ಕನ್ನಡ ಸಾಹಿತಿಗಳ ಮನೆ ಸಂದರ್ಶಿಸುವುದೆಂದರೆ ನಮಗೆಲ್ಲ ಎಲ್ಲಿಲ್ಲದ ಉತ್ಸಾಹ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳನ್ನು ಅರಿಯದವರಿದ್ದಾರೆಯೇ? ಸಾಹಿತ್ಯದಲ್ಲಿ ಇಂದಿಗೂ ಭದ್ರವಾಗಿ ನೆಲೆಯೂರಿ ಕನ್ನಡಿಗರ ಮನದಲ್ಲಿ ಇಂದಿಗೂ ಹಚ್ಚಹಸುರಾಗಿರುವ ಹೆಸರು ಪೈಗಳದ್ದು. ಮಂಜೇಶ್ವರದಲ್ಲಿರುವ ಪೈಗಳ ಮನೆ ಸಂದರ್ಶಿಸಬೇಕೆಂದು ತೀರ್ಮಾನಿಸಿ ತಿಂಗಳುಗಳೇ ಕಳೆದಿದ್ದುವು. ಆದರೆ, ಹಲವು ಕಾರಣಗಳಿಂದ ಸಂದರ್ಶನಕ್ಕೆ ತೊಡಕುಂಟಾಗುತ್ತಿತ್ತು.ಕೊನೆಗೊಂದು ದಿನ ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಮಂಜೇಶ್ವರಕ್ಕೆ ಹೋಗಿಯೇ ಬರಬೇಕೆಂದು ದಿನ ನಿಗದಿಪಡಿಸಿದೆವು. ನಿಗದಿಪಡಿಸಿದ ದಿನದಂದು ಎಲ್ಲ ರೂ ಮಂಜೇಶ್ವರದಲ್ಲಿ ಜೊತೆಯಾದೆವು. ಸ್ವತಃ ಕಾಸರಗೋಡಿನವಳಾದರೂ ಇದುವರೆಗೆ ಪೈಗಳ ಮನೆ ಸಂದರ್ಶಿಸುವ ಭಾಗ್ಯ ನನಗೊದಗಿ ಬಂದಿರಲಿಲ್ಲ. ಆದ್ದರಿಂದ ಪೈಗಳ ಮನೆಯೂ ತಿಳಿದಿರಲಿಲ್ಲ. ಮನೆ ಹುಡುಕಲು ಹೆಚ್ಚು ಕಷ್ಟಪಡಬೇಕಾಗಿಯೂ ಬರಲಿಲ್ಲ ಬಿಡಿ. ಆಟೋರಿಕ್ಷಾದ ಮೊರೆಹೊಕ್ಕು ಪೈಗಳ ಮನೆ ತಲುಪಿಯೇ ಬಿಟ್ಟೆವು. ಆಟೋದಿಂದ ಇಳಿದ ನಮಗೆ ಅಚ್ಚರಿ ಕಾದಿತ್ತು. ಪೈಗಳ ಮನೆಯು ಭವ್ಯವಾಗಿ ಕಂಗೊಳಿಸುತ್ತಿತ್ತು. ಮನೆಯೊಳಗೆ ಪ್ರವೇಶಿಸುವ ತವಕ ಎಲ್ಲರಲ್ಲೂ ಎದ್ದು ನಿಂತಿತ್ತು.
ಮನೆಯ ಮುಂಭಾಗದ ಛಾವಣಿಯಲ್ಲಿ ಪೈಗಳ ಭವ್ಯವಾದ ಮೂರ್ತಿ ಕಣ್ಮನ ಸೂರೆಗೊಳಿಸಿತು. ಒಳಹೋದವರೇ ಅಲ್ಲಿದ್ದವರಲ್ಲಿ ನಮ್ಮ ಪರಿಚಯ ಹೇಳಿಕೊಂಡೆವು. ಮನೆಯೊಳಗೆ ಹೊಕ್ಕಾಗ ಹಲವಾರು ಹೊತ್ತಗೆಗಳನ್ನು ಹೊತ್ತ ಕಪಾಟುಗಳಿದ್ದುವು. ಅದರಲ್ಲಿ ಮಲಯಾಳ, ಕನ್ನಡ ಹೀಗೆ ಬಗೆಬಗೆಯ ಪುಸ್ತಕಗಳಿದ್ದುವು. ಮತ್ತೂ ಒಳಹೊಕ್ಕಾಗ ಅಂದವಾದ ಕಲಾಕೃತಿಗಳನ್ನು ಹೊಂದಿದ ಬಾಗಿಲೊಂದರ ಮೇಲೆ “ಯಕ್ಷದೇಗುಲ’ ಎಂದು ಬರೆದಿತ್ತು.ಎಲ್ಲರ ಮನದಲ್ಲೂ ಒಂದೇ ಪ್ರಶ್ನೆ, “ಇದರೊಳಗೇನಿರಬಹುದು?’ ಎಂದು. ಕೊನೆಗೂ ಬಾಗಿಲು ತೆರೆದು ಒಳಹೊಕ್ಕ ನಮಗೆ ವಿಸ್ಮಯ ಕಾದಿತ್ತು. ಹಲವು ತರದ ಯಕ್ಷಗಾನ ವೇಷಗಳು, ಮುಖವರ್ಣಿಕೆಯ ಮಾದರಿಗಳು, ಯಕ್ಷಗಾನದಲ್ಲಿ ಉಪಯೋಗಿಸುವ ಆಯುಧಗಳು, ಆಭರಣಗಳ ಆಗರ. ಈ ಕೋಣೆಯೊಳಗಿನ ಸೌಂದರ್ಯ ನಮ್ಮ ಮನಸ್ಸಿಗೂ ಕಣ್ಣಿಗೂ ಹಬ್ಬವನ್ನುಂಟುಮಾಡಿ ನಮ್ಮನ್ನು ಹೊರಬರದಂತೆ ಅಲ್ಲೇ ಬಂಧಿಸಿತು.
-ತೇಜಶ್ರೀ ಶೆಟ್ಟಿ
ತೃತೀಯ ಪತ್ರಿಕೋದ್ಯಮ
ಮಂಗಳೂರು ವಿ. ವಿ.