Advertisement

Manjeshwar ಪಂಚಾಯತ್‌ ಸಭೆಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಕುಸಿದು ಬಿದ್ದ ಮಹಿಳೆ

12:08 AM Aug 09, 2024 | Team Udayavani |

ಮಂಜೇಶ್ವರ: ಮಂಜೇಶ್ವರ ಪಂಚಾಯತ್‌ ಆಡಳಿತ ಸಮಿತಿಯ ಮುಸ್ಲಿಂ ಲೀಗ್‌ ಸದಸ್ಯೆ ಆಯಿಷತ್‌ ರುಬೀನ ಪಂಚಾಯತ್‌ ಆಡಳಿತ ಸಮಿತಿ ಸಭೆ ನಡೆಯುತ್ತಿದ್ದಂತೆ ನಿದ್ದೆ ಮಾತ್ರೆ ಸೇವಿಸಿ ಕುಸಿದು ಬಿದ್ದ ಘಟನೆ ನಡೆದಿದ್ದು, ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ತನ್ನ ವಾರ್ಡ್‌ನಲ್ಲಿ ತೋರುತ್ತಿರುವ ಅವಗಣನೆಯನ್ನು ಪ್ರತಿಭಟಿಸಿ ನಿದ್ದೆ ಮಾತ್ರೆ ಸೇವಿಸಿದ್ದರೆನ್ನಲಾಗಿದೆ. ಪಂಚಾಯತ್‌ ಉಪಾಧ್ಯಕ್ಷ ರಫೀಕ್‌, ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ್‌ ಬಡಾಜೆ, ಸಿಪಿಐ ಸದಸ್ಯೆ ರೇಖಾ ಮೊದಲಾದವರು ಸೇರಿ ಅವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರು. ಆ ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು.

25 ವರ್ಷದಷ್ಟು ಹಳೆಯದಾದ 2 ಅಂಗನವಾಡಿಗಳು ಶೋಚನೀಯ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಸರಕಾರ ನಿರ್ದೇಶ ನೀಡಿತ್ತು. ಆದರೆ ಕಟ್ಟಡ ನಿರ್ಮಿಸಲು ಪಂಚಾಯತ್‌ ಯತ್ನಿಸಿಲ್ಲವೆನ್ನಲಾಗಿದೆ.

ಬದಲಾಗಿ ಬಾಡಿಗೆ ರಹಿತವಾಗಿ ಲಭಿಸಿದ ಎರಡು ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಆ ಕಟ್ಟಡವು ಶೋಚನೀಯಾವಸ್ಥೆಯಲ್ಲಿದೆ. ಆಡಳಿತ ಸಮಿತಿ ಸಭೆ ಆರಂಭಗೊಂಡ ಕೂಡಲೇ ತನ್ನ ವಾರ್ಡ್‌ನ ಅಂಗನವಾಡಿಗಳ ವಿಷಯ ಏನಾಯಿತು ಎಂದು ರುಬೀನಾ ಪ್ರಶ್ನಿಸಿದರು. ಮುಂದಿನ ಸಭೆಯಲ್ಲಿ ಈ ವಿಷಯದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು. ಈ ವಿಷಯವನ್ನು ಸ್ಪಷ್ಟಪಡಿಸಿದ ಬಳಿಕ ಸಭೆ ನಡೆಸಿದರೆ ಸಾಕು ಎಂದು ತನ್ನನ್ನು ಕೂಡಾ ಜನರೇ ಆಯ್ಕೆ ಮಾಡಿದ್ದಾರೆಂದು ರುಬೀನಾ ಹೇಳಿದರು.

ಸರಕಾರ ನಿರ್ದೇಶಿಸಿದ ಅಂಗನವಾಡಿ ಕಟ್ಟಡಗಳನ್ನು ಕೂಡ ನಿರ್ಮಿಸದ ಪಚಾಯತ್‌ ಆಡಳಿತ ಸಮಿತಿಯೊಂದಿಗೆ ಹೊಂದಿಕೊಂಡು ಸಾಗಲು ಸಾಧ್ಯವಿಲ್ಲವೆಂದು ಸಭೆಯಲ್ಲಿ ಅವರು ತಿಳಿಸಿದರು. ಬಳಿಕ ತನ್ನಲ್ಲಿದ್ದ ನಿದ್ದೆ ಮಾತ್ರೆಗಳನ್ನು ನುಂಗಿದಾಗ ಪ್ರಜ್ಞಾಹೀನರಾಗಿ ಬಿದ್ದ ರುಬೀನಾರನ್ನು ಆಡಳಿತ ಸಮಿತಿ ಸದಸ್ಯರು ಮಂಗಲ್ಪಾಡಿ ಆಸ್ಪತ್ರೆಗೆ ಕರೆದೊಯ್ದು, ಆ ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಯಿತು. ರುಬೀನಾ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next