ಕಾರ್ಕಳ: ಕಾರ್ಕಳವು ಪ್ರವಾಸಿ ತಾಣವಾಗಿ ಅಭಿವೃದ್ಧಿ ಆಗಬೇಕು ಎನ್ನುವುರಲ್ಲಿ ಎರಡು ಮಾತಿಲ್ಲ. ಅದಕ್ಕೆ ಯಾವೆಲ್ಲ ಸಹಕಾರ ಬೇಕೊ ಅದನ್ನು ನೀಡಲು ಸಿದ್ಧನಿದ್ದೇನೆ. ಆದರೆ ಪರಶುರಾಮನ ಮೂರ್ತಿಯ ಕುರಿತು ಸೃಷ್ಟಿಯಾಗಿರುವ ಹಲವು ಪ್ರಶ್ನೆಗಳಿಗೆ ಮೊದಲು ಉತ್ತರ ಸಿಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಅವರು ಗುರುವಾರ ಬೈಲೂರಿನ ಪರಶುರಾಮ ಥೀಂ ಪಾರ್ಕ್‌ಗೆ ಭೇಟಿ ನೀಡಿ ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಮೂರ್ತಿ ಪ್ರತಿಷ್ಠಾಪಿಸಿರುವ ಜಾಗ ಯಾರದು? ಮೂರ್ತಿಯನ್ನು ತಯಾರಿಸಿರುವುದು ಎಲ್ಲಿ? ತೆರವುಗೊಳಿಸಿದ ಮೂರ್ತಿ ಈಗ ಎಲ್ಲಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅದನ್ನು ತಿಳಿದು ಜನರಿಗೆ ಹೇಳಬೇಕಾದ್ದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ. ವಾಸ್ತವ ವರದಿಯನ್ನು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿ, ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಬಳಿಕ ಸರಕಾರ ಮಟ್ಟದಲ್ಲಿ ಮುಂದಿನ ಕ್ರಮಗಳ ಕುರಿತು ನಿರ್ಧಾರವಾಗಲಿದೆ ಎಂದರು.
ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಮುಂಚಿತವಾಗಿ ಮೂರ್ತಿಗೆ ಸಂಬಂಧಿಸಿ ವರದಿ ನೀಡುವಂತೆ ಡಿಕೆಶಿ ಕಚೇರಿಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇನೆ. ಕೆಲವೊಂದು ಸಂಗತಿಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದರು.
ಉದಯ್ ಶೆಟ್ಟಿ ಮುನಿಯಾಲು ಸಹಿತ ಮುಖಂಡರು ಉಪಸ್ಥಿತರಿದ್ದರು.
ಸ್ಥಳದಲ್ಲಿ ಸಿಕ್ಕಿತು ಚೂರು
ಪರಶುರಾಮನ ಮೂರ್ತಿ ಇದ್ದ ಜಾಗವನ್ನು ಮರೆಮಾಡಿರುವ ಪ್ಲಾಸ್ಟಿಕ್ ಹೊದಿಕೆಯನ್ನು ಬದಿಗೆ ಸರಿಸುವ ಕೆಲಸವನ್ನು ಜತೆಗೆ ತೆರಳಿದ್ದ ಕಾರ್ಯಕರ್ತರು ಮಾಡಿದರು. ಆಗ ಕಂಚಿನದ್ದ ಲ್ಲದ ಕೆಲವು ಚೂರುಗಳು ಪತ್ತೆಯಾಗಿದ್ದು, “ಇದು ಫೈಬರ್ ಮೂರ್ತಿ ಎಂಬುದು ಸ್ಪಷ್ಟವಾಯಿತು’ ಎಂದರು. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ವ್ಯಾಪಕ ಸಂದೇಶ ಹರಿದಾಡಿತು. ಅಧಿಕಾರಿಗಳ ಬಳಿ ವಿಚಾರಿಸಿದಾಗ ಅದು ವೆಲ್ಡ್ ಗ್ಯಾಪ್ ಭರ್ತಿಗೊಳಿಸಿದ ಸಂದರ್ಭದ ಪ್ಯಾಕಿಂಗ್ ಚೂರುಗಳು ಎಂದು ಉತ್ತರಿಸಿದರು.
ಇದನ್ನೂ ಓದಿ: Team India: ಕಿವೀಸ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕಿಲ್ಲ ಸ್ಟಾರ್ ಅಲ್ ರೌಂಡರ್