ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಬೇಕೂರು ಜಿಎಚ್‌ಎಸ್‌ಎಸ್ ಶಾಲೆಯಲ್ಲಿ ಜರಗುತ್ತಿರುವ ಶಾಲಾ ವಿಜ್ಞಾನ ಮೇಳದ ವೇದಿಕೆಯ ಮುಂಭಾಗ ಹಾಕಲಾಗಿದ್ದ ಪೆಂಡಾಲ್ ಆಕಸ್ಮಿಕವಾಗಿ ಕುಸಿದು ಅಡಿಯಲ್ಲಿದ್ದ ಮಕ್ಕಳ ಮೇಲೆ ಬಿದ್ದಿರುವುದರಿಂದ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 2.45 ಕ್ಕೆ ಈ ಘಟನೆ ನಡೆದಿದ್ದು ಮುಖ್ಯ ವೇದಿಕೆಯಾದ್ದರಿಂದ ಹಲವಾರು ಮಂದಿ ಇದರೊಳಗೆ ಇದ್ದು ಸೀಟಿನಡಿಯಲ್ಲಿ ಸಿಲುಕಿದ್ದರು. ಗಾಯಾಳು ವಿದ್ಯಾರ್ಥಿಗಳನ್ನು ತತ್‌ಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ. ಅಗ್ನಿ ಶಾಮಕ ದಳ ಹಾಗು ಪೊಲೀಸರು ಸ್ಥಳಕ್ಕೆ ಧಾವಿಸಿ ಮಕ್ಕಳು ಸಹಿತ ಎಸ್ಕೋರ್ಟಿಂಗ್ ಟೀಚರ್ಸ್ ಹಾಗು ತೀರ್ಪುಗಾರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೆಂಡಾಲ್ ಇದ್ದಕ್ಕಿದ್ದಂತೆ ಭಾರೀ ಶಬ್ದದೊಂದಿಗೆ ಕುಸಿದು ಬಿದ್ದಿತ್ತು. ಟಿನ್ ಶೀಟ್ ಮತ್ತು ಬಿದಿರು, ಕಬ್ಬಿಣದ ರಾಡ್‌ಗಳನ್ನು ಬಳಸಿ ಪೆಂಡಾಲ್ ನಿರ್ಮಿಸಲಾಗಿತ್ತು. ಪೆಂಡಾಲ್‌ನೊಳಗೆ ಸಿಲುಕಿಕೊಂಡ ವಿದ್ಯಾರ್ಥಿಗಳನ್ನು ಅಧ್ಯಾಪಕರು ಹಾಗು ಅಲ್ಲಿ ನೆರೆದಿದ್ದ ಸ್ಥಳೀಯರು ಮೇಲಕ್ಕೆತ್ತಿ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದರು.
ಗಂಭೀರ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನಕ್ಕೆ ಸಂಬಂಧಪಟ್ಟ ಮಾದರಿಗಳು ಚದುರಿ ಹೋಗಿದ್ದು, ಹಾನಿಗೀಡಾಗಿದೆ. ಪೆಂಡಾಲ್ ಕುಸಿಯಲು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.