Advertisement

ಇಂಗ್ಲಿಸ್ನ್ಯಾಗೆ ಹೆಸರು ಬರೆಯಲು ಕಲಿತ ಮಂಜಣ್ಣ!

04:46 PM May 05, 2020 | mahesh |

ನಾನಾಗ ಒಂಬತ್ತನೇ ತರಗತಿಯಲ್ಲಿದ್ದೆ. ರಜೆ ಸಿಕ್ಕರೆ ಸಾಕು, ಊರ ಹೊರಗಿನ ಪ್ರೌಢಶಾಲೆಯ ಅಂಗಳಕ್ಕೆ, ಓದಲೆಂದು ಹೋಗುತ್ತಿದ್ದೆ. ಹೀಗೇ ಒಮ್ಮೆ ಓದಲು ಹೋಗಿದ್ದಾಗ, ದನ ಕಾಯುವವನೊಬ್ಬ, ನೆರಳನ್ನು ಅರಸಿ ನಾನಿದ್ದ ಕಡೆಗೆ ಬಂದ. ಆಗ ತಿಳಿದ ಸಂಗತಿಯೆಂದರೆ, ಅವನ ಹೆಸರು ಮಂಜಪ್ಪ. ಅವನು ಶಾಲೆಯ ಮುಖವನ್ನೇ ನೋಡಿರಲಿಲ್ಲ. ಅವರಪ್ಪ,
ಚಿಕ್ಕಂದಿನಿಂದಲೂ ಬೇರೆಯವರ ಮನೆಯಲ್ಲಿ ಅವನನ್ನು ಸಂಬಳಕ್ಕೆ ಇಟ್ಟಿದ್ದನಂತೆ!

Advertisement

ಅವನನ್ನು ನೋಡಿದಾಗ, ವಿದ್ಯಾ ದಾನ ಶ್ರೇಷ್ಠ ದಾನ, ಕಲಿತ ಋಣವನ್ನು ಕಲಿಸಿ ತೀರಿಸಬೇಕು,  ನಾವು ಮತ್ತೂಬ್ಬರಿಗೆ ಕಲಿಸಿದರೆ, ನಮಗೆಒಳ್ಳೆಯದಾಗುತ್ತದೆ ಎನ್ನುತ್ತಿದ್ದ ನಮ್ಮ ಶಿಕ್ಷಕರ
ಮಾತು ನೆನಪಾಯಿತು. ಅವನಿಗೆ ಹೆಸರು ಬರೆಯುವುದನ್ನು ಕಲಿಸಲು ಬಯಸಿದೆ.

“ನಿನಗೆ ಹೆಸರು ಬರೆಯಲು ಕಲಿಸಲಾ?’ ಎಂದು ಕೇಳಿದೆ. ಅದಕ್ಕವನು ಖುಷಿಯಿಂದ ಒಪ್ಪಿದ. “ಇಂಗ್ಲಿಷಿನಲ್ಲಿ ಕಲಿಸಲಾ ಅಥವಾ ಕನ್ನಡದಲ್ಲಿ ಕಲಿಸಲಾ?’ ಎಂದದ್ದಕ್ಕೆ ಅವನು,
“ಇಂಗ್ಲಿಸಿನಲ್ಲೇ ಕಲಿಸಿ’ ಎಂದ. ಅವನ ಹೆಸರನ್ನು ಇಂಗ್ಲಿಷಿನಲ್ಲಿ, ಕಡಪದ ಕಲ್ಲ ಮೇಲೆಯೇ ಬರೆದೆ. ಅವನು ಕಲಿಯಲು ಎಷ್ಟು ಆಸಕ್ತಿ ತೋರಿಸಿ ದನೆಂದರೆ, ಕೆಲವೇ ಗಂಟೆಯಲ್ಲಿ ಬರಿಯೋದನ್ನ ಕಲಿತೇ ಬಿಟ್ಟ! ಅವನ ಮುಖದಲ್ಲಿ ಮಹತ್ತರ ವಾದುದನ್ನು ಸಾಧಿಸಿದ ಭಾವ ಎದ್ದು ಕಾಣುತ್ತಿತ್ತು! ಮಾರನೇ ದಿನ, ಮಂಜಣ್ಣನ ಹೆಂಡತಿ ನಮ್ಮ ಮನೆಗೆ ಬಂದು, ನನ್ನ ಅಮ್ಮನ ಹತ್ತಿರ “ನನ್ನ ಗಂಡನಿಗೆ ಇಂಗ್ಲಿಸ್ನ್ಯಾಗೆ ಹೆಸರನ್ನ ನಿನ್ನ ಮಗ ಕಲಿಸಿದ್ನಂತೆ, ಆ ರೀತಿ ಮಾಡಬಾರ್ದಿತ್ತು ಕಣಕ್ಕ’ ಎಂದುಬಿಟ್ಟಳು. ಒಳಗಿದ್ದ ನಾನು- “ಇದೇನಪ್ಪಾ, ನಾನು ಮಾಡಿದ್ದು ಒಳ್ಳೇ ಕೆಲಸವಲ್ಲವ?’ ಎಂದುಕೊಳ್ಳುತ್ತಾ, ಹೊರಬಂದು- “ಅಕ್ಕಾ,ಅದರಲ್ಲೇನು ತಪ್ಪು? ಹೆಸರು ಬರೆಯಲು ಕಲಿಸಿದ್ದು ತಪ್ಪಾ?’ ಎಂದು ಮರುಪ್ರಶ್ನಿಸಿದೆ. ಆಕೆ- “ಅಣ್ಣಾ, ನೀನು ಮಾಡಿದ್ದು ಸರಿ. ಆದರೆ ನನ್ನ ಗಂಡ ಹೆಸರು ಬರೆಯಲು ಕಲಿತ ಖುಷಿಗೆ ಮನೆ ನೆಲ, ಗೋಡೆಯನ್ನೆಲ್ಲಾ ಹಾಳು ಮಾಡಿದ್ದಾನೆ’ ಎಂದಳು!

