ಯಕ್ಷಗಾನವೇ ಉಸಿರಾಗಿ ಬದುಕಿದವರು ಹೊಸ್ತೋಟ ಭಾಗವತರು. ಬದುಕಿನುದ್ದಕ್ಕೂ ಯಕ್ಷಗಾನ ವಲಯದಲ್ಲಿ ಸಂಚರಿಸುತ್ತ, ಕಲಿಸುತ್ತ, ಕಲಿಯುತ್ತ ಕಾಲ ಕಳೆದ ಅವರು ಯಕ್ಷಗಾನದ ಅವಧೂತರು.
ಭಾಗವತರು ಶಿರಸಿ ಸಮೀಪದ ಹೊಸ್ತೋಟದವರು. ತಂದೆ ತಾಯಿಗೆ ಏಳು ಮಕ್ಕಳು. ಎರಡನೆಯವನು ಮಂಜುನಾಥ. ಬಡತನದ ಬದುಕು. ಆ ಕಾಲದ ಪ್ರಸಿದ್ಧ ಭಾಗವತ ವೆಂಕಪ್ಪ ಹೆಗಡೆಯವರ ಮೂಲಕ ಬಾಲಕ ಮಂಜುನಾಥನಿಗೆ ಆ ಕಾಲದ ದಿಗ್ಗಜ ಕಲಾವಿದರ ಸಾಮೀಪ್ಯ ಮತ್ತು ಸಲುಗೆ ಬೆಳೆಯಿತು.
ಕೆರೆಮನೆ ಶಿವರಾಮ ಹೆಗಡೆ ಮೆಚ್ಚಿನ ನಟ. ಯಾಜಿ ಭಾಗವತರಿಗೆ ಇವನ ಕುರಿತು ಮಮತೆ. ರಂಗದ ಮೇಲೆ ಪಕ್ಕದಲ್ಲಿಯೇ ಕೂರಿಸಿಕೊಂಡು, ಕೆಲವೊಮ್ಮೆ ತಾಳವನ್ನು ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಚೂಟಿಯಾದ ಹುಡುಗ ನಿಗೆ ಬಾಲವೇಷಗಳನ್ನು ಕೊಟ್ಟು ರಂಗಕ್ಕೆ ತರಲು ಕಲಾವಿ ದರು ಉತ್ತೇಜಿಸಿದರು. ದಿನೇದಿನೇ ಯಕ್ಷಗಾನದ ಆಸಕ್ತಿ ಹೆಚ್ಚಿತು. ಕ್ರಮೇಣ ಮಂಜುನಾಥ ಕೊಡಗಿಪಾಲ ಗಣಪತಿ ಹೆಗಡೆಯವರಿಗೆ ತಾಳಮದ್ದಳೆಗಳಲ್ಲಿ ಸಾಥಿಯಾದ.
ಆರನೇ ತರಗತಿಗೆ ವಿದ್ಯಾಭ್ಯಾಸ ಮೊಟಕಾಯಿತು. ತನ್ನದೇ ಆದ ನೆಲೆ ಕಲ್ಪಿಸಿಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದಾಗ ರಾಮಕೃಷ್ಣಾಶ್ರಮಕ್ಕೆ ಸೇರಿದರು. ಆದರೆ ಬಳಿಕ ಅಲ್ಲಿನ ಬದುಕು ತನ್ನಂಥವರಿಗಲ್ಲವೆನಿಸಿ ಮರಳಿದರು. ಪೂರ್ಣವಾಗಿ ಯಕ್ಷಗಾನಕ್ಕೆ ಅರ್ಪಿಸಿಕೊಂಡರು.
ವೆಂಕಟರಮಣ ಯಾಜಿ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೊಡಗಿಪಾಲ ಗಣಪತಿ ಹೆಗಡೆ ಹೀಗೆ ಹಲವರಿಂದ ಹಲವನ್ನು ಪಡೆದರು. ಹೊಸ್ತೋಟರು ವರಕವಿಗಳ ವರ್ಗಕ್ಕೆ ಸೇರಿದವರು. ಯಕ್ಷಗಾನದ ಪದ್ಯರಚನೆಯಲ್ಲಿ ಎತ್ತಿದ ಕೈ. ಅವರು ರಚಿಸಿದ ಪ್ರಸಂಗಗಳ ಸಂಖ್ಯೆ ಮುನ್ನೂರಕ್ಕೆ ಮಿಕ್ಕಿದೆ. ರಾಮಾಯಣ, ಭಾರತ ಮತ್ತು ಭಾಗವತಗಳನ್ನು ಪ್ರಸಂಗ ರೂಪಕ್ಕಿಳಿಸಿದವರು ಅವರೊಬ್ಬರೇ. ಅಂಥವರು ಹಿಂದೆ ಹುಟ್ಟಿಲ್ಲ; ಮುಂದೆ ಹುಟ್ಟುವರೋ ಇಲ್ಲವೋ ತಿಳಿಯದು.
ಪ್ರೊ| ಎಂ.ಎ. ಹೆಗಡೆ, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