್ರಿಪದಿಗಳು, ಕನ್ನಡ ಜನಪದ ಕಂಡ ವೈಚಾರಿಕ ಜನಜಾಗೃತಿಯ ಸಾಹಿತ್ಯ. ನಂತರ ಇಪ್ಪತ್ತನೇ ಶತಮಾನದವರೆಗೆ ಈ ದಿಸೆಯಲ್ಲಿ ಇದ್ದ ನಿರ್ವಾತವನ್ನು “ಮಂಕುತಿಮ್ಮನ ಕಗ್ಗ’ ಕಳೆಯುವ ಪ್ರಯತ್ನ ಮಾಡಿದೆ.

ನೀವು ಭಾರತದಲ್ಲಿ ಯಾವುದೇ ವ್ಯಕ್ತಿಗೆ ಮೊದಲ ಬಾರಿಗೆ ರಾಮಾಯಣ ಅಥವಾ ಮಹಾಭಾರತವನ್ನು ಹೇಳಲಾರಿರಿ ಎಂಬುದೊಂದು ಜನಪ್ರಿಯ ಹೇಳಿಕೆ. ಯಾವುದೇ ಅಕ್ಷರಜ್ಞಾನವಿಲ್ಲದ ವ್ಯಕ್ತಿಗೂ ರಾಮಾಯಣ ಅಥವಾ ಮಹಾಭಾರತದ ಯಾವುದೋ ಒಂದು ದೃಷ್ಟಾಂತ, ಪಾತ್ರ ಕಿವಿಯ ಮೇಲೆ ಬಿದ್ದಿರುತ್ತದೆ. ಹಾಗೆಯೇ ಇಂದಿಗೂ ಕಗ್ಗದ ಯಾವುದಾದರೂ ಒಂದು ಮುಕ್ತಕ ಇಂದಿಗೂ ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುತ್ತಿರುತ್ತದೆ.

ಮಂಕುತಿಮ್ಮನ ಕಗ್ಗದ ವಿಶೇಷವೇ, ಅದರ ಲಕ್ಷಣ ಸ್ವರೂಪ. ಗೇಯತೆಯ ದೃಷ್ಟಿಯಿಂದ ಅದಕ್ಕೊಂದು ಲಯವಿದೆ. ಸ್ಮರಣೆಯ ದೃಷ್ಟಿಯಿಂದ ಸ್ವತಂತ್ರವಾದ ಕೇವಲ ನಾಲ್ಕೇ ಸಾಲುಗಳಲ್ಲಿ ರಚಿತವಾದ ಈ ಚೌಪದಿಯ ಗಾತ್ರ ಸ್ವರೂಪ ಮತ್ತು ಸುಲಭಗ್ರಾಹ್ಯ.

Advertisement

ಡಿವಿಜಿ ಕನ್ನಡ ಸಾಹಿತ್ಯ ಲೋಕ ಕಂಡ ಅನಘ್ರ್ಯ ರತ್ನಗಳಲ್ಲೊಬ್ಬರು. ಅವರು ಸಾಹಿತಿ ಅಷ್ಟೇ ಆಗಿರಲಿಲ್ಲ, ಪತ್ರಕರ್ತರಾಗಿದ್ದರು, ರಾಜನೀತಿಜ್ಞ ಆಗಿದ್ದರು. ತತ್ವ ದರ್ಶನಗಳ ಮೀಮಾಂಸಕರಾಗಿದ್ದರು. ದೇವನಹಳ್ಳಿ ಗುಂಡಪ್ಪ ವೆಂಕಟಪ್ಪ ಗುಂಡಪ್ಪ ಹೆಸರಿಗೆ ಅನ್ವರ್ಥಕವಾಗಿ ಗುಂಡಗಿದ್ದರು. ಸಾಹಿತ್ಯ ಲೋಕದ ದೈತ್ಯದೇಹಿ. ಅವರ ಎತ್ತರವನ್ನು ಸರಿಗಟ್ಟಬಲ್ಲ ಸಾಹಿತಿಗಳು ಅಪರೂಪ. ಕನ್ನಡ ಸಾರಸ್ವತ ಲೋಕದಲ್ಲಿ ರಚಿತವಾದ ಸಾವಿರಾರು ಕೃತಿಗಳಲ್ಲಿ ಇಷ್ಟು ವಿಸ್ತಾರವಾಗಿ ಜನಮಾನಸವನ್ನು ತಲುಪಿದ ಕೃತಿ “ಮಂಕುತಿಮ್ಮನ ಕಗ್ಗ’.

