Advertisement

ಸಿದ್ದೇಶ್ವರ್‌ ಗೆಲುವಿನ ಬೌಂಡ್ರಿಗೆ ಕಾಂಗ್ರೆಸ್‌ನ ಮಂಜಪ್ಪ ಗೂಗ್ಲಿ

09:35 AM Apr 17, 2019 | Lakshmi GovindaRaju |

ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರ ಸದ್ಯ ಬಿಜೆಪಿಯ ಭದ್ರಕೋಟೆ. ಶಾಮನೂರು-ಭೀಮಸಮುದ್ರದ ಉದ್ಯಮಿ ಬೀಗರ ಮಧ್ಯೆ ಕಳೆದ 6 ಚುನಾವಣೆಗಳಲ್ಲೂ ನಡೆದ ನೇರ ಹಣಾಹಣಿಗೆ ಬ್ರೇಕ್‌ ಬಿದ್ದಿರುವುದೇ ಈ ಬಾರಿಯ ವಿಶೇಷ. ಹಾಗಾಗಿ ಹ್ಯಾಟ್ರಿಕ್‌ ಗೆಲುವಿನಿಂದ ಬೀಗುತ್ತಿರುವ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ಗೆ ಕಾಂಗ್ರೆಸ್‌ನ ಎಚ್‌.ಬಿ. ಮಂಜಪ್ಪ ಈ ಚುನಾವಣೆಯಲ್ಲಿ ಆಕಸ್ಮಿಕ ಎದುರಾಳಿ.

Advertisement

1991ರಲ್ಲಿ ಸ್ವಲ್ಪ ಮತಗಳ ಅಂತರದಲ್ಲಿ ಸೋತ ಬಿಜೆಪಿ ನಂತರ ಗಟ್ಟಿಯಾಗಿ ನೆಲೆಯೂರಿದೆ. ಆ ನಂತರ ನಡೆದ ಚುನಾವಣೆಗಳಲ್ಲಿ ಬಿಜೆಪಿ ಐದು, ಕಾಂಗ್ರೆಸ್‌ ಒಂದು ಬಾರಿ ಗೆದ್ದಿದೆ. 1996ರಲ್ಲಿ ಕಾಂಗ್ರೆಸ್‌ ಕೋಟೆ ಛಿದ್ರಗೊಳಿಸಿ ಪ್ರಥಮ ಬಾರಿಗೆ ಬಿಜೆಪಿಯ ವಿಜಯ ಪತಾಕೆ ಹಾರಿಸಿದ್ದು ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ. 1998ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ವಿರುದ್ಧ ಪರಾಭವಗೊಂಡರೂ ಮರುವರ್ಷವೇ ನಡೆದ ಚುನಾವಣೆಯಲ್ಲಿ ಪುನಃ ಶಾಮನೂರು ಅವರನ್ನೇ ಮಲ್ಲಿಕಾರ್ಜುನಪ್ಪ ಮಣಿಸಿದರು.

ನಂತರ ಕ್ಷೇತ್ರದಲ್ಲಿ ಅಪ್ಪಂದಿರ ನಡುವಿನ ಸಮರ ಮಕ್ಕಳಿಗೆ ಶಿಫ್ಟ್‌ ಆಯಿತು. ಜಿ.ಮಲ್ಲಿಕಾರ್ಜುನಪ್ಪ ಅವರ ಪುತ್ರ ಜಿ.ಎಂ.ಸಿದ್ದೇಶ್ವರ್‌ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಧ್ಯೆ 3 (2004, 2009, 2014) ಬಾರಿ ನಡೆದ ತೀವ್ರ ಪೈಪೋಟಿಯಲ್ಲೂ ಜಿ.ಎಂ.ಸಿದ್ದೇಶ್ವರ್‌ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿಸಿದರು. ಈ ಬಾರಿಯೂ ಸಿದ್ದೇಶ್ವರ್‌ ಬೌಂಡರಿ ಬಾರಿಸುವ ಹುಮ್ಮಸ್ಸಲ್ಲಿದ್ದಾರೆ.