ಅವಳ ಮಾತಿಂದ ಆಶ್ಚರ್ಯ ಆಯಿತು. ಏನಾಯ್ತು ಎಂದು ವಿವರವಾಗಿ ಹೇಳು ಅಂದಾಗ ಅವಳು ಹೇಳಿದ್ದಿಷ್ಟು: “ಹೆಸರು ಬರೆಯಲು ಕಲಿತ ಮಂಜಣ್ಣ, ಮನೆಗೆ ಹೋಗಿ ದನಗಳನ್ನೆಲ್ಲಾ ಕಟ್ಟಿ
ಹಾಕಿದ್ದಾನೆ. ನಂತರ, ಎಣ್ಣೆ ಅಂಗಡಿಗೆ ಹೋಗಿ, ಹೆಸರು ಬರೆಯಲು ಕಲಿತ ಖುಷಿಗೆ, ತುಸು ಹೆಚ್ಚೇ ಕುಡಿದಿದ್ದಾನೆ. ಓಣಿಯಲ್ಲೆಲ್ಲ ತೂರಾಡುತ್ತಾ- “ನಂಗೆ ಇಂಗ್ಲೀಸ್ನ್ಯಾಗೆ ಹೆಸ್ರು ಬರೆಯೋಕೆ
ಬರುತ್ತೆ’ ಎಂದು ಹೇಳಿಕೊಂಡು ಹೋಗಿದ್ದಾನೆ. ಮನೆಗೆ ಹೋಗಿ, ಮಣ್ಣ ನೆಲದ ಮೇಲೆ, ಕಲ್ಲಲ್ಲಿ ಮನೆ ತುಂಬಾ ಹೆಸರನ್ನು ಕೆತ್ತಿದ್ದಾನೆ. ಅಷ್ಟು ಸಾಲದೆಂಬಂತೆ, ಮಣ್ಣ ಗೋಡೆಯ ಮೇಲೂ
ಕಲ್ಲಲ್ಲಿ ಬರೆದಿದ್ದಾನೆ. ಮಡದಿಗೆ “ಏಯ್‌ ನೋಡೇ ಇಲ್ಲಿ, ಇಂಗ್ಲಿಸ್ನ್ಯಾಗೆ ಹೆಸರು ಬರೆಯೋಕೆ ಬರುತ್ತೆ ನಂಗೆ, ನಾ ಬರೆಯೋದ ನೋಡು’ ಅಂತ ಪದೇಪದೆ ಹೇಳಿದ್ದಾನೆ.

ಇದನ್ನೆಲ್ಲಾ ಕೇಳಿದ ಮೇಲೆ, ನಾನು ಯಾಕಾದ್ರೂ ಹೆಸರು ಬರೆಯೋದು ಕಲಿಸಿದ್ನಪ್ಪ ಅನ್ನಂಗೆ ಆಯ್ತು. “ಅವನು ಸಿಕ್ಕರೆ ಇನ್ಮುಂದೆ ಹೀಗೆ ಮಾಡ್ಬೇಡ’ ಅಂತಾ ಹೇಳ್ತಿನಿ ಎಂದು ಹೇಳಿ ಆಕೆಗೆ
ಸಮಾಧಾನ ಮಾಡಿ ಕಳಿಸಿದೆ. ಕೆಲ ದಿನಗಳ ನಂತರ ಸಿಕ್ಕಿದ ಮಂಜಣ್ಣ- “ಹೆಸರು ಬರೆಯಲು ಕಲಿಸಿದ ನಿನ್ನ ಉಪಕಾರವ ನಾನು ಜೀವ ಇರೋವರೆಗೂ ಮರೆಯೋಲ್ಲ ಕಣಣ್ಣಾ’ ಎಂದ.

Advertisement

ಅಲ್ಲದೆ, ಚುನಾವಣೆಯಲ್ಲಿ ವೋಟು ಹಾಕೋಕೆ ಹೋದಾಗ, ಅಲ್ಲಿನ ಸಿಬ್ಬಂದಿ ನನ್ನ ಬಟ್ಟೆ ನೋಡಿ, “ಹೆಬ್ಬಟ್ಟಾ?’ ಅಂತಾ ಕೇಳಿದ್ರು. ನಾನು- “ಇಲ್ಲ, ಹೆಸರು ಬರೀತೇನೆ ಅಂತಾ ಇಂಗ್ಲೀಸ್ನ್ಯಾಗೆ
ಹೆಸ್ರು ಬರೆದೆ. ಅವರಿಗೆಲ್ಲಾ ಆಶ್ಚರ್ಯ ಆಯ್ತು’ ಅಂದ. ಅಂದಿನಿಂದ ಅವನು ಎಲ್ಲೇ ಸಿಗಲಿ, “ನಮಸ್ಕಾರ ಸ್ವಾಮಿ’ ಅನಿ¤ದ್ದ. “ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬ ಮಾತನ್ನು, ಅಕ್ಷರಶಃ
ಅದನ್ನು ತಿಳಿಯದೆಯೇ ಅವನು ಪಾಲಿಸಿದ್ದ. ಆ ಮೂಲಕ ನನಗೆ ವಿದ್ಯೆ ಕಲಿಸಿದ ಖುಷಿಯ ಸಾರ್ಥಕತೆಯನ್ನು ನೀಡಿದ್ದ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next