ಭಟ್ಕಳ: ರಾಜ್ಯದ ಕಟ್ಟಕಡೆಯ ಬಡಜನರಿಗೂ ನ್ಯಾಯ ಒದಗಿಸುವುದರ ಜೊತೆಗೆ ಎಲ್ಲರಿಗೂ ಶಿಕ್ಷಣ ಲಭಿಸಬೇಕು ಎನ್ನುವುದು ನನ್ನ ಆಶಯ ಎಂದು ನೂತನ ಸಚಿವ ಮಂಕಾಳ ವೈದ್ಯ ಹೇಳಿದರು.
ರಾಜಧಾನಿಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜನರ ಪ್ರೀತಿ ವಿಶ್ವಾಸ ಗಳಿಸಿ ನಾನು ಕೆಲಸ ಮಾಡುತ್ತೇನೆ. ಜಿಲ್ಲೆಯ ಹಿರಿಯರಾದ ಆರ್ ವಿ ದೇಶಪಾಂಡೆ ಸೇರಿದಂತೆ ಎಲ್ಲಾ ಶಾಸಕರ ಸಹಕಾರದಿಂದ ನಾನು ಸಚಿವನಾಗಿದ್ದೇನೆ. ನಾನು ಸಚಿವರಾಗಲು ಎಲ್ಲರ ಸಹಕಾರ ಇದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಹಿರಿಯರಾದ ಆರ್ ವಿ ದೇಶಪಾಂಡೆಯವರ ಮಾರ್ಗದರ್ಶನದಲ್ಲೇ ನಾನು ಕಾರ್ಯನಿರ್ವಹಿಸುತ್ತೇನೆ. ಜಿಲ್ಲೆಯ ಆರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಟಗೊಳಿಸಲು ಸಹಕರಿಸುತ್ತೇನೆ.
ನಾನು ಈ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ಮಾಡಿದ ಕೆಲಸ ಮತ್ತು ಸಹಾಯ ಸಹಕಾರವೇ ನಾನು ಮತ್ತೊಮ್ಮೆ ದಾಖಲೆ ಮತಗಳಿಂದ ಗೆಲ್ಲಲು ಸಾಧ್ಯವಾಗಿದೆ. ನಾನು ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ ಸಹ ಕ್ಷೇತ್ರದ ಮತದಾರರಿಂದ ದೂರ ಹೋಗದೇ ಅವರ ಜೊತೆಗಿರುವುದೇ ನಾನು ಈ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ನನ್ನ ಕುಟುಂಬದವರೂ ಸಹ ನನಗೆ ರಾಜಕಾರಣವನ್ನು ಸಾಮಾನ್ಯರ ಜೊತೆಗೆ ಮಾಡಿ ಅವರಿಗೆ ನೆರವಾಗಿ ಎಂದು ಹೇಳುತ್ತಾರೆ.
ಅದರಂತೆ ನಾನು ಸಾಮಾನ್ಯ ಜನರ ಜೊತೆ ರಾಜಕಾರಣ ಮಾಡುವುದರ ಮೂಲಕ ನೆರವಾಗುತ್ತಿದ್ದೇನೆ. ಕ್ಷೇತ್ರದಲ್ಲಿ ನಾನು ಮಾಡಿಸಿದ ಅಭಿವೃದ್ಧಿ ಕೆಲಸವನ್ನು ಜನರು ಸದಾ ನೆನಪಿನಲ್ಲಿಟ್ಟುಕೊಳ್ಳುವ ರೀತಿಯಲ್ಲಿ ಮಾಡುತ್ತೇನೆ. ನಾನಿಲ್ಲದಿದ್ದರೂ ಸಹ ಜನತೆ ನನ್ನ ಅಭಿವೃದ್ಧಿ ಕಾರ್ಯವನ್ನು ಸ್ಮರಿಸಬೇಕು ಆ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆಂದ ಅವರು ನಾನು ಮಂತ್ರಿಗಿರಿ ಪಡೆಯಲು ಯಾವುದೇ ಲಾಭಿ ಮಾಡಿಲ್ಲ. ಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದ ತಕ್ಷಣ ಹಿರಿಯರು, ಮಾರ್ಗದರ್ಶಕರೂ ಆದ ಆರ್ ವಿ ದೇಶಪಾಂಡೆಯವರಿಗೆ ದೂರವಾಣಿ ಮೂಲಕ ತಿಳಿಸಿ ಅವರು ಆಶೀರ್ವಾದ ಪಡೆದಿದ್ದೇನೆ. ಹೈಕಮಾಂಡ್ ನನಗೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ. ಇಂತಹದ್ದೇ ಖಾತೆ ಬೇಕು ಎಂದು ಡಿಮ್ಯಾಂಡ್ ಮಾಡುವುದಿಲ್ಲ ಎಂದ ಅವರು ನನಗೆ ಸಚಿವ ಸ್ಥಾನ ಸಿಕ್ಕಿರುವುದರಿಂದ ಜಿಲ್ಲೆ ಮತ್ತು ನನ್ನ ಕ್ಷೇತ್ರದ ಬಡವರ ಕೆಲಸ ಮಾಡಲು ಅನುಕೂಲವಾಗಿದೆ ಎಂದರು.
ಜಿಲ್ಲೆಯಿಂದ ಸಾವಿರಾರು ಮಂದಿ:
ಭಟ್ಕಳ: ಮಂಕಾಳ ವೈದ್ಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ವೀಕ್ಷಿಸಲು ಭಟ್ಕಳ ಸೇರಿದಂತೆ ಜಿಲ್ಲೆಯಿಂದ ಸಾವಿರಕ್ಕೂ ಅಧಿಕ ಜನರು ರಾಜಧಾನಿಗೆ ತೆರಳಿದ್ದು ಮಂಕಾಳ ವೈದ್ಯರ ಜನಪ್ರಿಯತೆಗೆ ಸಾಕ್ಷಿಯಾಯಿತು.
ಶನಿವಾರ ರಾಜ್ಯಭವನದಲ್ಲಿ ಪ್ರಮಾಣ ವಚನ ಸಮಾರಂಭದದಲ್ಲಿ ಕೆಲವೇ ಜನರಿಗೆ ಪಾಲ್ಗೊಳ್ಳಲು ಅವಕಾಶ ಇದ್ದರೂ ಸಹ ಭಟ್ಕಳ ಹಾಗೂ ಜಿಲ್ಲೆಯ ವಿವಿಧ ಭಾಗದಿಂದ ಹೋದ ಮಂಕಾಳ ವೈದ್ಯರ ಅಭಿಮಾನಿಗಳು ಹೊರಗಡೆ ಕುಳಿತು ಎಲ್‌ಇಡಿ ಮೂಲಕ ವೈದ್ಯರು ಪ್ರಮಾಣ ವಚನ ಸ್ವೀಕರಿಸುವುದನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ್ದಲ್ಲದೇ ಮಂಕಾಳ ವೈದ್ಯರಿಗೆ ಜೈಕಾರ ಕೂಗಿದರು.ಮಂಕಾಳ ವೈದ್ಯರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ವೀಕ್ಷಿಸಲು ಸಾವಿರ ಜನರು ಸ್ವಯಂಪ್ರೇರಿತರಾಗಿ ಅವರ ಅಭಿಮಾನದ ಮೇರೆಗೆ ದೂರದ ಬೆಂಗಳೂರಿಗೆ ತೆರಳಿದ್ದು ವಿಶೇಷವಾಗಿತ್ತು.