ಕೈ ಪಡೆಗೆ ಆಘಾತ: ಈ ಚುನಾವಣೆಯಲ್ಲೂ ಸಿದ್ದೇಶ್ವರ್‌ಗೆ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆಂಬ ನಿರೀಕ್ಷೆಯಿತ್ತು. ಅದಕ್ಕಾಗಿಯೇ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಕೆಲವೆಡೆ ಸಭೆ ನಡೆಸಿ, ಪ್ರಚಾರ ಸಹ ಕೈಗೊಂಡಿದ್ದರು. ಆದರೆ, ಮಲ್ಲಿಕಾರ್ಜುನ್‌ ಸ್ಪರ್ಧೆಗೆ ಒಲವು ತೋರದ್ದರಿಂದ ಶಾಮನೂರು ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಅಭ್ಯರ್ಥಿ ಎಂದು ಪ್ರಕಟಿಸಿತು. ಅವರೂ ಟಿಕೆಟ್‌ ನಿರಾಕರಿಸಿದ್ದರಿಂದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಬಯಸದೇ ಬಂದ ಭಾಗ್ಯ ಎಂಬಂತೆ ಕೊನೇ ಕ್ಷಣದಲ್ಲಿ ಹುರಿಯಾಳಾಗಿದ್ದಾರೆ.

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸ್ಪರ್ಧಿಸಲಿದ್ದಾರೆಂದು ರಣೋತ್ಸಾಹದಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅವರು ಸ್ಪರ್ಧಿಸುವುದಿಲ್ಲ ಎಂಬ ಸುದ್ದಿ ಜೀರ್ಣಿಸಿಕೊಳ್ಳಲಾಗಲಿಲ್ಲ. ಸತತ ಸೋಲಿನ ಸೇಡು ತೀರಿಸಿಕೊಳ್ಳಲು ಸನ್ನದ್ಧವಾಗಿದ್ದ ಕೈ ಪಡೆಗೆ ಒಂದು ರೀತಿ ಆಘಾತ ತಂದಿತು. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಮಲ್ಲಿಕಾರ್ಜುನ ಅವರನ್ನೇ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿ, ಅವರಿಗೆ ಅಭ್ಯರ್ಥಿ ಗೆಲ್ಲಿಸುವ ಹೊಣೆ ಹೊರಿಸಿದೆ.

Advertisement

ಹಾಗಾಗಿ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್‌ನಿಂದ ಕುರುಬ ಸಮುದಾಯದ ಚೆನ್ನಯ್ಯ ಒಡೆಯರ್‌ ಹ್ಯಾಟ್ರಿಕ್‌ ಜಯ ಸಾಧಿಸಿ, ದಾಖಲೆ ನಿರ್ಮಿಸಿದ್ದರು. 23 ವರ್ಷಗಳ ನಂತರ ಈ ಬಾರಿ ಅದೇ ಸಮುದಾಯದ ಎಚ್‌.ಬಿ. ಮಂಜಪ್ಪಗೆ ಟಿಕೆಟ್‌ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಯಾಗಿ ಆಡಳಿತದ ಅನುಭವ ಇರುವ ಮಂಜಪ್ಪ ಅಹಿಂದ ವರ್ಗದ ಮತ ಸೆಳೆಯುವಲ್ಲಿ ಯಶಸ್ವಿಯಾದರೆ ಪ್ಲಸ್‌ ಪಾಯಿಂಟ್‌ ಆಗಲಿದೆ.

ಮೋದಿ ಅಲೆ, ಅಭಿವೃದ್ಧಿ ಜಪ: 5 ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಜಿಲ್ಲೆಯಲ್ಲಿ ಕೆಲವು ಯೋಜನೆ ಜಾರಿಯಾಗಿವೆ. ಆದರೆ, ಜ್ವಲಂತ ಸಮಸ್ಯೆಗಳೇನೂ ಬಗೆಹರಿದಿಲ್ಲ. ಇತ್ತೀಚೆಗಂತೂ ಅಭಿವೃದ್ಧಿ ವಿಚಾರದ ಸಂಬಂಧ ಬಿಜೆಪಿ-ಕಾಂಗ್ರೆಸ್‌ ನಾಯಕರು ಪರಸ್ಪರ ಕೆಸರೆರಚಾಡಿಕೊಂಡಿದ್ದೇ ಹೆಚ್ಚು. ಆರೋಪ-ಪ್ರತ್ಯಾರೋಪ, ನಿಂದನೆ ವೈಯಕ್ತಿಕ ಮಟ್ಟಕ್ಕೂ ತಲುಪಿದ್ದು ವಿಪರ್ಯಾಸ.

