Advertisement

ನನಗೆ ಸಿಎಂ ಆಮಿಷ; ಬಿಜೆಪಿ ವಿರುದ್ಧ ಸಿಸೋಡಿಯಾ ಆರೋಪ

09:48 PM Aug 22, 2022 | Team Udayavani |

ಅಹ್ಮದಾಬಾದ್‌/ನವದೆಹಲಿ:”ಆಮ್‌ ಆದ್ಮಿ ಪಕ್ಷವನ್ನು ಒಡೆದು ಹೊರಬಂದರೆ ನನ್ನನ್ನು ದೆಹಲಿ ಮುಖ್ಯಮಂತ್ರಿ ಮಾಡುವ ಭರವಸೆ ನೀಡಲಾಗಿತ್ತು. ಜತೆಗೆ ಕೇಂದ್ರ ತನಿಖಾ ಸಂಸ್ಥೆಗಳು ಸದ್ಯ ನಡೆಸುತ್ತಿರುವ ತನಿಖೆಯಿಂದ ಪಾರು ಮಾಡುವ ವಾಗ್ಧಾನ ನೀಡಲಾಗಿತ್ತು’

Advertisement

– ಹೀಗೆಂದು ಬಿಜೆಪಿ ವಿರುದ್ಧ ಸೋಮವಾರ ಗಂಭೀರ ಆರೋಪ ಮಾಡಿದ್ದು ದೆಹಲಿ ಉಪಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ ಹಿರಿಯ ಮುಖಂಡ ಮನೀಶ್‌ ಸಿಸೋಡಿಯಾ. ದೆಹಲಿ ಅಬಕಾರಿ ನೀತಿಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿದ ಬಳಿಕ ಬಿಜೆಪಿ ಮತ್ತು ಆಪ್‌ ನಡುವೆ ವಾಕ್ಸಮರ ತೀವ್ರಗೊಂಡಿದೆ.

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ ಪ್ರವಾಸ ಕೈಗೊಂಡಿರುವಂತೆಯೇ ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ “ಆಪ್‌ ಅನ್ನು ಒಡೆದು ಬಿಜೆಪಿಗೆ ಬಂದರೆ ಮುಖ್ಯಮಂತ್ರಿ ಮಾಡುವ ಆಮಿಷ ಒಡ್ಡಲಾಗಿತ್ತು. ಇದರ ಜತೆಗೆ ಸಿಬಿಐ, ಇ.ಡಿ.ಗಳಿಂದ ನಡೆಯುವ ಎಲ್ಲಾ ಪ್ರಕರಣಗಳ ತನಿಖೆಯಿಂದ ಪಾರು ಮಾಡುವ ವಾಗ್ಧಾನ ಲಭಿಸಿತ್ತು. ಈ ಬಗ್ಗೆ ನನಗೆ ಸಂದೇಶ ರವಾನೆಯಾಗಿತ್ತು’ ಎಂದು ಪ್ರಕಟಿಸಿದ್ದಾರೆ.

ಆಫ‌ರ್‌ ತಿರಸ್ಕಾರ: ಈ ಆಫ‌ರ್‌ ಅನ್ನು ತಿರಸ್ಕರಿಸಿದ್ದಾಗಿ ಹೇಳಿದ್ದಾರೆ ಸಿಸೋಡಿಯಾ. ಅರವಿಂದ ಕೇಜ್ರಿವಾಲ್‌ ಅವರಿಗೆ ವಂಚನೆ ಮಾಡುವುದಿಲ್ಲ’ ಎಂದಿದ್ದಾರೆ. ಕೇಜ್ರಿವಾಲ್‌ ಅವರು ನನ್ನ ರಾಜಕೀಯ ಗುರು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯೋ ಅಥವಾ ಪ್ರಧಾನಮಂತ್ರಿಯೋ ಆಗಲು ರಾಜಕೀಯಕ್ಕೆ ಬಂದಿಲ್ಲವೆಂದು ಸಿಸೋಡಿಯಾ ಹೇಳಿದ್ದಾರೆ.

ಆಪರೇಷನ್‌ ಕಮಲ ವಿಫ‌ಲ:
ಸಿಬಿಐ ದಾಳಿ ಬಳಿಕ ಇದೇ ಮೊದಲ ಬಾರಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಪ್ರತಿಕ್ರಿಯೆ ನೀಡಿದ್ದಾರೆ. ಸಿಬಿಐ ಮತ್ತು ಇ.ಡಿ.ದಾಳಿ ಆಪರೇಷನ್‌ ಕಮಲದ ಒಂದು ಭಾಗ. ಆದರೆ, ಬಿಜೆಪಿ ಅದರಲ್ಲಿ ವಿಫ‌ಲವಾಗಿದೆ. ಕೇವಲ ಆಪ್‌ ಸರ್ಕಾರ ಪತನಗೊಳಿಸಲು ಮಾಡಿದ ಪ್ರಯತ್ನವಿದು ಎಂದರು.

