ನವದೆಹಲಿ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶನಿವಾರ ತಿಹಾರ್ ಜೈಲಿನಿಂದ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ತಮ್ಮ ನಿವಾಸಕ್ಕೆ ಆಗಮಿಸಿದರು.
ಬಂಧನದಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಧ್ಯಂತರ ಪರಿಹಾರವನ್ನು ಪಡೆದಿದ್ದು, ಅವರಿಗೆ ಜೂ. 3 ರಂದು ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ದೆಹಲಿ ಹೈಕೋರ್ಟ್ ಶುಕ್ರವಾರ ಅವಕಾಶ ನೀಡಿತ್ತು.
ಸಿಸೋಡಿಯಾ ಅವರನ್ನು ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭದ್ರತೆಯಲ್ಲಿ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಸಂಜೆ 5 ಗಂಟೆಗೆ ಮತ್ತೆ ಜೈಲಿಗೆ ಹಿಂತಿರುಗಬೇಕು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸೋಡಿಯಾ ಅವರು ತಮ್ಮ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ. ಅವರು ಇಂಟರ್ನೆಟ್ ಬಳಸಲು ಅಥವಾ ಮಾಧ್ಯಮದೊಂದಿಗೆ ಸಂವಹನ ನಡೆಸಲು ಅನುಮತಿಯಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಮಾರ್ಚ್ 9 ರಂದು ತಿಹಾರ್ ಜೈಲಿನಲ್ಲಿ ಗಂಟೆಗಳ ವಿಚಾರಣೆಯ ನಂತರ ಇಡಿ ಇದೇ ಪ್ರಕರಣದಲ್ಲಿ ಬಂಧಿಸಿತ್ತು.