ಕೊಲಂಬೋ: ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಗಾಗಿ ಟೀಂ ಇಂಡಿಯಾ ತಂಡ ಸಿದ್ದತೆ ನಡೆಸುತ್ತಿದೆ. ಶಿಖರ್ ಧವನ್ ನೇತೃತ್ವದ ತಂಡ ತನ್ನ ಮೊದಲ ಇಂಟ್ರಾ ಸ್ಕ್ವಾಡ್ ಪಂದ್ಯವನ್ನು ಸೋಮವಾರ ಆಡಿದೆ.
ಭಾರತ ಬಳಗದಲ್ಲೇ ಎರಡು ತಂಡಗಳನ್ನು ರಚಿಸಿ ಪಂದ್ಯ ನಡೆಸಲಾಗಿದೆ. ಒಂದು ಪಂದ್ಯಕ್ಕೆ ಶಿಖರ್ ಧವನ್ ನೇತೃತ್ವ ವಹಿಸಿದ್ದರೆ ಮತ್ತೊಂದು ತಂಡಕ್ಕೆ ಭುವನೇಶ್ವರ್ ಕುಮಾರ್ ನಾಯಕತ್ವವಿತ್ತು.
ಧವನ್ ಬಳಗ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಮನೀಷ್ ಪಾಂಡೆ 45 ಎಸೆತಗಳಲ್ಲಿ 63 ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ 30 ರನ್ ಗಳಿಸಿದ್ದಾರೆ. ಭುವನೇಶ್ವರ್ ಕುಮಾರ್ 23 ರನ್ ನೀಡಿ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:ಗಿಲ್ ಬದಲಿಗೆ ಇಂಗ್ಲೆಂಡ್ ಸರಣಿಗೆ ಮತ್ತಿಬ್ಬರು ಆರಂಭಿಕರು: ಪಡಿಕ್ಕಲ್ ಹೆಸರೂ ಪಟ್ಟಿಯಲ್ಲಿ
ಗುರಿ ಬೆನ್ನತ್ತಿದ ಭುವಿ ಬಳಗ 17 ಓವರ್ ಗಳಲ್ಲಿ ವಿಜಯ ಸಾಧಿಸಿತು. ಪೃಥ್ವಿ ಶಾ ಮತ್ತು ದೇವದತ್ತ ಪಡಿಕ್ಕಲ್ ಮೊದಲ ವಿಕೆಟ್ ಗೆ 60 ರನ್ ಕಲೆ ಹಾಕಿದರೆ, ಸೂರ್ಯ ಕುಮಾರ್ ಯಾದವ್ ಅರ್ಧ ಶತಕ ಬಾರಿಸಿದರು.
ಭಾರತ ತಂಡ ಶ್ರೀಲಂಕಾ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ. ಕೊಹ್ಲಿ ನೇತೃತ್ವದ ಪ್ರಮುಖ ತಂಡ ಇಂಗ್ಲೆಂಡ್ ನಲ್ಲಿರುವ ಕಾರಣ ಶಿಖರ್ ಧವನ್ ನೇತೃತ್ವದಲ್ಲಿ ಯುವ ಆಟಗಾರರ ತಂಡವನ್ನು ಲಂಕಾಗೆ ಕಳುಹಿಸಲಾಗಿದೆ.