Advertisement

ಮಂಜಣ್ಣ ಕಾರ್ನರ್‌ ಸ್ಪೆಷಲ್‌

08:30 PM Dec 15, 2019 | Lakshmi GovindaRaj |

“ಬಲ್ಲವನೇ ಬಲ್ಲ ಗೋಳಿ ಬಜೆ ರುಚಿಯ’ ಎಂಬ ಮಾತನ್ನು, ಈ ತಿಂಡಿ ಸವಿದ ಕರಾವಳಿಯವರು ಹೇಳುತ್ತಾರೆ. ದಪ್ಪ ಜಾಮೂನಿನಂತ ಹೊಂಬಣ್ಣದ ಬಿಸಿ ಬಿಸಿ ಗೋಲಿ ಬಜೆಯನ್ನು ಕಾಯಿ ಚಟ್ನಿಯಲ್ಲಿ ಅದ್ದಿ ತಿಂದರೆ ಬಾಯಲ್ಲಿ ನೀರು ಬರೆದಿದ್ದರೆ ಕೇಳಿ. ಅಂತಹ ತಿಂಡಿಯನ್ನು ತಿನ್ನಲು ಕರಾವಳಿಗೆ ಹೋಗಬೇಕಿಲ್ಲ. ಅದು ಶಿವಮೊಗ್ಗದಲ್ಲೂ ಸಿಗುತ್ತೆ. ನಗರದಲ್ಲಿ ಮಂಜುನಾಥ್‌ ಗೋಲಿ ಬಜ್ಜಿ (ಗೋಳಿ ಬಜೆ) ಕಾರ್ನರ್‌ ಎಂದೇ ಹೆಸರುವಾಸಿಯಾಗಿದೆ.

Advertisement

ಮೂಲತಃ ಹೊನ್ನಾಳ್ಳಿಯ ಹಳ್ಳೂರಿನ ಎಚ್‌.ಪಿ. ಮಂಜುನಾಥ್‌ ಶೆಟ್ಟಿ ಚಿಕ್ಕಂದಿನಿಂದಲೂ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಇವರ ತಂದೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಆಯಿಲ್‌ ಮಿಲ್‌ ನಡೆಸುತ್ತಿದ್ದರು. ಅವರು ತೀರಿಕೊಂಡ ನಂತರ ಮಂಜುನಾಥ್‌ ತಮ್ಮ ತಂದೆ ನಡೆಸುತ್ತಿದ್ದ ಆಯಿಲ್‌ ಮಿಲ್‌ ಬಿಟ್ಟು ಈ ಗೋಳಿ ಬಜೆ ಅಂಗಡಿ ಇರುವ ಓಲ್ಡ್‌ ಪೋಸ್ಟ್‌ ಆಫೀಸ್‌ ರಸ್ತೆಯಲ್ಲೇ ದಿನಸಿ ಅಂಗಡಿ ಇಟ್ಟಿದ್ದರು. ಅದರಲ್ಲಿ ನಷ್ಟ ಉಂಟಾದ ಮೇಲೆ, ಒಂದು ತಳ್ಳುವ ಗಾಡಿ ಇಟ್ಟುಕೊಂಡು ಸಂಜೆ ವೇಳೆ ಬೋಂಡಾ, ಬಜ್ಜಿ ಹೀಗೆ… ಕೆಲವು ತಿಂಡಿ ಮಾಡಲು ಶುರು ಮಾಡಿದ್ದರು.

ವಿಶೇಷ ಅಂದ್ರೆ, ಅವರು ಯಾರ ಬಳಿಯೂ ಹೋಗಿ ಈ ತಿಂಡಿ ಮಾಡುವುದನ್ನು ಕಲಿತಿಲ್ಲ. ಅವರೇ ಮನೆಯಲ್ಲಿ, ಅಲ್ಲಿ ಇಲ್ಲಿ ಮಾಡುವುದನ್ನು ನೋಡಿ ಕಲಿತಿದ್ದಾರೆ. ಈಗಲೂ ತಿಂಡಿಗೆ ಬೇಕಾದ ಪದಾರ್ಥ ಹಾಕಿ, ಹೂರಣ ಸಿದ್ಧಪಡಿಸುವುದು 65 ವರ್ಷದ ಮಂಜುನಾಥ್‌ ಅವರೇ. ತಿಂಡಿಯನ್ನು ಕರಿಯುವುದು ಮಾತ್ರ ಮಂಜುನಾಥ್‌ ಅವರ ಪತ್ನಿ ಸುಧಾರಾಣಿ. ಮಾರಾಟದ ಕೆಲಸದಲ್ಲಿ ಮಗ ಸುನಿಲ್‌ಕುಮಾರ್‌ ಮತ್ತು ಸೊಸೆ ಕಾವ್ಯಾರ ನೆರವೂ ಮಂಜುನಾಥ್‌ ದಂಪತಿಗಿದೆ.

