ನವದೆಹಲಿ : ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಕೇಂದ್ರ ತನಿಖಾ ದಳ ತನಿಖೆ ನೆಪದಲ್ಲಿ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ಆಪ್ ಆರೋಪಿಸಿದೆ.
ಈ ಕುರಿತು ಮಾತನಾಡಿದ ಆಪ್ ಹಿರಿಯ ನಾಯಕ ಸಂಜಯ್ ಸಿಂಗ್ ಅಕ್ರಮ ಅಬಕಾರಿ ನೀತಿಗೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಆಪ್ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರನ್ನು ವಶಕ್ಕೆ ಪಡೆದುಕೊಂಡು ಸುಳ್ಳು ಆರೋಪಗಳನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡುತ್ತಿದ್ದಾರೆ, ಅಲ್ಲದೆ ಖಾಲಿ ಕಾಗದದಲ್ಲಿ ಸಹಿ ಹಾಕುವಂತೆಯೂ ಒತ್ತಾಯ ಮಾಡುತ್ತಿದ್ದಾರೆ ಎಂದು ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಸಿಸೋಡಿಯಾ ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲದೆ ಅಧಿಕಾರಿಗಳು ಸುಖಾ ಸುಮ್ಮನೆ ತನಿಖೆ ನಡೆಸುವ ನಿಟ್ಟಿನಲ್ಲಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಸೋಡಿಯಾ ವಿರುದ್ಧ ಸಿಬಿಐ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಯಾವುದೇ ಪುರಾವೆಗಳು ಸಿಕ್ಕಿರುವ ಕುರಿತು ಸಿಬಿಐ ಅಧಿಕಾರಿಗಳು ಎಲ್ಲೂ ಉಲ್ಲೇಖಿಸಿಲ್ಲ ಅಷ್ಟು ಮಾತ್ರವಲ್ಲದೆ ಅವರ ನಿವಾಸದ ಮೇಲೆ ದಾಳಿ ಮಾಡಿದಾಗಲೂ ಯಾವುದೇ ಪುರಾವೆಗಳು ಸಿಗಲಿಲ್ಲ ಎಂದು ಸಿಂಗ್ ಆರೋಪಿಸಿದ್ದಾರೆ.