ಶಿರಸಿ: ಕರ್ನಾಟಕದ ತಿರುಪತಿ ಎಂದೇ ಕರೆಯಲಾಗುವ ಮಂಜುಗುಣಿ ವೆಂಕಟರಮಣ ದೇವಾಲಯದ ಪಾರ್ಶ್ವದಲ್ಲೇ ಇರುವ ಕೋನಾರಿ ತೀರ್ಥ ಕೆರೆಗೆ ಕಾಯಕಲ್ಪದ ಭಾಗ್ಯ ಸಿಕ್ಕಿದೆ. ವೆಂಕಟರಮಣನ ಭಕ್ತರೇ ಕರ ಸೇವೆಯ ಕಾರ್ಯ ಮಾಡುತ್ತಿದ್ದಾರೆ.
ಬಹುಕಾಲದಿಂದ ಅಭಿವೃದ್ಧಿಗೆ ಹಂಬಲಿಸುತ್ತಿದ್ದ ಕೆರೆಯ ಜೀರ್ಣೋದ್ಧಾರಕ್ಕೆ ಕಂಕಣ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಕಾರ್ಯವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ.
ಸುಮಾರು ಒಂದು ಸಾವಿರದ ಎರಡನೂರು ವರ್ಷಗಳಾಚೆ ಮಂಜುಗುಣಿಯ ಕೋನಾರಿ ತೀರ್ಥವನ್ನು ಈ ಶತಮಾನದಲ್ಲೇ ಪ್ರಥಮ ಬಾರಿಗೆ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಮಂಜುಗುಣಿ ಭಕ್ತರು ಹಾಗೂ ಸುತ್ತಲಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಗುದ್ದಲಿ ಬುಟ್ಟಿ ಹಿಡಿದು ಕೆಲಸ ಮಾಡಿದ್ದಾರೆ. ದೇವರ ವರ್ಧಂತಿಯಂದು ಕೋನಾರಿ ತೀರ್ಥ ಕೆರೆಯಿಂದ ನೀರು ತಂದು ಅಕ್ಕಿ ತೊಳೆಯುಲಾಗುತ್ತಿತ್ತು. ಮಂಜುಗುಣಿಯಲ್ಲಿ ಐದು ಕೆರೆಗಳಿದ್ದರೂ ದೀಪೋತ್ಸವ ಆಚರಣೆ ಕೂಡ ಇಲ್ಲೇ ನಡೆಯುತ್ತಿತ್ತು. ಆದರೆ, ಸಾಕಷ್ಟು ಹೂಳು ತುಂಬಿತ್ತು.
ಮೇ ಎರಡನೇ ವಾರದಲ್ಲಿ ಕೆರೆ ಹೂಳೆತ್ತುವಿಕೆಗೆ ಆಡಳಿತ ಮಂಡಳಿ ಸೂಚನೆ ಪ್ರಕಾರ ಭಕ್ತರು ಮುಂದಾಗಿದ್ದಾರೆ. 60 ಅಡಿ ಅಗಲ ಮತ್ತು ಅಷ್ಟೇ ಉದ್ದದ ಈ ಕೆರೆಯ ಹೂಳನ್ನು ಮಂಜುಗುಣಿ, ರಾಗಿಹೊಸಳ್ಳಿ, ದೇವನಳ್ಳಿ, ಸವಲೆ, ಕಲ್ಲಳ್ಳಿ, ಲೆಕ್ಕರಕಿ, ಹೊಳೆಬೈಲ್, ಮೇಲಿನಕೊಪ್ಪಲು, ಕಳೂಗಾರ, ಕಿರಗಾರ ಸೇರಿದಂತೆ ಸುತ್ತಲಿನ ಹದಿನೈದಕ್ಕೂ ಅಧಿಕ ಗ್ರಾಮಗಳ ಜನರು ಪಾಲ್ಗೊಂಡಿದ್ದು ಹೂಳೆತ್ತಿದ್ದಾರೆ. ತುಂಬಿದ್ದ 10 ಅಡಿಯಷ್ಟು ಹೂಳನ್ನು 15 ದಿನಗಳಲ್ಲಿ ತೆಗೆದಿದ್ದಾರೆ. ಕೆರೆಯಲ್ಲಿ ಜಲದ ಒರತೆ ಕಾಣಿಸಿದ್ದು ಭಕ್ತರ ಉತ್ಸಾಹಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
ಈ ಕೆರೆ ಮೊದಲು ಹೇಗಿತ್ತೋ ಹಾಗೆ ಅಭಿವೃದ್ಧಿ ಮಾಡಬೇಕು ಎಂಬುದು ಇಲ್ಲಿನ ಜನರ ಅಭಿಮತ. ಅದಕ್ಕಾಗಿ ಕೆರೆಗೆ ಕಟ್ಟೆ ಕಟ್ಟಲು ಮುಂದಾಗಿದ್ದಾರೆ ಎನ್ನುತ್ತಾರೆ ಸ್ಥಳೀಯ ಪ್ರಮುಖರಾದ ಅನಂತ ಪೈ ಹಾಗೂ ಎಂ.ಎನ್. ಹೆಗಡೆ ಖೂರ್ಸೆ ಇತರರು.