ತಿಂಡಿ ದರ ಕೇವಲ 10 ರೂ.: ಸದ್ಯ ಈರುಳ್ಳಿ, ಎಣ್ಣೆ, ಕಡಲೇ ಹಿಟ್ಟು ಹೀಗೆ… ತಿಂಡಿಗೆ ಬಳಸುವ ಪದಾರ್ಥಗಳ ಬೆಲೆ ಗಣನೀಯವಾಗಿ ಏರಿಕೆ ಆಗಿದೆ. ಲಾಭದಲ್ಲಿ ಕಡಿಮೆ ಆದ್ರೂ ಪರವಾಗಿಲ್ಲ. ಗ್ರಾಹಕರಿಗೆ ಹೊರೆಯಾಗಬಾರದು ಎಂದು ಈಗಲೂ ತಿಂಡಿ ದರವನ್ನು 10 ರೂ. ಇಡಲಾಗಿದೆ.

ಗ್ರಾಹಕರ ತೃಪ್ತಿ ಮುಖ್ಯ: ಇಲ್ಲಿ ಲಾಭ ನಷ್ಟಕ್ಕಿಂತ ಮುಖ್ಯವಾಗಿ ಗ್ರಾಹಕರ ತೃಪ್ತಿ ಮುಖ್ಯ. ಇಲ್ಲಿ ತಿಂಡಿ ತಿಂದು “ಚೆನ್ನಾಗಿದೆ’ ಎಂದು ಹೇಳಿದ್ರೆ ಅಷ್ಟು ಸಾಕು ಎನ್ನುತ್ತಾರೆ ಮಂಜುನಾಥ್‌.

Advertisement

ಸಿಗುವ ತಿಂಡಿ: ಮಸಾಲ ಮಂಡಕ್ಕಿ, ಬೋಟಿ ಮಸಾಲ, ಕಾರ್ನ್ ಪ್ಲೆಕ್ಸ್‌ ಮಸಾಲ, ಬೂಂದಿ ಮಸಾಲ, ನಿಪ್ಪಟ್ಟು ಮಸಾಲ, ಸೌತೆಕಾಯಿ ಮಸಾಲ, ಟೊಮೆಟೋ ಮಸಾಲ, ಹೆಸರು ಕಾಳು ಮಸಾಲ, ಮೆಣಸಿನ ಕಾಯಿ ಬೋಂಡಾ ಮಸಾಲ, ಗೋಳಿ ಬಜೆ, ಈರುಳ್ಳಿ ಬೋಂಡಾ, ಕಡಲೆ ಬೇಳೆ ವಡೆ, ಮೆಣಸಿನಕಾಯಿ ಬೋಂಡಾ, ಜೀರಾ ಸೋಡಾ ಮಸಾಲ. ಖಾರಾ, ಬನ್‌ ಮಸಾಲ, ಹೀಗೆ ಹಲವು ತಿಂಡಿಗಳು ಸಿಗುತ್ತವೆ. ದರ ಕೇವಲ 10 ರೂ.

ಅಚ್ಚುಮೆಚ್ಚಿನ ತಿಂಡಿ ಗೋಳಿ ಬಜೆ: ಪ್ರತಿ ದಿನ ಇಲ್ಲಿ 17 ಬಗೆಯ ಮಸಾಲ ತಿಂಡಿಗಳನ್ನು ಮಾಡ್ತಾರೆ. ಅದರಲ್ಲಿ, ಗೋಳಿ ಬಜೆ ಮತ್ತು ಅದರ ಜೊತೆಗೆ ಕೊಡುವ ಚಟ್ನಿ ಗ್ರಾಹಕರಿಗೆ ಅಚ್ಚುಮೆಚ್ಚು. ಕರಾವಳಿಯಲ್ಲಿ ಮಾಡುವ ಗೋಳಿ ಬಜೆ ರೀತಿಯಲ್ಲೇ ಇಲ್ಲೂ ಮಾಡ್ತಾರೆ. ಆದರೆ, ಮೃದು ಸ್ವಲ್ಪ ಕಡಿಮೆ ಇದ್ದರೂ ರುಚಿ ಮಾತ್ರ ಕಡಿಮೆ ಇಲ್ಲ. ಅಲ್ಲದೆ, ಇಲ್ಲಿ ಕಾಯಿ ಚಟ್ನಿ ಕೊಡಲ್ಲ. ಟೊಮೆಟೋ, ಬೆಲ್ಲ, ಹುಣಸೇ ರಸ, ಒಣಮೆಣಸಿನಕಾಯಿ ಹಾಕಿ ಮಾಡಿದ ಚಟ್ನಿಯನ್ನು ಕೊಡ್ತಾರೆ. ಇದನ್ನು ಗೋಳಿ ಬಜೆಗಾಗಿಯೇ ವಿಶೇಷವಾಗಿ ಮಾಡಲಾಗುತ್ತೆ.

ಕಾರ್ನರ್‌ ತೆರೆಯುವ ಸಮಯ: ಸಂಜೆ 4.30ರಿಂದ ರಾತ್ರಿ 10.30ರವರೆಗೆ, ಭಾನುವಾರ ರಜೆ.

ಕಾರ್ನರ್‌ನ ವಿಳಾಸ: ಓಲ್ಡ್‌ ಪೋಸ್ಟ್‌ ಆಫೀಸ್‌(ಓ.ಪಿ. ರೋಡ್‌) ರಸ್ತೆ, ಶಿವಮೊಗ್ಗ ನಗರ. (ಕೃಷ್ಣ ಕೆಫೆಯಿಂದ ಸ್ವಲ್ಪ ಡೌನ್‌ಗೆ ಬಂದ್ರೆ ಸಿಗುತ್ತೆ)

* ಭೋಗೇಶ ಆರ್‌.ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next