Advertisement

ಗಡಿನಾಡಿನ ಹುಲಿಗಳಿಗೆ ಬಣ್ಣ ಹಚ್ಚುವ ಮನೀಶ್‌ ಕೂಡ್ಲು

02:31 PM Mar 07, 2018 | Team Udayavani |

ಬದಿಯಡ್ಕ: ಪದ್ಮನಾಭ-ಆಶಾಲತಾ ದಂಪತಿಯ ನಾಲ್ವರು ಪುತ್ರರಲ್ಲಿ ಮೊದಲನೆಯವರಾದ ಮನೀಶ್‌ ಕೂಡ್ಲು ಅವರಿಗೆ ಬಣ್ಣಗಳೆಂದರೆ ಪಂಚಪ್ರಾಣ. ಬಿಳಿಹಾಳೆಯಲ್ಲಿ, ಗೋಡೆಯಲ್ಲಿ ವರ್ಣಗಳ ಚೆಲ್ಲಿ, ತನ್ನ ಕುಂಚದಲ್ಲಿ ಕೈಚಳಕವ ತೋರಿ ಸೃಷ್ಟಿಸುವ ಕಲಾಕೃತಿಗಳ ಆಕರ್ಷಣೆ ಅಪಾರವಾದುದು. ಬಾಲ್ಯದಲ್ಲೇ ಕೈಬೀಸಿ ಕರೆಯುವ ಬಣ್ಣಗಳ ಲೋಕದಲ್ಲಿ ಹೂವರಳಿಸಿ, ತೆಂಗು ಕಂಗುಗಳ ಮಧ್ಯೆ ಪುಟ್ಟ ಮನೆಯ ಸುತ್ತೆಲ್ಲ ಹಸುರ ಚಿತ್ತಾರ ಬಿಡಿಸಿ ನೀಲಬಾನಿನಲ್ಲಿ ಉದಯಿಸುವ ಸೂರ್ಯನ ಬೆಳಕಿನ ತೋರಣ ಬರೆದು ಹಾರುವ ಹಕ್ಕಿಗಳ ಹಿಡಿದಿಟ್ಟು ವಿಸ್ಮಯ ಮೂಡಿಸುವ ಆಸಕ್ತಿಗೆ ಶಿಕ್ಷಕರ ಪ್ರೋತ್ಸಾಹವೇ ಬೆಂಬಲವಾಯಿತು.

Advertisement

ನವರಾತ್ರಿ ಬಂತೆಂದರೆ ಇವರಿಗೆ ಎಲ್ಲಿಲ್ಲದ ಬೇಡಿಕೆ. ಕಾಸರಗೋಡು ಸೇರಿದಂತೆ ಕಣ್ಣೂರು, ಪುತ್ತೂರು, ತಲಶ್ಯೇರಿ, ಮಂಗಳೂರು ಹಾಗೂ ಮುಂಬಯಿ ಮುಂತಾದೆಡೆ ಹುಲಿಕುಣಿತದ ತಂಡಗಳಿಗೆ ಬಣ್ಣ ಹಚ್ಚುವ ಮನೀಶ್‌ ಈಗಾಗಲೇ ಸಾವಿರಾರು ಹುಲಿಕುಣಿತದ ಕಲಾವಿದರ ಮೈಗೆ ಬಣ್ಣ ಹಚ್ಚಿ ಹುಲಿಯ ರೂಪನೀಡಿದ್ದಾರೆ. ಬಣ್ಣಗಳ ಆಯ್ಕೆ ಹಾಗೂ ಅತ್ಯಂತ ವೇಗವಾಗಿ, ಪರಿಣಾಮಕಾರಿಯಾಗಿ, ಆಕರ್ಷಕವಾಗಿ ಹುಲಿವೇಷಗಳನ್ನು ರೂಪಿಸುವ ಮನೀಶ್‌ ಅವರ ಕಲಾಸಾಧನೆ ಪ್ರಶಂಸನೀಯ. ಇದು ಅವರಿಗೆ ಬಲು ಪ್ರಿಯವಾದ ಕೆಲಸವೂ ಹೌದು.

ಹಿಂದೆ ಹುಲಿವೇಷಕ್ಕಾಗಿ ಬಣ್ಣ ಹಚ್ಚುವಾಗ ಮೊಟ್ಟೆಯ ಮೇಲೆ ಬಣ್ಣ ಹಚ್ಚಿ ಅದರಿಂದ ವೇಷಧಾರಿಯ ಶರೀರಕ್ಕೆ ಅಚ್ಚು ಹಾಕಲಾಗುತ್ತಿತ್ತು. ಮೊದಲ ದಿನ ರಾತ್ರಿ ಬಣ್ಣ ಹಚ್ಚಿದರೆ ಮಾತ್ರ ಮರುದಿನಕ್ಕಾಗುವಾಗ ಮೈ ಒಣಗಿ ಕುಣಿತಕ್ಕೆ ಸಜ್ಜಾಗುತ್ತಿದ್ದರೆ ಈಗ ಕಾಲದೊಂದಿಗೆ ಬದಲಾದ ರೀತಿನೀತಿಗಳಂತೆ ಬಣ್ಣಗಳ ಬಳಕೆಯಲ್ಲೂ ಬದಲಾವಣೆ ತರಲಾಗಿದೆ. ಅತ್ಯಂತ ವೇಗವಾಗಿ ಒಣಗುವ, ಹೆಚ್ಚು ಹೊಳಪಿನಿಂದ ಕೂಡಿದ ರಾಸಾಯನಿಕಯುಕ್ತ ಬಣ್ಣಗಳು ಶರೀರದ ಮೇಲೂ ಕೆಟ್ಟ ಪ್ರಭಾವವನ್ನು ಬೀರುವುದು ಕಂಡುಬರುತ್ತದೆ. ಆದರೆ ಬದಲಾದ ಶೆ„ಲಿ ಹಾಗೂ ಆವಿಷ್ಕಾರಗಳು ಕೆಲಸದ ಒತ್ತಡವನ್ನು ಕಡಿಮೆಮಾಡಿರುವುದು ಸುಳ್ಳಲ್ಲ.