ಪ್ರಧಾನಿ ಮೋದಿ ಅಲೆ, ಕೇಂದ್ರದ ಯೋಜನೆ, ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಬಿಜೆಪಿ ಮುಖಂಡರು ಕ್ಷೇತ್ರಾದ್ಯಂತ ಸುತ್ತಾಡುತ್ತಿದ್ದಾರೆ. ಜತೆಗೆ ಸಿದ್ದೇಶ್ವರ್‌ ಇದೇ ನನ್ನ ಕೊನೆಯ ಸ್ಪರ್ಧೆ ಎಂದು ಹೇಳಿದ್ದಾರೆ. ಮೇಲಾಗಿ ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ 2-3 ಬಾರಿ ಭೇಟಿ ನೀಡಿದ್ದಾರೆ. ಇನ್ನು ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ನಲ್ಲೂ ಬಿಜೆಪಿಯದ್ದೇ ಪಾರಮ್ಯ. ಒಂದು ರೀತಿ ಕ್ಷೇತ್ರದಲ್ಲಿ ಕಮಲದ ಅಧಿಪತ್ಯ ಹಾಗೂ ನರೇಂದ್ರ ಮೋದಿ ಅಲೆ ಬಿಜೆಪಿ ಅಭ್ಯರ್ಥಿಗೆ ಪ್ಲಸ್‌ ಪಾಯಿಂಟ್‌.

ಮೈತ್ರಿಗೆ ಕಾರ್ಮೋಡ: ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಮಂಜಪ್ಪ ಕಣಕ್ಕಿಳಿದಿದ್ದರೂ ಜೆಡಿಎಸ್‌ನ ಪ್ರಮುಖ ನಾಯಕರು ಅಷ್ಟಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಕಾಂಗ್ರೆಸ್‌ ಮುಖಂಡರು ತಮ್ಮನ್ನು ಕಾರ್ಯಕರ್ತರಂತೆ ಕಾಣುತ್ತಿದ್ದಾರೆಂಬ ಬೇಸರವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಪೈಪೋಟಿ ನೀಡಲು ಈ ಬಾರಿಯೂ ಶಾಮನೂರು ಕುಟುಂಬದವರೇ ಯಾರಾದರೂ ಅಭ್ಯರ್ಥಿಯಾಗಬೇಕಿತ್ತೆಂಬುದು ಅವರ ಆಶಯವಾಗಿತ್ತು. ಮುಖ್ಯವಾಗಿ ಮೈತ್ರಿ ಅಭ್ಯರ್ಥಿ ಪರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಇನ್ನೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.

ಕ್ಷೇತ್ರ ವ್ಯಾಪ್ತಿ: ದಾವಣಗೆರೆ ಲೋಕಸಭಾ ವ್ಯಾಪ್ತಿಯಲ್ಲಿ ದಾವಣಗೆರೆ ದಕ್ಷಿಣ-ಉತ್ತರ, ಹರಿಹರ, ಜಗಳೂರು, ಹರಪನಹಳ್ಳಿ, ಹೊನ್ನಾಳಿ, ಮಾಯಕೊಂಡ ಹಾಗೂ ಚನ್ನಗಿರಿ ವಿಧಾನಸಭಾ ಕ್ಷೇತ್ರಗಳಿವೆ. ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ, ಇನ್ನೆರಡಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಕ್ಷೇತ್ರದ ಮತದಾರರು
ಒಟ್ಟು ಮತದಾರರು-16,11,965
ಪುರುಷರು-8,14,413
ಮಹಿಳೆಯರು-7,96,874
ಸೇವಾ ಮತದಾರರು-568
ಇತರರು-110

ಜಾತಿವಾರು ಲೆಕ್ಕಾಚಾರ
ಲಿಂಗಾಯತರು-4,25,700
ಪರಿಶಿಷ್ಟ ಜಾತಿ-3,43,400
ಪರಿಶಿಷ್ಟ ವರ್ಗ-1,96,800
ಮುಸ್ಲಿಮರು-1,96,600
ಕುರುಬರು-1,50,000ಘಿ

* ಎನ್‌.ಆರ್‌.ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next