ಸಾಗರ: ಯುದ್ಧಗ್ರಸ್ತ ಉಕ್ರೇನ್ ದೇಶದ ಕೀವ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಸಾಗರದ ಅಣಲೇಕೊಪ್ಪದ ಮನಿಷಾ ಮಂಗಳವಾರ ರಾಜ್ಯ ತಲುಪಿದ್ದು, ಬೆಂಗಳೂರಿನಿಂದ ಸಾಗರಕ್ಕೆ ಪ್ರಯಾಣ ಆರಂಭಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಮನಿಷಾ, ಗಡಿಭಾಗದ ಲಿವೀವ್ ನಗರವನ್ನು ಭಾನುವಾರ ತಲುಪಿದ್ದೆ. ಸೋಮವಾರ ಗಡಿ ದಾಟಿ ಪೋಲ್ಯಾಂಡ್‌ಗೆ ಬಂದಿದ್ದೆ. ಪೋಲ್ಯಾಂಡಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಅಗತ್ಯ ವ್ಯವಸ್ಥೆ, ಸೌಲಭ್ಯ ಸಿಕ್ಕಿದೆ. ಅಲ್ಲದೆ ಪೋಲ್ಯಾಂಡ್ ಗಡಿ ಭಾಗದ ನಿವಾಸಿಗಳು ಸಹ ಆಹಾರ ಮತ್ತಿತರ ತುರ್ತು ನೆರವು ನೀಡಿ ಮಾನವೀಯ ಸಹಕಾರ ಒದಗಿಸಿದ್ದಾರೆ ಎಂದರು.
ವಿಮಾನ ಯಾನ ಆರಂಭಿಸಿದ್ದ ಮನಿಷಾ ಬುಧವಾರ ನವದೆಹಲಿ ತಲುಪಿದ್ದರು. ಮತ್ತೆ ವಿಮಾನ ಪ್ರಯಾಣದಲ್ಲಿ ಸಂಜೆಯ ವೇಳೆಗೆ ಬೆಂಗಳೂರು ತಲುಪಿದ್ದಾರೆ. ಬೆಂಗಳೂರಿನಲ್ಲಿ ಕುಟುಂಬದ ಸಹೋದರರು ಬರಮಾಡಿಕೊಂಡಿದ್ದಾರೆ.
ಮನಿಷಾ ಅವರ ಪ್ರಯಾಣದ ಕುರಿತು ಮಾಹಿತಿ ನೀಡಿದ ಕುಟುಂಬದ ಹಿತೈಷಿ ಮೃತ್ಯುಂಜಯ ಮಾತನಾಡಿ, ಮಾಧ್ಯಮಗಳ ಸಹಕಾರದಿಂದ ಮತ್ತು ಮನಿಷಾ ಅವರ ಆತ್ಮವಿಶ್ವಾಸದಿಂದ ಅವರ ಪ್ರಯಾಣ ಸುಖಾಂತವಾಗಿದೆ. ಬೆಂಗಳೂರಿನಿಂದ ಸಾಗರಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವಂತೆ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಎಚ್.ಹಾಲಪ್ಪ ಅವರ ಆಪ್ತ ವಲಯದವರು ವ್ಯವಸ್ಥೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ : ನ್ಯೂಜಿಲೆಂಡ್‌ನಲ್ಲಿ ಸಿಡಿದೆದ್ದ ಜನತೆ ; ಲಸಿಕೆ ಕಡ್ಡಾಯ ವಿರುದ್ಧ ಭಾರೀ ಪ್ರತಿಭಟನೆ