ಚಿತ್ರಗಳ ಮೂಲಕ ಜನಮನಗೆದ್ದ ಮನೀಶ್‌ ಅವರ ನೈಪುಣ್ಯವನ್ನು ಗುರುತಿಸಿ ಗೌರವ ಅಭಿನಂದನೆಗಳು ಅರಸಿ ಬರುತ್ತಿರುವುದು ಶುಭ ಸೂಚನೆ. ಗಡಿನಾಡ ಸಾಹಿತ್ಯ ಅಕಾಡೆಮಿಯು ತನ್ನ ಪಯಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಧ್ಯಕ್ಷೆ ವೆಂಕಟಲಕ್ಷ್ಮೀ ಬಸವಲಿಂಗರಾಜು ಅವರು ಈ ಅಪ್ರತಿಮ ಕಲಾವಿದನನ್ನು ಸಮ್ಮಾನಿಸಿದ್ದಾರೆ.

ಬಣ್ಣದ ಲೋಕದಲ್ಲಿ ಕಾಮನಬಿಲ್ಲಿನ ಸೊಬಗಿನೊಂದಿಗೆ ಪತ್ನಿ ದೀಪಾ ಹಾಗೂ ಪುತ್ರ ಇಶಾನ್‌ ಜತೆಯಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಹೊಸೆಯುವ ಈ ಚಿತ್ರ ಕಲಾವಿದನ ಬದುಕು ಬಣ್ಣದ ಹೂಗಳಿಂದ ಸದಾ ನಳನಳಿಸುವಂತಾಗಲಿ.

Advertisement

ವೀಡಿಯೋಗ್ರಾಫರ್‌, ವೀಡಿಯೋ ಎಡಿಟರ್‌
ಮುಂಬಯಿ ಆರ್ಟ್‌ ಗ್ಯಾಲರಿಯಲ್ಲಿ ಎರಡು ವರ್ಷ ದುಡಿದು ತನ್ನ ಅನುಭವ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಂಡ ಇವರು ಉತ್ತಮ ವೀಡಿಯೋಗ್ರಾಫರ್‌ ಹಾಗೂ ವೀಡಿಯೋ ಎಡಿಟರ್‌ ಕೂಡ ಆಗಿದ್ದಾರೆ. ‘ಹಿಂಪೊಂಪು’ಮಲಯಾಳಂ ಆಲ್ಬಂ ಒಂದನ್ನು ನಿರ್ದೇಶಿಸಿದ್ದು ಕೆಲವು ಪ್ರಮುಖ ಆರಾಧನಾಲಯಗಳ ಹಾಗೂ ಕಲಾಕೇಂದ್ರಗಳ ಬಣ್ಣಗಳ ಆಯ್ಕೆಯಲ್ಲೂ ಸಲಹೆಗಾರರಾಗಿಯೂ ಪಾಲ್ಗೊಂಡಿದ್ದಾರೆ. ಚುನಾವಣೆ ಬಂತೆಂದರೆ ಇವರಿಗೆ ಕೈತುಂಬಾ ಕೆಲಸ ಖಚಿತ. ಭಿತ್ತಿ ಚಿತ್ರಗಳು, ಪ್ರಚಾರಕ್ಕಾಗಿ ಪಕ್ಷಭೇದವಿಲ್ಲದೆ ಇವರ ಚಿತ್ರಗಳು ಬಳಕೆಯಾಗುತ್ತವೆ.

ಮನೀಶ್‌ ಕೂಡ್ಲು ಆರನೆ ತರಗತಿಯಿಂದಲೇ ಶಾಲಾಕಲೋತ್ಸವಗಳಲ್ಲಿ ಚಿತ್ರರಚನೆ ಸ್ಪರ್ಧೆಗಳಲ್ಲಿ ಸತತವಾಗಿ ಪ್ರಥಮ ಬಹುಮಾನಗಳನ್ನು ಗಳಿಸುತ್ತಾ ಬಂದಿದ್ದು ಓಯಿಲ್‌ ಪೈಂಟಿಂಗ್‌, ಗೋಡೆಚಿತ್ರ, ಪೆನ್ಸಿಲ್‌ ಡ್ರಾಯಿಂಗ್‌, ಗ್ಲಾಸ್‌ ಪೈಂಟಿಂಗ್‌ ಸೇರಿದಂತೆ ಸುಮಾರು ಹನ್ನೆರಡು ರೀತಿಯ ಚಿತ್ರರಚನೆಗಳು ಇವರಿಗೆ ಕರತಲಾಮಲಕವಾಗಿವೆ. ಫನ್‌ ಆರ್ಟ್ಸ್ ತರಬೇತಿಯನ್ನು ಪಡೆದು ಮೂರು ವರ್ಷ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಓಣಂ ಮುಂತಾದ ವಿಶೇಷ ಸಂದರ್ಭಗಳಲ್ಲಿ ಹೂರಂಗೋಲಿ ಹಾಗೂ ಚಿತ್ರರಚನಾ ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ, ಮುಖ್ಯ ಅತಿಥಿಯಾಗಿಯೂ ಭಾಗವಹಿಸಿದ್ಧಾರೆ .

ಅಖಿಲೇಶ್ ನಗುಮುಗಂ 

Advertisement

Udayavani is now on Telegram. Click here to join our channel and stay updated with the latest news.

Next