ಬಡಗುತಿಟ್ಟು ಅದರಲ್ಲೂ ಬಡಾಬಡಗುತಿಟ್ಟಿನ ಭರವಸೆಯ ಕಲಾವಿದ ಪೌರಾಣಿಕ ಪ್ರಸಂಗಗಳಲ್ಲೂ ಸಾಮಾಜಿಕ ಪ್ರಸಂಗಗಳಲ್ಲೂ ಸಾಹಿತ್ಯಬದ್ಧ ಮಾತುಗಾರಿಕೆಯಿಂದ ಗಮನ ಸೆಳೆಯುತ್ತಿರುವ ಮಂಕಿ ಈಶ್ವರ ನಾಯ್ಕರಿಗೆ ಈ ಸಾಲಿನ ತಿರುಗಾಟ ವೃತ್ತಿ ಬದುಕಿನ ಬೆಳ್ಳಿಹಬ್ಬ.ಇದನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಫೆ.22ರಂದು ಕುಂದಾಪುರದಲ್ಲಿ ತನಗೆ ಹೆಜ್ಜೆಗಾರಿಕೆ ಕಲಿಸಿದ ಗುರುವಿಗೆ ಸಮ್ಮಾನವನ್ನು ನೀಡಲಿದ್ದಾರೆ.ಬಳಿಕ ಸಾಲಿಗ್ರಾಮ ಮೇಳದವರಿಂದ ಸುಭದ್ರಾ ಕಲ್ಯಾಣ-ಸುದರ್ಶನ ವಿಜಯ-ಮಾರಣಾಧ್ವರ ಎಂಬ ಮೂರು ಪೌರಾಣಿಕ ಪ್ರಸಂಗಗಳ ಪ್ರದರ್ಶನವಿದೆ.
ಭವ್ಯ ಕಲೆಗೆ ಭವಿಷ್ಯ ಇಲ್ಲ ಎನ್ನುವ ಈ ಕಾಲಘಟ್ಟದಲ್ಲಿ ಕಾಣಬರುವ ಕೆಲವೇ ಯುವ ಕಲಾವಿದರಲ್ಲಿ ಮಂಕಿ ಈಶ್ವರ ನಾಯ್ಕರು ಒಂದು ಆಶಾಕಿರಣ.ಭವಿಷ್ಯದಲ್ಲಿ ಮೇರು ಕಲಾವಿದನಾಗುವ ಎಲ್ಲಾ ಅರ್ಹತೆ ಇರುವ ಇವರು ಇಂದು ರಂಗದಲ್ಲಿ ಅತ್ಯುತ್ತಮ ಪಾತ್ರ ಪೋಷಣೆ,ಸುಂದರವಾದ ರೂಪ, ಆಳಂಗ, ಶುದ್ಧ ಸಂಪ್ರದಾಯದ ನೃತ್ಯ, ಹೆಚ್ಚಾ ಅಲ್ಲದ ಕಡಿಮೆಯೂ ಅಲ್ಲದ ಮಾತುಗಾರಿಕೆಯಿಂದ ಪುಂಡುವೇಷದಲ್ಲಿ ಉನ್ನತಿಗೇರಿ ಸದ್ಯ ಪುರುಷ ವೇಷಧಾರಿಯ ಸಾಲಿಗೆ ಬಂದು ಮುಟ್ಟಿದ್ದಾರೆ.