ಮಂಕುತಿಮ್ಮನ ಕಗ್ಗವೆಂದರೆ ಏನು?
“ಮಂಕುತಿಮ್ಮ’, ನಮ್ಮ ನಿಮ್ಮೊಳಗೆಲ್ಲ ಅಡಗಿರಬಹುದಾದ ಬುದ್ಧಿಗೆ ಕಾರ್ಯಕಾರಣವಶಾತ್‌ ಮಂಕು ಕವಿದಿರುವ ತಿಮ್ಮನೇ. ಶಂಕರಾಚಾರ್ಯರಂತೆ “ಭಜಗೋವಿಂದಂ’ ಕೃತಿಯಲ್ಲಿ “ಮೂಢಮತೇ’ ಎಂದು ಜನರನ್ನು ನೇರವಾಗಿಯೇ ತಿವಿದು ಬುದ್ಧಿ ಹೇಳುವ ಬದಲು ಡಿವಿಜಿ ಅವರು ಮಂಕುತಿಮ್ಮನನ್ನು ಎದುರು ನಿಲ್ಲಿಸಿಕೊಂಡು ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ಎದುರಾಗುವ ಸಮಸ್ಯೆಗಳಿಗೆಲ್ಲ ತಾವು ಕಂಡ ಅನುಭವದ ಮತ್ತು ಅನುಭಾವದ ನೆಲೆಯಲ್ಲಿ ಕಗ್ಗದ ಮುಕ್ತಕಗಳು ಹುಟ್ಟಿದ್ದು ತಮ್ಮ ಚಿಂತನೆಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶದಿಂದಲೇ. ಇಲ್ಲಿ ಪಾಂಡಿತ್ಯ ಪ್ರದರ್ಶನವಿಲ್ಲ. ಅದಕ್ಕಾಗಿಯೇ ಒಂದು ಕಗ್ಗದಲ್ಲಿ ತಮ್ಮ ಉದ್ದೇಶವನ್ನು ತಮ್ಮ 940ನೇ ಮುಕ್ತಕದಲ್ಲಿ ಹೀಗೆ ದಾಖಲಿಸಿದ್ದಾರೆ.

ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ|
ಲೋಕತಾಪದಿ ಬೆಂದು ತಣಿಪನೆಳಸಿದವಂ||
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು|
ಸ್ವೀಕರಿಕೆ ಬೇಳ್ಪವರು ಮಂಕುತಿಮ್ಮ||

ಹೀಗೆ ಇಡೀ ಬದುಕಿನ ಅನುಭವವನ್ನು ಮುಕ್ತಕದಲ್ಲಿ ದಾಖಲಿಸಿದ ನಂತರವೂ ಡಿವಿಜಿ ಅವರೊಳಗೆ ಒಂದಿನಿತೂ ದಾರ್ಷ್ಟ್ಯ ಇಣುಕಿಲ್ಲ. ಶ್ರೇಷ್ಠತೆಯ ವ್ಯಸನ ಕಾಡಿಲ್ಲ. ಅತ್ಯಂತ ವಿನಮ್ರರಾಗಿ 939ನೇ ಕಗ್ಗದಲ್ಲಿ ನಿವೇದಿಸುತ್ತಾರೆ…
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಿಲ್ಲ |
ಇಂದು ನಂಬಿಹುದೆ ಮುಂದೆಂದೆಂದುಮೆಂದಿಲ್ಲ ||
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು |
ಇಂದಿಗೀ ಮತವುಚಿತ ಮಂಕುತಿಮ್ಮ ||

– ಹೀಗೆ ಹೇಳುತ್ತಾ, ತಮ್ಮ ಕಗ್ಗದ ಯಾತ್ರೆಗೆ ಉಪಸಂಹಾರದ ನಿಸ್ಪೃಹ ನುಡಿಗಳನ್ನಾಡುತ್ತಾರೆ. ಇದರಿಂದಾಗಿಯೇ ಈ ಕೃತಿಗೆ ಸಾರ್ವಕಾಲಿಕತೆ ಬಂದೊದಗಿದೆ.

