Advertisement

ಪಂಚಾಯಿತಿಗಳನ್ನು ಬಲಪಡಿಸಿ: ಮಂಜುನಾಥ ಭಂಡಾರಿ ಒತ್ತಾಯ

08:21 PM Feb 21, 2023 | Team Udayavani |

ವಿಧಾನಪರಿಷತ್ತು: ಪಂಚಾಯತ್‌ರಾಜ್‌ ಸಂಸ್ಥೆಗಳ ಬಲವರ್ಧನೆಗೆ ಹೆಚ್ಚುವರಿ ಅನುದಾನ ಒದಗಿಸಿ ಆಡಳಿತವನ್ನು ಗಟ್ಟಿಗೊಳಿಸಲು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

“ಹಣಕಾಸಿನ ಕೊರತೆ, ಪಂಚಾಯಿತಿಗಳ ಬೆಳವಣಿಗೆಗೆ ಅಡ್ಡಿ’ ಎಂಬ ಶೀರ್ಷಿಕೆಯಡಿ ಫೆ.20ರಂದು “ಉದಯವಾಣಿ’ಯಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪಂಚಾಯಿತಿಗಳು ಹಣಕಾಸಿನ ಮತ್ತು ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದು, ಇದು ಅವುಗಳ ಕಾರ್ಯ ಮತ್ತು ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು 2022-23ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.

ಆಧಿಕಾರದ ವಿಕೇಂದ್ರೀಕರಣ ಬಹಳ ಕಡಿಮೆ ಇರುವುದರಿಂದ, ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಆಡಳಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ನೀಡದ ವಿನಃ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ . ಸಂಪನ್ಮೂಲಗಳ ಕೊರತೆಯೂ ಇದ್ದು, ತರಬೇತಿ ಕೇಂದ್ರಗಳಲ್ಲಿ ಕಂಪ್ಯೂಟರ್‌ಗಳ ಕೊರತೆ, ಉಪಗ್ರಹ ಸಂವಹನ ಸೌಲಭ್ಯದ ಕೊರತೆ, ವಸತಿ ನಿಲಯಗಳಲ್ಲಿನ ಕಳಪೆ ಸೌಲಭ್ಯ ಇತ್ಯಾದಿ ಮೂಲಭೂತ ಸೌಕರ್ಯಗಳ ಅಭಾವವನ್ನು ಸಂಸ್ಥೆಗಳು ಎದುರಿಸುತ್ತಿವೆ ಎಂದರು.

ಗ್ರಾಮ ಪಂಚಾಯಿತಿಗಳ ದಕ್ಷ ಕಾರ್ಯನಿರ್ವಹಣೆಗೆ ಉನ್ನತ ಅಧಿಕಾರಿಗಳಿಂದ ತರಬೇತಿ ಮತ್ತು ಸಮರ್ಥ್ಯಾಭಿವೃದ್ಧಿಯ ಅಗತ್ಯವಿದೆ. ಸಂಪನ್ಮೂಲಗಳ ಕೊರತೆ, ಯುವಕರು ಪಾಲ್ಗೊಳ್ಳುವಿಕೆಯ ಕೊರತೆ ಮತ್ತು ರಾಜಕೀಯ ವರ್ಗದ ಹಸ್ತಕ್ಷೇಪಗಳು ಪಂಚಾಯತ್‌ರಾಜ್‌ ವ್ಯವಸ್ಥೆಗೆ ಸವಾಲಾಗಿವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ ಎಂದು “ಉದಯವಾಣಿ’ ಸುದ್ದಿಯನ್ನು ಉಲ್ಲೇಖೀಸಿದ ಅವರು, ಪಂಚಾಯತ್‌ರಾಜ್‌ ಸಂಸ್ಥೆಗಳ ಬಲವರ್ಧನೆಗೆ ಹೆಚ್ಚುವರಿ ಅನುದಾನ ಒದಗಿಸಿ ಆಡಳಿತವನ್ನು ಗಟ್ಟಿಗೊಳಿಸಲು ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೆ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next