ಹೊನ್ನಾವರ ಸಮೀಪ ಮಂಕಿಯವ ರಾದ ಇವ ರನ್ನು ಕೆರೆಮನೆ ಶಂಭು ಹೆಗಡೆಯವರ ಶ್ರೀಮಯ ಯಕ್ಷಗಾನ ಕೇಂದ್ರ ಕೈಬೀಸಿ ಕರೆಯಿತು. ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ಹೆರಂಜಾಲು ಗೋಪಾಲ ಗಾಣಿಗರ ನಿರ್ದೇಶನದಲ್ಲಿ ಪರಂಪರೆಯ ಬಡಗುತಿಟ್ಟು ಕಲಾವಿದನಾಗಿ ಮೂಡಿಬಂದರು.1995ರಲ್ಲಿ ಉತ್ತರ ಕನ್ನಡದ ಬೈಲೂರಿನಲ್ಲಿ ಬಾಲಗೋಪಾಲನಾಗಿ ರಂಗ ಪ್ರವೇಶ ಮಾಡಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಗುಂಡಬಾಳ ಮೇಳದಲ್ಲಿ 9 ವರ್ಷ ಸೇವೆ ಸಲ್ಲಿಸಿ ಬಳಿಕ ಸಾಲಿಗ್ರಾಮ, ಪೆರ್ಡೂರು, ನೀಲಾವರ, ಅಮೃತೇಶ್ವರಿ ಮೇಳಗಳಲ್ಲಿ ತಿರುಗಾಟ ಮಾಡಿ ಸದ್ಯ ಸಾಲಿಗ್ರಾಮ ಮೇಳದ ಪ್ರಧಾನ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಬಬ್ರುವಾಹನ, ಅಭಿಮನ್ಯು, ಚಂದ್ರಹಾಸ, ಮದನ, ಸುದನ್ವ, ಲವ-ಕುಶ, ಧರ್ಮಾಂಗದ ಮುಂತಾದ ಸೌಮ್ಯ ಸ್ವಭಾವದ ವೀರಾವೇಷದ ಪಾತ್ರಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವ ಇವರ ಯಾವುದೇ ಪ್ರಸಂಗದ ಕೃಷ್ಣನ ಪಾತ್ರವನ್ನು ನೋಡಿದರೂ ಸಾಕು ಯೋಗ್ಯತೆಯನ್ನು ಅಳೆಯಲು.ಖಳ ನಾಯಕನಿಗಿಂತಲೂ ಕಥಾ ನಾಯಕನ ಪಾತ್ರವೇ ಹೆಚ್ಚು ಗಮನ ಸೆಳೆಯುತ್ತದೆ ಎನ್ನುವಲ್ಲಿ ಅವರ ಪಾತ್ರಪೂಷಣೆಯಲ್ಲಿ ಅವರ ಸೌಮ್ಯ ಕಳಂಕರಹಿತ ವ್ಯಕ್ತಿತ್ವವೂ ಪರಿಣಾಮ ಬೀರಿದೆ. ನಾಗಶ್ರೀ ಪ್ರಸಂಗದ ಕ್ಲಿಷ್ಟಕರ ಶುಭಾಂಗನಂಥ ಪಾತ್ರಗಳಲ್ಲಿ ಅತಿಯಾದ ಕುಣಿತವಿಲ್ಲದೆ ಕೂಡ ಕೇವಲ ಮಾತಿನ ಮಂಟಪದಿಂದ ಪಾತ್ರಪೋಷಣೆ ಮಾಡುವ ಮಾತುಗಾರಿಕೆಯ ಮೋಡಿ ಬೆರಗುಗೊಳಿಸುತ್ತದೆ. ಈಶ್ವರಿ ಪರಮೇಶ್ವರಿ, ಅಗ್ನಿಚರಿತ್ರೆ, ರಂಗನಾಯಕಿ, ನಕ್ಷತ್ರ, ನಾಗಾಭರಣ ಅಲ್ಲದೆ ಈ ವರ್ಷದ ತಿರುಗಾಟದಲ್ಲಿ ಜಯಭೇರಿ ಬಾರಿಸುತ್ತಿರುವ ಚಂದ್ರಮುಖಿ-ಸೂರ್ಯಸಖಿ ಮುಂತಾದ ಪ್ರಸಂಗಗಳ ಅವರ ಪಾತ್ರಗಳು ಪ್ರೇಕ್ಷಕರನ್ನು ರಂಜಿಸಿವೆ.
– ಪೊ|ಎಸ್.ವಿ.ಉದಯ ಕುಮಾರ ಶೆಟ್ಟಿ