ಕಾಸರಗೋಡು: ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಟಿ. ಜಲೀಲ್ ಮತ್ತು ಜುವೆಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ಜಾಥಾ ಜರಗಿತು.
ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ. ನಾೖಕ್ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ಜಾಥಾವನ್ನು ಉದ್ಘಾಟಿಸಿದರು.
ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಸಚಿವರೊಬ್ಬರು ಎನ್‌ಐಎ ವಿಚಾರಣೆ ಗೊಳಗಾಗುತ್ತಿರುವುದು ಇದೇ ಮೊತ್ತ ಮೊದಲ ಬಾರಿಯಾಗಿದೆ. ಹೀಗಿದ್ದರೂ ಸಚಿವ ಕೆ.ಟಿ. ಜಲೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ ಮತ್ತು ಮುಖ್ಯಮಂತ್ರಿಗಳು ಅವರನ್ನು ಸಚಿವ ಸ್ಥಾನದಿದ ಹೊರ ಹಾಕಲು ಧೈರ್ಯ ತೋರುತ್ತಿಲ್ಲ. ಇದು ಕೇರಳಕ್ಕೆ ಮಾತ್ರವಲ್ಲ ರಾಜ್ಯದ ಶಿಕ್ಷಣ ವಲಯಕ್ಕೂ ನಾಚಿಕೆಗೇಡು ಎಂದು ಪ್ರಮೀಳಾ ಸಿ.ನಾೖಕ್ ಅವರು ಹೇಳಿದರು.
ಜುವೆಲರಿ ಠೇವಣಿ ವಂಚನೆ ಸಂಬಂಧಿಸಿ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ವಿರುದ್ಧ ಹಲವು ಕೇಸುಗಳು ದಾಖಲಾಗಿರುವುದರಿಂದ ಅವರು ಶಾಸಕರಾಗಿ ಮುಂದುವರಿಯಲು ನೈತಿಕ ಹಕ್ಕಿಲ್ಲವೆಂದೂ, ಈ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು. ಈ ಇಬ್ಬರು ರಾಜೀನಾಮೆ ನೀಡುವ ತನಕ ಹೋರಾಟ ಮುಂದುವರಿಯುವುದಾಗಿ ಹೇಳಿದರು.
ಮಹಿಳಾ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತಡೆದರು. ಮಹಿಳಾ ಬಿಜೆಪಿ ಕಾರ್ಯಕರ್ತರು ಪೊಲೀಸ್ ಬಾರಿಕೇಡ್‌ನ ಮೇಲೇರಿ ಸಚಿವರ ಹಾಗೂ ಶಾಸಕರ ವಿರುದ್ಧ ಘೋಷಣೆ ಮೊಳಗಿಸಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.