ಮಂಕುತಿಮ್ಮನ ಕಗ್ಗದಲ್ಲಿ ತಾನು ಎಲ್ಲವನ್ನೂ ತಿಳಿದವ ಎಂಬ ಅಹಂಕಾರವಿಲ್ಲ, ಬದುಕಿನ ಕಷ್ಟಕೋಟಲೆಗಳನ್ನು ಕಂಡುಂಡ ಹಿರಿಯರೊಬ್ಬರು ತಮ್ಮ ಮುಂದಿನ ಎಳೆಯರಿಗೆ ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಮತ್ತು ಅವುಗಳನ್ನು ಮೀರುವ ಸಹಜೋಪಾಯಗಳನ್ನು ಸರಳವಾಗಿ ಮನ ಮುಟ್ಟುವಂತೆ ಸುಲಭಗ್ರಾಹ್ಯ ಚೌಪದಿಗಳನ್ನು ರೂಪಿಸಿರುವುದು ಈ ಕೃತಿಯ ಸಾರ್ವಕಾಲಿಕತೆಗೆ ಇಂಬು ನೀಡಿದೆ.

“ಮಂಕುತಿಮ್ಮ ಕಗ್ಗ’ದ ಪ್ರತಿ ಚೌಪದಿಯೂ ಒಂದು ಮುಕ್ತಕ. ತಾನು ಇಡೀ ಕೃತಿಯ ಭಾಗವಾಗಿದ್ದಾಗ್ಯೂ ಸ್ವತಂತ್ರವಾಗಿ ತಾನೇ ಅಸ್ತಿತ್ವ ಪಡೆಯಬಲ್ಲ ಗುಣವೇ ಈ ಮುಕ್ತಕಗಳ ವಿಶೇಷ. ಸಾಂತ್ವನದ ನುಡಿಗಳು, ಮಾರ್ಗದರ್ಶನದ ಕೈದೀವಿಗೆಗಳು, ಅಧ್ಯಾತ್ಮಿಕ ಯಾತ್ರೆಯ ಮಾರ್ಗಸೂಚಿ ಸಾಲುಗಳು- ಹೀಗೆ ಕಗ್ಗವು ಸೋತು ನಿಂತವರಿಗೆ ಸಾಂತ್ವನವಾಗಿ, ಅಧ್ಯಾತ್ಮಿಕ ಜಿಜ್ಞಾಸುಗಳಿಗೆ ವಿಚಾರಮಂಥನದ ಕಡಗೋಲಾಗಿ, ಸಾಹಿತ್ಯಾಸಕ್ತರಿಗೆ ಜೀವನ ದರ್ಶನದ ಕೃತಿಯಾಗಿ “ಮಂಕುತಿಮ್ಮನ ಕಗ್ಗ’ ಸಂಗ್ರಾಹ್ಯ ಕೃತಿ.

ಕುವೆಂಪು ಸೆಳೆದ ಕಗ್ಗ
“ಮಂಕುತಿಮ್ಮ’ ಎಂದೇ ಮುಗಿಯುವ ಈ ಮುಕ್ತಕಗಳನ್ನು ಒಳಹೊಕ್ಕು ಅನುಭವಿಸದ ಹೊರತು ಆ ಕಾವ್ಯದ ದರ್ಶನ ನಮಗೆ ದಕ್ಕುವುದಿಲ್ಲ. ಇಲ್ಲಿನ ಮುಕ್ತಕಗಳು ನಮಗೆ ಮತ್ತೆ ಮತ್ತೆ ಮನೋಮಂಥನಕ್ಕೆ ಪ್ರೇರಣೆ ನೀಡುತ್ತವೆ. ನಮ್ಮ ರಾಷ್ಟ್ರಕವಿ ಕುವೆಂಪು ಕಗ್ಗವನ್ನು ಓದಿದ ನಂತರ ತಮಗೆ ದಕ್ಕಿದ ಅನುಭೂತಿಯನ್ನು ಚೌಪದಿಯಲ್ಲಿಯೇ ದಾಖಲಿಸಿದ್ದಾರೆ. ಮಂಕುತಿಮ್ಮನ ಕಗ್ಗದಂತೆಯೇ ದ್ವಿತೀಯ ಪ್ರಾಸದ, ನಾಲ್ಕು ಗಣ ಮತ್ತು ನಾಲ್ಕು ಸಾಲುಗಳ ಛಂದೋಬಂಧದಲ್ಲಿ ಕುವೆಂಪು ಅವರ ಜನಪ್ರಿಯ ಪ್ರತಿಕ್ರಿಯಾ ಸಾಲುಗಳು ಹೀಗಿವೆ:
ಹಸ್ತಕ್ಕೆ ಬರಿ ನಕ್ಕೆ ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರನಾದೆ |
ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ||