Advertisement

ನನ್ನ ಬಂಧನವೂ ಆಗಬಹುದು:
“ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಪರ್ಧೆಗೂ ಮುಂದಾಗಿಲ್ಲ ಮತ್ತು ದೇಶದ ಪ್ರಧಾನಿಯಾಗುವ ಹಂಬಲವೂ ಇಲ್ಲ’ ಎಂದರು. ಮುಂದಿನ ಮೂರು ದಿನಗಳಲ್ಲಿ ಮನೀಶ್‌ ಸಿಸೋಡಿಯಾ ಬಂಧನವಾಗಲಿದೆ ಎಂಬ ವರದಿಗಳಿವೆ. ಬಿಜೆಪಿ ಸರ್ಕಾರ ನನ್ನನ್ನೂ ಬಂಧಿಸಬಹುದು. ಇದೆಲ್ಲವೂ ಗುಜರಾತ್‌ ಚುನಾವಣೆಗಾಗಿ ಎಂದರು ಕೇಜ್ರಿವಾಲ್‌.

ಭಾರತ ರತ್ನ ಕೊಡಬೇಕು:
ದೆಹಲಿಯಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಿದ ಮನೀಶ್‌ ಅವರಿಗೆ ಭಾರತ ರತ್ನ ಕೊಡಬೇಕು. ಆದರೆ, ಸಿಬಿಐ ಅವರಿಗೆ ಕಿರುಕುಳ ಕೊಡುತ್ತಿದೆ ಎಂದು ಕೇಜ್ರಿವಾಲ್‌ ಆರೋಪಿಸಿದರು.

ಮೌನವೇ ಸಾಕ್ಷಿ:
ಅಬಕಾರಿ ನೀತಿ ವಿಚಾರದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌ ಮೌನದಿಂದ ಅವರು ಶುದ್ಧಹಸ್ತರಲ್ಲ. ಬದಲಾಗಿ ಕಠೊರ ಅಪ್ರಾಮಾಣಿಕ ಎನ್ನುವುದು ಸಾಬೀತಾಗಿದೆ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಯಾರನ್ನು ಅತ್ಯಂತ ಪ್ರಾಮಾಣಿಕ ಎಂದು ಘೋಷಿಸಿದ್ದಾರೆಯೋ ಅಂಥ ಸತ್ಯೇಂದ್ರ ಜೈನ್‌ ಈಗ ಜೈಲಲ್ಲಿದ್ದಾರೆ. ಅದೇ ಮಾತನ್ನು ಕೇಜ್ರಿವಾಲ್‌ ಅವರು ಸಿಸೋಡಿಯಾ ಅವರಿಗೂ ಹೇಳಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದಂತೆ ದೆಹಲಿ ಸರ್ಕಾರ ಅಬಕಾರಿ ನೀತಿಯನ್ನು ಜಾರಿ ಮಾಡಿಲ್ಲ ಎಂದೂ ಭಾಟಿಯಾ ಅವರು ಆರೋಪಿಸಿದ್ದಾರೆ.

ಆರೋಪ ಸುಳ್ಳು; ಮೊಕದ್ದಮೆ ಹೂಡುವೆ
ದೆಹಲಿ ಅಬಕಾರಿ ನೀತಿ ನಿರೂಪಣೆ ವೇಳೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಕುಟುಂಬ ಸದಸ್ಯರು ಉಪಸ್ಥಿತರಿದ್ದರು ಎಂಬ ಬಿಜೆಪಿ ಸಂಸದ ಪರ್ವೇಶ್‌ ವರ್ಮಾ ಆರೋಪವನ್ನು ಟಿಆರ್‌ಎಸ್‌ ತಿರಸ್ಕರಿಸಿದೆ. ಸಿಎಂ ಚಂದ್ರಶೇಖರ ರಾವ್‌ ಪುತ್ರಿ, ಎಂಎಲ್‌ಸಿ ಕೆ.ಕವಿತಾ ಪ್ರತಿಕ್ರಿಯೆ ನೀಡಿ ಇದೊಂದು ಸುಳ್ಳಿನ ಆರೋಪ ಮತ್ತು ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಜೆಪಿ ಮುಖಂಡರಾಗಿರುವ ಪರ್ವೇಶ್‌ ವರ್ಮಾ ಮತ್ತು ಮಂಜಿಂದರ್‌ ಸಿಂಗ್‌ ಸಿರ್ಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ತನಿಖೆಯಲ್ಲಿ ಅಗತ್ಯ ಬಿದ್ದರೆ ಸಹಕರಿಸುವುದಾಗಿಯೂ ಕೆ.ಕವಿತಾ ಹೇಳಿದ್ದಾರೆ. ಜತೆಗೆ ಈ ವಿಚಾರದಲ್ಲಿ ಮಧ್ಯವರ್ತಿಯಾಗಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next