ಮುಂಬಯಿ: ನಗರದ ಬೈಕುಲಾ ಜೈಲಿನಲ್ಲಿ ಕೈದಿ ಮಂಜುಳಾ ಶೆಟ್ಯೆಯ ಅನುಮಾನಾಸ್ಪದ ಸಾವಿನ ಹಿಂದಿನ ಒಂದೊಂದೇ ರಹಸ್ಯಗಳು ಇದೀಗ ಬಯಲಾಗತೊಡಗಿವೆ.
ಜೈಲಿನ ಅಧಿಕಾರಿಗಳು ಮತ್ತು ಸಿಬಂದಿಯಿಂದ ತೀವ್ರ ಥಳಿತಕ್ಕೊಳಗಾಗಿದ್ದ ಮಂಜುಳಾ ಶೆಟ್ಯೆ ಈ ಕಾರಣ ದಿಂದಾಗಿಯೇ ಸಾವನ್ನಪ್ಪಿದ್ದಾಳೆ ಎಂದು ಸಹಕೈದಿಗಳು ಈಗಾಗಲೇ ಆರೋಪಿಸಿದ್ದರೆ ಇದೀಗ ಜೈಲಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಎನ್‌ಜಿಒ ಒಂದರ ಪ್ರತಿನಿಧಿಗಳೂ ಇದೇ ಆರೋಪವನ್ನು ಪುನರುಚ್ಚರಿಸಿದ್ದಾರಲ್ಲದೆ ಮಂಜುಳಾ ಶೆಟ್ಯೆ ಸಾವನ್ನಪ್ಪಿದ ದಿನದಂದು ಜೈಲಿನಲ್ಲಿ ಕಂಡ ದೃಶ್ಯಾವಳಿಗಳನ್ನು ಇದೀಗ ಬಿಚ್ಚಿಟ್ಟಿದ್ದಾರೆ.
ಜೈಲಿನ ಕೈದಿಗಳಿಗೆ ಕೌನ್ಸೆಲಿಂಗ್ ನಡೆಸುತ್ತಾ ಬಂದಿರುವ ಎನ್‌ಜಿಒ ಒಂದರ ಪ್ರತಿನಿಧಿ ಜೂ.23ರಂದು ಸಂಜೆ ಗಂಟೆ 4-5ರ ವೇಳೆಗೆ ಜೈಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೈಲಿನ ಆವರಣದಲ್ಲಿ ಹಿಂದಿ ಚಿತ್ರಗೀತೆಯೊಂದನ್ನು ಪ್ರಸಾರಿಸ ಲಾಗುತ್ತಿದ್ದರೆ ಜೈಲಿನ ನೆಲಮಹಡಿಯಲ್ಲಿ ಸುಮಾರು 30-40ರಷ್ಟು ಮಹಿಳಾ ಕೈದಿಗಳು ಜೂ.26ರಂದು ಜೈಲಿನಲ್ಲಿ ನಡೆಯಲಿದ್ದ ಈದ್ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಾಗಿ ಡ್ಯಾನ್ಸ್‌ನ ರಿಹರ್ಸಲ್‌ನಲ್ಲಿ ತೊಡಗಿದ್ದರು. ಈ ನಡುವೆ ಜೈಲಿನ ಸಿಬಂದಿ ಕೈದಿ ಮಂಜುಳಾ ಶೆಟ್ಯೆಗೆ ಥಳಿಸುತ್ತಿದ್ದರು. ಇನ್ನು ಬೈಕುಲಾ ಜೈಲಿನ ಅಧೀಕ್ಷಕರಾಗಿರುವ ಮನೀಷಾ ಪೊಖಾರ್ಕರ್ ಮತ್ತು ಇತರ ಸಿಬಂದಿ ಮಂಜುಳಾ ಶೆಟ್ಯೆಯ ತಲೆಕೂದಲನ್ನು ಹಿಡಿದೆಳೆದು ಆಕೆಯ ಮೇಲೆ ಹಲ್ಲೆ ಎಸಗುತ್ತಿದ್ದರು ಎಂದವರು ತಿಳಿಸಿದರು.
ಮಂಜುಳಾ ಶೆಟ್ಯೆಗೆ ಥಳಿಸಿ ಸುಸ್ತಾದ ಮನೀಷಾ ಬಳಿಕ ಜೈಲಿನ ಕಾವಲುಗಾರರಾದ ವಸೀಮಾ ಶೇಖ್ ಮತ್ತು ಇತರ ಸಿಬಂದಿಯನ್ನು ಕರೆದು ಶೆಟ್ಯೆಗೆ ಪಾಠ ಕಲಿಸುವಂತೆ ಸೂಚನೆ ನೀಡಿದರು. ಅದರಂತೆ ಇವರೀರ್ವರು ಶೆಟ್ಯೆಯನ್ನು ಥಳಿಸಲಾರಂಭಿಸಿದರು. ಹೊಡೆತವನ್ನು ತಾಳಲಾರದೇ ಮಂಜುಳಾ ಶೆಟ್ಯೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿದಳು. ಇದಾದ ಬಳಿಕ ಜೈಲಿನ ಸಿಬಂದಿ ಆಕೆಯನ್ನು ಜೈಲಿನ ಮೊದಲ ಮಹಡಿಯಲ್ಲಿರುವ ಆಕೆಯ ಕೊಠಡಿಗೆ ತಳ್ಳಿದರು ಎಂದು ಎನ್‌ಜಿಒನ ಪ್ರತಿನಿಧಿಗಳು ದೂರಿದ್ದಾರೆ.
ಸಹಕೈದಿಗಳು ನೃತ್ಯಾಭ್ಯಾಸದಲ್ಲಿ ನಿರತರಾಗಿದ್ದರೆ ಉಳಿದ ಕೈದಿಗಳು ಈ ನೃತ್ಯವನ್ನು ನೋಡುವುದರಲ್ಲಿ ತಲ್ಲೀನರಾಗಿದ್ದರು. ಇದರಿಂದಾಗಿ ಮಂಜುಳಾ ಪ್ರಜ್ಞಾಹೀನಳಾಗಿ ತನ್ನ ಕೊಠಡಿ ಯಲ್ಲಿ ಬಿದ್ದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಒಂದು ವೇಳೆ ಈಕೆಯನ್ನು ಯಾರಾದರೂ ಗಮನಿಸಿ ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸುತ್ತಿದ್ದಲ್ಲಿ ಆಕೆಯ ಪ್ರಾಣ ಉಳಿಯುತ್ತಿತ್ತು ಎಂದವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.