ಈ ಕಗ್ಗದ ಸಾಲುಗಳ ಒಳಗಿನ ಚಿಂತನೆಗಳು ಸ್ಟ್ಯಾಟಿಕ್‌ ರೀತಿಯವಲ್ಲ. ಅವುಗಳ ಒಳಗೆ ಒಂದು ನಿರಂತರ ಚಲನಶೀಲತೆಯನ್ನು ಗುರುತಿಸಬಹುದು. ಈ ಮುಕ್ತಕಗಳು ಸಮಾಜದೊಂದಿಗೆ ನಿರಂತರ ಸಾತತ್ಯವನ್ನು ಸಾಧಿಸಿಕೊಂಡು ಬರಲು ಸಾಧ್ಯವಾಗಿದೆ. ಪ್ರತಿಬಾರಿ ಓದಿದಾಗಲೂ ಓದುಗನ ಮನಸ್ಥಿತಿಗೆ ಪೂರಕವಾಗಿ ಒಂದಷ್ಟು ಹೊಸ ಹೊಳಹುಗಳಿಗೆ ಈ ಮುಕ್ತಕಗಳು ದಾರಿಯಾಗಿವೆ.

ಈ ಕಗ್ಗಕ್ಕೆ ಹೊಸಗನ್ನಡದ ಆಧುನಿಕತೆಯ ಭರಾಟೆಯಲ್ಲಿ ಸರಳಗನ್ನಡದ ಹಲವು ವಿವರಣೆಗಳು, ಹಲವು ವಿದ್ವಜ್ಜನರಿಂದ ಮತ್ತು ಆಸಕ್ತರಿಂದ ಲಭಿಸಿವೆ ಮತ್ತು ಬಹುತೇಕ ಕೃತಿಗಳೂ ಮಾರುಕಟ್ಟೆಯಲ್ಲಿ ಜನಮಾನ್ಯತೆಯನ್ನು ಗಳಿಸಿವೆ. ಕರ್ನಾಟಕ ಸರ್ಕಾರವು ಜಾಲತಾಣಗಳ ಮೂಲಕ ವಚನ ಸಾಹಿತ್ಯ, ದಾಸ ಸಾಹಿತ್ಯಗಳ ಜೊತೆಜೊತೆಯಲ್ಲಿ ಡಿವಿಜಿ ಅವರ “ಮಂಕುತಿಮ್ಮನ ಕಗ್ಗ’ಕ್ಕೆ ದಿವಂಗತ ರವಿ ತಿರುಮಲೈ ಅವರು ವ್ಯಾಖ್ಯಾನ ಮಾಡಿರುವ ಕಗ್ಗ ರಸಧಾರೆಯನ್ನು ಧ್ವನಿ, ಪಠ್ಯ ರೂಪದಲ್ಲಿ ಒದಗಿಸಿದೆ.

ಮಂಕುತಿಮ್ಮನ ಕಗ್ಗವೆಂಬ ಅಮೃತೋಪಮ ಮುಕ್ತಕಗಳು ಜನರ ಮನೆ ಮನದಲ್ಲಿ ಕಳೆದ ಎಪ್ಪತ್ತೈದು ವರ್ಷಗಳಿಂದ ಅನೂಚಾನವಾಗಿ ನೆಲೆಮಾಡಿದೆ. ಈ ಕೃತಿಯ ಸಾರ್ವಕಾಲಿಕತೆ ಮುಂದಿನ ನೂರು ವರ್ಷಗಳ ನಂತರವೂ ಮಂಕುತಿಮ್ಮನ ಕಗ್ಗವನ್ನು ಯಥಾ ರೂಪದಲ್ಲಿ ಜನರಲ್ಲಿ ನೆಲೆಯೂರಿರುತ್ತದೆ. ಈ ಕಗ್ಗದ ಅಮೃತವಾಹಿನಿಯು ಎದೆಯಿಂದ ಎದೆಗೆ ಸದಾ ಹರಿಯುತಿರಲಿ.

ಮಂಕುತಿಮ್ಮ ಕಂಡಿದ್ದು…
1. ಹಡಗು ಮತ್ತು ದೋಣಿ ನಡೆಸುವವನಿಗೆ ದಿಕ್ಕು ತೋರಿಸಲು ಒಂದು ದಿಕ್ಸೂಚಿ ಇರುವಂತೆ, ಈ ಬಾಳನ್ನು ನಡೆಸಲೂ ಒಂದು ಸರಿಯಾದ ದಾರಿ ಇರಬೇಕು. ಇದನ್ನು ಊಹಿಸುವುದು ಹೇಗೆ? ಈ ಜಗತ್ತಿಗೆ ಮೊದಲು ಯಾವುದು? ಯಾರಿಗಾದರೂ ತಿಳಿದಿದೆಯೇ? (25)

2. ಪುಸ್ತಕಗಳನ್ನು ಓದಿ ದೊರೆತ ಜ್ಞಾನ ತಲೆಯ ಮೇಲೆ ಇರುವ ಮಣಿಯಂತೆ. ಆದರೆ, ಮನಸ್ಸಿನಲ್ಲಿ ಬೆಳೆದ ಅರಿವು, ಗಿಡದಲ್ಲಿ ಬೆಳೆದ ಹೂವಿನಂತೆ. ವಸ್ತುವಿನ ಸಾಕ್ಷಾತ್ಕಾರವಾಗುವುದು ಒಳನೋಟದಿಂದಲೇ. (65)

3. ಬಾಳನ್ನು ದೂಷಿಸುವುದೇಕೆ ಮತ್ತು ಗೋಳಾಡುವುದೇಕೆ? ನಾವೇನೇ ಮಾಡಿದರೂ, ಈ ಬಾಳನ್ನು ನಡೆಸಿಕೊಂಡು ಹೋಗಲೇಬೇಕು. ಇದು ಪರಮಾತ್ಮನು ಆಡಿಸುವ ಆಟ. ನೀನು ಇದರಲ್ಲಿ ಪಾಲ್ಗೊಳ್ಳಲು ಅಳಬೇಡ. (266)

4. ಜಗತ್ತಿನಲ್ಲಿ ನಾನು ಒಬ್ಬಂಟಿಗ, ನನಗೆ ಯಾರೂ ಇಲ್ಲವೆಂದು ತಿಳಿಯಬೇಡ. ನಿನ್ನ ಅಂತರಾತ್ಮದಲ್ಲಿ ನೂರಾರು ಜನರು ಅವಿತುಕೊಂಡಿದ್ದಾರೆ: ನಿನ್ನ ಪೂರ್ವಿಕರು, ನಿನ್ನ ಜೊತೆಯಲ್ಲಿರುವವರು, ಬಂಧುಗಳು, ಮಿತ್ರರು ಮತ್ತು ಶತ್ರುಗಳು. ನಿನ್ನ ಸ್ವಭಾವ, ಇವರೆಲ್ಲರ ಸ್ವಭಾವಗಳನ್ನು ಕೂಡಿಕೊಂಡು ಆಗಿದೆ.

(ಸಾರಾಂಶ ಸಂಗ್ರಹ: ಸಂಪಟೂರು ವಿಶ್ವನಾಥ್‌)

Advertisement

Udayavani is now on Telegram. Click here to join our channel and stay updated with the latest news.

Next